ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆ ಕೈ ಬಿಡುವಂತೆ ಆಗ್ರಹಿಸಿ ರಸ್ತೆ ತಡೆ ಸಂಚಾಲನಾ ಸಮಿತಿಯಿಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಯಲ್ಲಾಪುರದಲ್ಲಿ ರವಿವಾರ ಮನವಿ ಸಲ್ಲಿಸಲಾಯಿತು

ಬೇಡ್ತಿ ಹಾಗೂ ಅಘನಾಶಿನಿ ನದಿಗಳನ್ನು ತಿರುಗಿಸಿ, ಬಯಲುಸೀಮೆಗೆ ನೀರು ಕೊಂಡೊಯ್ಯುವ ಬೃಹತ್ ನದಿ ಜೋಡಣೆ ಯೋಜನೆಗಳನ್ನು ಸರ್ಕಾರಗಳು ಕೈಗೊಳ್ಳುತ್ತಿವೆ. ಇಲ್ಲಿನ ಕೃಷಿ, ಪರಿಸರ, ನೀರಿನ ಲಭ್ಯತೆ, ಪರಿಸರ ಹಾಗೂ ಜನಜೀವನಕ್ಕೆ ಇದು ಮಾರಕವಾಗಲಿದೆ.

ಜಿಲ್ಲೆಯ ಪರಿಸರ ಹಾಗೂ ಜನಜೀವನವು ಈಗಾಗಲೇ ಹಲವಾರು ಬೃಹತ್ ವಿನಾಶಕಾರಿ ಯೋಜನೆಗಳಿಂದ ನಲುಗಿದೆ. ಆದರೂ, ಹೊಸ ಹೊಸ ಯೋಜನೆಗಳು ಪ್ರಸ್ತಾಪವಾಗುತ್ತಲೇ ಇವೆ. ಯೋಜನೆಯನ್ನು ವಿರೋಧಿಸಿ ಕಳೆದ ಒಂದು ವರ್ಷದಿಂದ ಉತ್ತರ ಕನ್ನಡದ ಎಲ್ಲೆಡೆ ಈ ಹೋರಾಟ ನಿರಂತರವಾಗಿ ನಡೆಯುತ್ತಲೇ ಇದೆ. ಜನಸಮಾವೇಶ, ಪಾದಯಾತ್ರೆ, ವಿಜ್ಞಾನಿಗಳ ವಿಚಾರಗೋಷ್ಠಿ, ಮನವಿ ಸಲ್ಲಿಕೆ, ಪತ್ರ ಚಳುವಳಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರಮುಖರಿಗೆ ಮನವಿ ಸಲ್ಲಿಕೆ, ಹೀಗೆ ಹಲವು ಆಯಾಮಗಳಲ್ಲಿ ಹೋರಾಟಗಳು ನಡೆಯುತ್ತಿವೆ.

ಪಕ್ಷ, ಜಾತಿ, ಧರ್ಮಾತೀತವಾಗಿ ಜಿಲ್ಲೆಯ ಜನರು ಹೋರಾಟಕ್ಕೆ ಬೆಂಬಲ ನೀಡಿ, ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಆದರೂ ಈ ಯೋಜನೆ ಮುಂದುವರಿದಿದ್ದು, ಬೇಡ್ತಿ (ಗಂಗಾವಳಿ)-ವರದಾ ನದಿ ತಿರುವು ಯೋಜನೆಯಂತೂ ಡಿಪಿಆರ್ ಹಂತ ತಲುಪಿದೆ. ಇದೀಗ ಯೋಜನೆಯ ಸ್ಥಳ ಸರ್ವೇ ಮಾಡಲು ಖಾಸಗಿ ಕಂಪನಿಯೊಂದಕ್ಕೆ ಟೆಂಡರ್ ಕೂಡ ನೀಡಲಾಗಿದೆ.

ಜಿಲ್ಲೆಯ ಜನರ ಬದುಕಿನ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದ್ದು, ಬರುವ ನವೆಂಬರ್ 3 ರಂದು ಯೋಜನೆಯನ್ನು ವಿರೋಧಿಸಿ ಯಲ್ಲಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆಯುವ ಮೂಲಕ ಯೋಜನೆಯ ವಿರುದ್ಧ ಆಕ್ರೋಶ ಮೊಳಗಿಸಲಿದ್ದೇವೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಗಳನ್ನು ಕಳುಹಿಸಿ, ಯೋಜನೆಯನ್ನು ಸ್ಥಗಿತಗೊಳಿಸುವ ವಿಚಾರದಲ್ಲಿ ಸಕಾರಾತ್ಮಕ ಸ್ಪಷ್ಟನೆಯನ್ನು ನೀಡುವಲ್ಲಿ ಮುತುವರ್ಜಿ ವಹಿಸಬೇಕೆಂದು ಸಮಿತಿಯ ಪ್ರಮುಖರು ಒತ್ತಾಯಿಸಿದರು.

ಯೋಜನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಮನವರಿಕೆ ಮಾಡಿಕೊಟ್ಟು, ಯೋಜನೆ ಕೈಬಿಡುವಂತೆ ಮಾಡಬೇಕೆಂದು ಈ ಮೂಲಕ ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಸಚಿವ ಜೋಶಿ, ಜಿಲ್ಲೆಯ ಧಾರಣಾ ಸಾಮರ್ಥ್ಯದ ಅಧ್ಯಯನ ಆಗಬೇಕು. ರಾಜ್ಯ ಸರ್ಕಾರ ಸರಿಯಾಗಿ ಅಧ್ಯಯನ ನಡೆಸದೇ ದುಡುಕಿ ಯೋಜನೆ ಅನುಷ್ಠಾನಗೊಳಿಸಬಾರದು. ಕೇಂದ್ರದ ಮಟ್ಟದಲ್ಲಿ ನಾವೂ ಯೋಜನೆ ಕೈಬಿಡಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.

ಸಮಿತಿ ಅಧ್ಯಕ್ಷ ಎನ್.ಕೆ ಭಟ್ಟ ಅಗ್ಗಾಶಿಕುಂಬ್ರಿ, ಪ್ರಧಾನ ಸಂಚಾಲಕ ಹರಿಪ್ರಕಾಶ ಕೋಣೆಮನೆ, ಸಮೀತಿಯ ಎಂ.ಆರ್ ಹೆಗಡೆ ಕುಂಬ್ರಿಗುಡ್ಡೆ, ನರಸಿಂಹ ಸಾತೊಡ್ಡಿ, ವಿ.ಟಿ ಹೆಗಡೆ, ವೆಂಕಟರಮಣ ಭಟ್ಟ, ರಾಘವೇಂದ್ರ ಭಟ್ಟ ಹಾಸಣಗಿ, ಕೆ.ಟಿ ಹೆಗಡೆ, ನಾಗರಾಜ ಕವಡಿಕೇರಿ, ಸುಬ್ಬಣ್ಣ ಉದ್ದಾಬೈಲ್, ರಘುಪತಿ ಹೆಗಡೆ ಮುಂತಾದವರು ಇದ್ದರು.

======

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading