






ನದಿ ತಿರುವ ಯೋಜನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಗ್ರಾ.ಪಂ.ಮಟ್ಟದಲ್ಲಿ ಸಂಪರ್ಕ ಸಭೆ

ನದಿ ತಿರುವು ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿ ಬರುವ ನ.3 ರಂದು ಪಟ್ಟಣದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ತಡೆಯ ಪೂರ್ವ ಸಿದ್ಧತಾ ಸಭೆ ಟಿಎಂಎಸ್ ಸಭಾಭವನದಲ್ಲಿ ನಡೆಯಿತು.

ಯಲ್ಲಾಪುರ ರಸ್ತೆ ತಡೆ ಸಂಚಾಲನಾ ಸಮಿತಿ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ನದಿ ತಿರುವು ಯೋಜನೆ ಸ್ಥಗಿತಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ನಮ್ಮ ಹೋರಾಟ ಯಶಸ್ವಿಯಾಗಬೇಕು ಎಂದರು.
ಪ್ರಧಾನ ಸಂಚಾಲಕ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಯೋಜನೆಯಿಂದ ನಮ್ಮ ಪರಿಸರ, ಜನಜೀವನದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಹೋರಾಟದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತೆ ಮಾಡಲು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂಪರ್ಕ ಸಭೆಯನ್ನು ಆಯೋಜಿಸಲಾಗುತ್ತಿದೆ.
ಅಕ್ಟೋಬರ್ 14 ರಂದು ಮಧ್ಯಾಹ್ನ 3 ಕ್ಕೆ ಮಲವಳ್ಳಿಯ ರಾಮಲಿಂಗೇಶ್ವರ ದೇವಸ್ಥಾನದಲ್ಲಿ, ಸಂಜೆ 5 ಕ್ಕೆ ವಜ್ರಳ್ಳಿ ಸೊಸೈಟಿಯ ಸಭಾಭವನದಲ್ಲಿ, 6.30 ಕ್ಕೆ ಚಿನ್ನಾಪುರದ ಚಿನ್ನೇಶ್ವರ ದೇವಸ್ಥಾನದಲ್ಲಿ ಸಭೆ ನಡೆಯಲಿದೆ. ಅಕ್ಟೋಬರ್ 15 ರಂದು ಮಧ್ಯಾಹ್ನ 3 ಕ್ಕೆ ದೇಹಳ್ಳಿ ಸೊಸೈಟಿ ಸಭಾಭವನ, 4.30 ಕ್ಕೆ ಆನಗೋಡ ಸೊಸೈಟಿ ಸಭಾಭವನ, ಸಂಜೆ 6.30 ಕ್ಕೆ ಕಣ್ಣಿಗೇರಿ ಸೊಸೈಟಿ ಸಭಾಭವನ, ರಾತ್ರಿ 8 ಕ್ಕೆ ನಂದೊಳ್ಳಿಯ ಸಾರ್ವಜನಿಕ ಗಜಾನನೋತ್ಸವ ಕಟ್ಟಡದಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ.

16 ರಂದು ಮಧ್ಯಾಹ್ನ 3 ಕ್ಕೆ ಕುಂದರಗಿ ಸೊಸೈಟಿ, 4.30 ಕ್ಕೆ ಉಮ್ಮಚಗಿ ಸೊಸೈಟಿ, 6 ಕ್ಕೆ ಹಿತ್ಲಳ್ಳಿ ಸೊಸೈಟಿ, 7.30 ಕ್ಕೆ ಹಾಸಣಗಿ ಸೊಸೈಟಿ ಸಭಾಭವನದಲ್ಲಿ ಸಭೆ ಏರ್ಪಡಿಸಲಾಗಿದೆ. 18 ರಂದು ಮಧ್ಯಾಹ್ನ 3 ಕ್ಕೆ ಕಿರವತ್ತಿ, ಸಂಜೆ 5 ಕ್ಕೆ ಹುಣಶೆಟ್ಟಿಕೊಪ್ಪ, ಸಂಜೆ 7 ಕ್ಕೆ ಉಪಳೇಶ್ವರದಲ್ಲಿ ಸಭೆ ನಡೆಯಲಿದೆ. ಅಕ್ಟೋಬರ್ 21 ರಂದು 3.30 ಕ್ಕೆ ಮುಂಡಗೋಡ ತಾಲೂಕಿನ ಬೆಡಸಗಾಂವ, ಸಂಜೆ 5 ಕ್ಕೆ ಪಾಳಾದಲ್ಲಿ ಸಭೆ ಆಯೋಜಿಸಲಾಗಿದೆ.
ಅಕ್ಟೋಬರ್ 22 ರಂದು ಮಧ್ಯಾಹ್ನ 3.30 ಕ್ಕೆ ಯಲ್ಲಾಪುರದ ಎಲ್.ಎಸ್.ಎಂ.ಪಿ ಸೊಸೈಟಿ ಸಭಾಭವನದಲ್ಲಿ ಪಟ್ಟಣ ವ್ಯಾಪ್ತಿಯ ಸಂಪರ್ಕ ಸಭೆ ನಡೆಯಲಿದ್ದು, 23 ರಂದು ಮಧ್ಯಾಹ್ನ 3.30 ಕ್ಕೆ ಹಳಿಯಾಳ ತಾಲೂಕಿನ ಭಾಗವತಿ, ಡೌಗಿನಾಲಾ, ಸಾಂಬ್ರಾಣಿ ಭಾಗದಲ್ಲಿ ಸಭೆ ಏರ್ಪಡಿಸಲಾಗಿದೆ. ಎಲ್ಲಾ ಭಾಗದ ಜನರನ್ನು ತಲುಪಿ, ಹೆಚ್ಚಿನ ಸಂಖ್ಯೆಯಲ್ಲಿ ಜನ ಹೋರಾಟದಲ್ಲಿ ಭಾಗವಹಿಸುವ ಮೂಲಕ ಯೋಜನೆಗೆ ಸ್ಪಷ್ಟವಾದ ವಿರೋಧವನ್ನು ಸರ್ಕಾರಕ್ಕೆ ತಲುಪಿಸುವಂತಾಗಬೇಕು ಎಂದರು.
ಹೋರಾಟದ ರೂಪುರೇಷೆಗಳ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಸಂಚಾಲಕ ನರಸಿಂಹ ಸಾತೊಡ್ಡಿ, ರಸ್ತೆ ತಡೆ ಸಮಿತಿಯ ಸಂಚಾಲಕರಾದ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ವಿ.ಟಿ.ಹೆಗಡೆ, ವೆಂಕಟರಮಣ ಭಟ್ಟ ಕಿರಕುಂಭತ್ತಿ, ರವಿ ಭಟ್ಟ ಬಿಡಾರ, ರಾಘವೇಂದ್ರ ಭಟ್ಟ, ರಘುಪತಿ ಹೆಗಡೆ, ನಾಗರಾಜ ಕವಡಿಕೇರಿ, ಕೆ.ಟಿ.ಹೆಗಡೆ, ಶ್ರೀರಾಮ ಲಾಲಗುಳಿ, ಶ್ರೀಧರ ಅಣಲಗಾರ, ಭಾಸ್ಕರ ಸಿದ್ದಿ, ಗೋಪಾಲಕೃಷ್ಣ ಗಾಂವ್ಕರ ಇತರರು ಭಾಗವಹಿಸಿದ್ದರು.

======================















