ಯಕ್ಷಗಾನ ಹಾಗೂ ಹಿಂದೂಸ್ತಾನಿ ಸಂಗೀತ ಪರಂಪರೆಯ ಇಬ್ಬರು ಮೇರು ಸಾಧಕರನ್ನು ಉತ್ತರ ಕನ್ನಡ ಸಾಂಸ್ಕೃತಿಕ ಲೋಕ ಇಂದು ಕಳೆದುಕೊಂಡಿದೆ ಈ ಇಬ್ಬರು ದಿವಂಗತ ಪುಣ್ಯಾತ್ಮರಿಗೆ ಭಗವಂತನು ಸದ್ಗತಿಯನ್ನು ಕರುಣಿಸಲಿ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬ ವರ್ಗ, ಅಪಾರ ಶಿಷ್ಯರು ಹಾಗೂ ಕಲಾಭಿಮಾನಿಗಳಿಗೆ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು, ತಮ್ಮ ಗಂಭೀರ ಕಂಠ, ಸ್ಪಷ್ಟ ವಾಕ್ಸರಣಿ ಹಾಗೂ ಸಾತ್ವಿಕ-ಪ್ರೌಢ ಪಾತ್ರಪೋಷಣೆಯ ಮೂಲಕ ರಂಗಕ್ಕೆ ಅಪೂರ್ವ ತೂಕ ತಂದುಕೊಟ್ಟ ಬಡಗುತಿಟ್ಟಿನ ದಿಗ್ಗಜ ಯಕ್ಷಕಲಾವಿದ ಶ್ರೀಪಾದ ಭಟ್ ಥಂಡಿಮನೆ ಹಾಗೂ ದಶಕಗಳ ಕಾಲ ನಾದೋಪಾಸನೆಯಲ್ಲೇ ಬದುಕನ್ನು ಸವೆಸಿ, ನೂರಾರು ಶಿಷ್ಯರಿಗೆ ವಿದ್ಯಾದಾನ ಮಾಡಿದ ಹಿರಿಯ ಸಂಗೀತ ತಪಸ್ವಿ ಪಂಡಿತ್ ನಾಗಭೂಷಣ ಹೆಗಡೆ ಬಾಳೆಹದ್ದ ಅವರ ಅಗಲಿಕೆ ಕಲಾಜಗತ್ತಿಗೆ ಎಂದೂ ತುಂಬಲಾರದ ನಷ್ಟ ಉಂಟುಮಾಡಿದೆ. ರಂಗಸ್ಥಳದ ಶಿಸ್ತು, ಕಲಾಪ್ರೌಢಿಮೆ ಮತ್ತು ಜೀವಿತಾವಧಿಯ ತಪಸ್ಸಿನಿಂದ ಈ ಇಬ್ಬರೂ ಹಿರಿಯರು ಉಳಿಸಿಹೋದ ಕಲಾ ಮೌಲ್ಯಗಳು ಸದಾ ಚಿರಸ್ಮರಣೀಯ ಎಂದು ಕಾಗೇರಿ ಸಂತಾಪ ಸೂಚಿಸಿದ್ದಾರೆ.