






ಜಿಲ್ಲೆಯಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಶಾಂತಿಯುತ, ಶೇ.76.52 ಮತದಾನ

ಕರ್ನಾಟಕ ವಿಧಾನ ಪರಿಷತ್ತಿನ ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ–2026ರ ಗೆ ಸಂಬಂಧಿಸಿದಂತೆ, ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8 ರಿಂಧ ಮಧ್ಯಾಹ್ಯ 4 ಗಂಟೆಯವರೆಗೆ ನಡೆದ ಚುನಾವಣೆಯಲ್ಲಿ ಶೇ.76.52 ರಷ್ಟು ಮತದಾನ ನಡೆದಿದ್ದು, ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ನಡೆಯದೇ, ಸುಗಮ ಮತ್ತು ಶಾಂತಿಯುತವಾಗಿ ಚುನಾವಣೆ ನಡೆಯಿತು.

ಜಿಲ್ಲೆಯಲ್ಲಿ ಬೆಳಗ್ಗೆ 8 ರಿಂದ ಆರಂಭವಾದ ಮತದಾನ ಪ್ರಕ್ರಿಯೆಯಲ್ಲಿ, ಬಿಸಿಲಿನ ತಾಪಮಾನದಿಂದ ರಕ್ಷಿಸಿಕೊಳ್ಳಲು ಆರಂಭದಿಂದಲೇ ಮತಗಟ್ಟೆಗಳಲ್ಲಿ ಸಾಲುಗಟ್ಟಿದ್ದ ಮತದಾರರು, ಶಾಂತಿಯುತವಾಗಿ ಸರದಿಯಲ್ಲಿ ತಮ್ಮ ಮತದಾನ ಹಕ್ಕು ಚಲಾಯಿಸಿದರು.
ಕಾರವಾರದ ಸೈಂಟ್ ಮೈಕಲ್ ಶಾಲೆಯಲ್ಲಿನ ಮತಗಟ್ಟೆಯಲ್ಲಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಹೆಚ್ಚುವರಿ ಪೆÇಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ತಹಸೀಲ್ದಾರ್ ನಿಶ್ಚಲ್ ನರೋನ್ಹ ಅವರು ಸಾರ್ವಜನಿಕರೊಂದಿಗೆ ಸರದಿಯಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.
ಜಿಲ್ಲೆಯಲ್ಲಿ ಬೆಳಗ್ಗೆ 10 ಗಂಟೆಯ ವೇಳೆಗೆ 10.82 ರಷ್ಟು ಮತದಾನವಾಗಿತ್ತು, ಅಂಕೋಲ ತಹಸೀಲ್ದಾರ್ ಕಚೇರಿಯ ಮತಗಟ್ಟೆಯಲ್ಲಿ ಮತದಾರರು ಅತ್ಯುತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿದ್ದು ಮಧ್ಯಾಹ್ನ 12 ರ ವೇಳಗೆ ಕಚೇರಿಯ ಕಂಪೌಂಡ್ ನ ಹೊರಗೂ ಸರದಿಯಲ್ಲಿ ಮತದಾರರು ನಿಂತಿದ್ದರು. ಕುಮಟಾ ತಹಸೀಲ್ದಾರ್ ಕಚೇರಿಯಲ್ಲಿಯೂ ಕೂಡಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಮಧ್ಯಾಹ್ನ 12 ಗಂಟೆಗೆ ಜಿಲ್ಲೆಯಲ್ಲಿ ಶೇ.29.65 ರಷ್ಟು ಮತದಾನವಾಗಿದ್ದು, ಒಟ್ಟು 16039 ಮತದಾರರಲ್ಲಿ 2485 ಪುರುಷರು ಹಾಗೂ 2271 ಮಹಿಳೆಯರು ಮತ ಚಲಾವಣೆ ಮಾಡಿದ್ದರು.
ಮಧ್ಯಾಹ್ನ 2 ಗಂಟೆಯ ವೇಳೆಗೆ ಶೇ.52.09 ರಷ್ಟು ಮತದಾನವಾಗಿದ್ದು, ಒಟ್ಟು 4310 ಪುರುಷರು ಹಾಗೂ 4045 ಮಹಿಳೆಯರು ಮತ ಚಲಾವಣೆ ಮಾಡಿದ್ದರು. ಅಂತಿಮವಾಗಿ ಒಟ್ಟು 16039 ಮತದಾರರಲ್ಲಿ, 6352 ಪುರುಷರು ಮತ್ತು 5921 ಮಹಿಳೆಯರು ಸೇರಿದಂತೆ ಒಟ್ಟು 12,273 ಮಂದಿ ಪದವೀಧರರು ಮತ ಚಲಾಯಿಸಿದರು.
ಹಳಿಯಾಳ ತಹಸೀಲ್ದಾರ್ ಕಚೇರಿಯಲ್ಲಿನ ಮತಗಟ್ಟೆಯಲ್ಲಿ ಗರಿಷ್ಠ ಶೇ.87.43 ರಷ್ಟು ಮತದಾನವಾಗಿದ್ದು, ದಾಂಡೇಲಿಯ ಅಂಬಿಕಾ ನಗರದ ಕೆ.ಹೆಚ್.ಇ.ಪಿ. ಹೈಸ್ಕೂಲ್ ನಲ್ಲಿನ ಮತಗಟ್ಟೆಯಲ್ಲಿ ಕನಿಷ್ಠ ಶೆ.63.64 ಮತದಾನವಾಗಿತ್ತು. ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಗಳನ್ನು ನೇರವಾಗಿ ವೀಕ್ಷಿಸಲು ಜಿಲ್ಲಾಧಿಕಾರಿ ಕಛೇರಿಯಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿತ್ತು.
ಮತಗಟ್ಟೆಗಳಲ್ಲಿ ವಿಶೇಷ ಚೇತನ ಮತದಾರರಿಗಾಗಿ ಗಾಲಿ ಕುರ್ಚಿ ವ್ಯವಸ್ಥೆಯನ್ನು ಸಿದ್ಧತೆಯನ್ನು ಮಾಡಲಾಗಿದ್ದು, ಸಾರ್ವಜನಿಕರಿಗೆ ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ತುರ್ತು ವೈದ್ಯಕೀಯ ನೆರವು ನೀಡಲು ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿತ್ತು.

=================















