







ಯಲ್ಲಾಪುರದಲ್ಲಿ ಅದ್ದೂರಿಯಾಗಿ ನಡೆದ ಶ್ರೀಕೃಷ್ಣಾರ್ಪಣಂ ಸಮಾರಂಭ
ಯಲ್ಲಾಪುರ ಪಟ್ಟಣದ ಅಡಿಕೆ ಭವನದಲ್ಲಿ ರವಿವಾರ ಜಿಲ್ಲಾ ಮಟ್ಟದ ಶ್ರೀಕೃಷ್ಣಾರ್ಪಣಂ ಸಮಾರಂಭವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ವೇದಿಕೆಯಲ್ಲಿ ತಾಲೂಕಾ ಮಟ್ಟದ ಭಗವದ್ಗೀತಾ ಅಭಿಯಾನದ ಉದ್ಘಾಟನೆ, ಶ್ರೀಕೃಷ್ಣ ನೃತ್ಯಾಮೃತ, ಶ್ರೀಕೃಷ್ಣ ಗಾನಾಮೃತ ಹಾಗೂ ಪ್ರತಿಷ್ಠಿತ ಸುಜ್ಞಾನ ಸಮ್ಮಾನ್ ಪ್ರಶಸ್ತಿ ಪ್ರದಾನ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು.

ಸುಜ್ಞಾನ ಸೇವಾ ಸಂಸ್ಥೆ ಉತ್ತರಕನ್ನಡ, ಇ-ಯಲ್ಲಾಪುರ ಡಿಜಿಟಲ್ ನ್ಯೂಸ್, ಸುಜ್ಞಾನ ವಾಹಿನಿ ಪತ್ರಿಕೆಯ ವತಿಯಿಂದ, ಗೌತಮ ಜುವೆಲ್ಲರ್ಸ್ ಯಲ್ಲಾಪುರ, ಹಾಂಗ್ಯೋ ಐಸ್ ಕ್ರೀಂ, ವಂದನಾ ಮೆಗಾ ಮಾರ್ಟ್ ಸಹಯೋಗದಲ್ಲಿ ರಂಗ ಸಹ್ಯಾದ್ರಿ ಮತ್ತು ಜ್ಞಾನೇಶ್ವರಿ ಮಹಿಳಾ ಮಂಡಳ ಟ್ರಸ್ಟ್ ಇವುಗಳ ಸಹಕಾರದಲ್ಲಿ ಶ್ರೀಕೃಷ್ಣಾರ್ಪಣಂ ಸಮಾರಂಭ ನಡೆಯಿತು.

ಈ ಸಮಾರಂಭವನ್ನು ಉದ್ಘಾಟಿಸಿದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಭಾರತೀಯ ಭವ್ಯ ಸಂಸ್ಕೃತಿಯನ್ನು ಮತ್ತು ಸನಾತನ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಶ್ರೀಕೃಷ್ಣಾರ್ಪಣಂ ಸಮಾರಂಭದಂತಹ ಕಾರ್ಯಕ್ರಮಗಳು ಮಹತ್ವದ ಕೊಡುಗೆಯನ್ನು ನೀಡುತ್ತಿವೆ, ಸ್ವಸ್ಥ ಸಮಾಜ ನಿರ್ಮಾಣ ಕಾರ್ಯದಲ್ಲಿ ಇಂತಹ ಕಾರ್ಯಕ್ರಮಗಳು ಬಹಳ ಉಪಯುಕ್ತವಾಗಿದ್ದು ನಮ್ಮ ಸಂಸ್ಕೃತಿಯನ್ನು ಕಾಪಾಡಲು ಸಹಕಾರಿಯಾಗಿವೆ ಎಂದರು.
ಧರ್ಮಾಚರಣೆಯ ಮಹತ್ವವನ್ನು ಅರಿಯಬೇಕು

ಕಾರ್ಯಕ್ರಮದಲ್ಲಿ ಭಗವದ್ಗೀತೆಯ ಕುರಿತು ಉಪನ್ಯಾಸ ನೀಡಿದ ಹಿರಿಯ ವಿದ್ವಾಂಸ ಎಂ.ಎನ್.ಹೆಗಡೆ ಹಳವಳ್ಳಿ ಮಾತನಾಡಿ, ನಾವು ಮಾಡುವ ಧರ್ಮಾಚರಣೆ, ಕರ್ಮಾಚರಣೆಗಳು ಯುಕ್ತವಾಗಿರಬೇಕು, ಇಂತಹ ಮಹತ್ವವಾದ ವಿಚಾರಗಳೊಂದಿಗೆ ಭಗವದ್ಗೀತೆಯಲ್ಲಿ ಅನೇಕ ವೈಜ್ಞಾನಿಕ ಅಂಶಗಳು ಅಡಕವಾಗಿವೆ, ಕೆಲಸ ಮಾಡಿದ ಮೇಲೆ ಫಲ ಸಿಗಲೇ ಬೇಕು ಎಬುದಾಗಲಿ ಅಥವಾ, ಫಲ ಸಿಗದ್ದರೆ ಕೆಲಸವನ್ನೇ ಮಾಡುವುದಿಲ್ಲ ಎಂದು ವಿಚಾರ ಮಾಡುವುದು ಮೂಢತನವಾಗುತ್ತದೆ. ಆದರೆ ನಾವು ಮಾಡುವ ಕೆಲಸ ಯಾವುದೇ ಆಸೆಯಿಲ್ಲದ, ಸ್ವಾರ್ಥರಹಿತ ಚಿಂತನೆಯಿಂದ ಕೂಡಿರಬೇಕು, ಫಲಾಪೇಕ್ಷೆ ಇಲ್ಲದೇ ಆಸೆಯ ದಾಸರಾಗದೇ ನಮ್ಮ ಇತಿಮಿತಿಯಲ್ಲಿ ಭಗವಂತನ ಚಿಂತನೆಯೊಂದಿಗೆ ಕೆಲಸ ಮಾಡಬೇಕು ಎಂದರು.
ಸುಜ್ಞಾನದ ಬೆಳಕು ಎಲ್ಲೆಡೆ ಪಸರಿಸಲಿ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸುಜ್ಞಾನ ಸೇವಾ ಸಂಸ್ಥೆಯ ಅಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ ಮಾತನಾಡಿ, ಹತ್ತು ವರ್ಷಗಳ ಹಿಂದೆ ನಮ್ಮ ಸುಜ್ಞಾನ ಸಂಸ್ಥೆ ಮತ್ತು ಇ-ಯಲ್ಲಾಪುರ ಡಿಜಿಟಲ್ ನ್ಯೂಸ್ ಮಾಧ್ಯಮವನ್ನು ಪೂಜ್ಯ ಸ್ವರ್ಣವಲ್ಲೀ ಶ್ರೀಗಳು ಲೋಕಾರ್ಪಣೆಗೊಳಿಸಿದ್ದರು. ಎಲ್ಲರ ಸಹಕಾರದಿಂದ ನಾವು ಹಲವು ಸಮಾಜಮುಖಿ ಕಾರ್ಯಗಳನ್ನು, ವಿವಿಧ ಜನಹಿತ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದೇವೆ, ಎಲ್ಲೆಡೆ ಸುಜ್ಞಾನದ ಬೆಳಕನ್ನು ಹಚ್ಚುವ ಕೆಲಸವನ್ನು ನಿರಂತರವಾಗಿ ನಡೆಸುತ್ತಿದ್ದೇವೆ, ಇ-ಯಲ್ಲಾಪುರ ಡಿಜಿಟಲ್ ನ್ಯೂಸ್ ಮೂಲಕ ನಿತ್ಯ ಒಂದು ಲಕ್ಷಕ್ಕೂ ಅಧಿಕ ಓದುಗರನ್ನು ತಲುಪಲು ಯಶಸ್ವಿಯಾಗಿದ್ದೇವೆ, ನಾಲ್ಕು ವರ್ಷಗಳ ಹಿಂದೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪುತ್ತಿಗೆ ಶ್ರೀಗಳು ಲೋಕಾರ್ಪಣೆಗೊಳಿಸಿದ ನಮ್ಮ ಸಂಸ್ಥೆಯ ಸುಜ್ಞಾನ ವಾಹಿನಿ ಪತ್ರಿಕೆಯು ಓದುಗರ ಮನಗೆದ್ದಿದೆ. ಪ್ರತೀ ವರ್ಷದಂತೇ ಈ ವರ್ಷವೂ ನಮ್ಮ ಸಂಸ್ಥೆಯು ಆಯೋಜಿಸಿದ್ದ ಮುದ್ದುಕೃಷ್ಣ ವೇಷ ಸ್ಪರ್ಧೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಸಾವಿರಾರು ಮಕ್ಕಳು ಪಾಲ್ಗೊಂಡಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ನಾವು ಇನ್ನಷ್ಟು ಯೋಜನೆ, ಯೋಚನೆಗಳನ್ನು ಅನುಷ್ಠಾನಗೊಳಿಸಲು ಚಿಂತನೆ ನಡೆಸಿದ್ದೇವೆ ಎಂದರು.
ಸುಜ್ಞಾನ ಸಮ್ಮಾನ್ ಪ್ರಶಸ್ತಿ ಪ್ರದಾನ

ಹಿರಿಯ ಕವಿ ಕೃಷ್ಣ ಭಟ್ಟ ನಾಯಕನಕೆರೆಯವರಿಗೆ ಈ ವರ್ಷದ ಪ್ರತಿಷ್ಠಿತ ಸುಜ್ಞಾನ ಸಮ್ಮಾನ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಕೃಷ್ಣ ಭಟ್ಟ ನಾಯಕನಕೆರೆ ಮಾತನಾಡಿ, ಇಂತಹ ಶ್ರೇಷ್ಠ ಪ್ರಶಸ್ತಿಯನ್ನು ತಮಗೆ ನೀಡಿರುವುದು ಜೀವನದಲ್ಲಿ ಧನ್ಯತಾಭವವನ್ನು ಮೂಡಿಸಿದೆ ಎಂದರು.
ಮನ ಸೆಳೆದ ಶ್ರೀಕೃಷ್ಣ ನೃತ್ಯಾರ್ಪಣ

ಸಮಾರಂಭದಲ್ಲಿ ಯುವ ಕಲಾವಿದೆ ವೈಷ್ಣವಿ ದುಂಡಿ ಪ್ರಸ್ತುತಪಡಿಸಿದ ಭರತನಾಟ್ಯ ಪ್ರದರ್ಶನ ಪ್ರೇಕ್ಷಕರ ಮನಸೆಳೆಯಿತು. ಶ್ರೀಕೃಷ್ಣನ ಲೀಲೆಗಳನ್ನು ಹಾಗೂ ವಿವಿಧ ವಿನೋದಾವಳಿಗಳನ್ನು ಆಕರ್ಷಕ ನೃತ್ಯದ ಮೂಲ ವೈಷ್ಣವಿ ಸಾದರಪಡಿಸಿದರು.
ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ

ಶ್ರೀಕೃಷ್ಣನ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಭಗವದ್ಗೀತಾ ಪಠಣಕ್ಕೆ ಚಾಲನೆ ನೀಡಿದ ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಶ್ರೀಕೃಷ್ಣಾರ್ಪಣಂ ಸಮಾರಂಭವು ಉತ್ತಮ ಸಂಘಟನೆಯಿಂದ ಕೂಡಿದ ಹೆಮ್ಮೆಯ ಸಮಾರಂಭವಾಗಿದೆ ಎಂದರು.
ಮಾತೆಯರಿಂದ ಭಗವದ್ಗೀತಾ ಪಠಣ

ಸಮಾರಂಭದಲ್ಲಿ ಮಾತೆಯರು ಏಕಕಂಠದಲ್ಲಿ ಭಗವದ್ಗೀತೆಯ ಎರಡನೇ ಅಧ್ಯಾಯವನ್ನು ಸುಶ್ರಾವ್ಯವಾಗಿ ಪಠಿಸಿದರು.
ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

ಸುಜ್ಞಾನ ಸೇವಾ ಸಂಸ್ಥೆಯ ವತಿಯಿಂದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆದ ಆರನೇ ವರ್ಷದ ಮುದ್ದುಕೃಷ್ಣ ಫೋಟೋ ಸ್ಪರ್ಧೆಯ ವಿಜೇತರಾದ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಮಕ್ಕಳಿಗೆ ನಗದು ಬಹುಮಾನ, ಆಕರ್ಷಕ ಬೆಳ್ಳಿಯ ಸ್ಮರಣಿಕೆ, ಪಾರಿತೋಷಕ, ಮೆಡಲ್, ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಸಮಾಧನಕರ ಬಹುಮಾನವಾಗಿ ಒಂಭತ್ತು ಮಕ್ಕಳಿಗೆ ಬೆಳ್ಳಿಯ ಆಕರ್ಷಕ ಸ್ಮರಣಿಕೆ, ಪಾರಿತೋಷಕ, ಮೆಡಲ್ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಗೌತಮ ಜುವೆಲ್ಲರ್ಸ್ ಮಾಲೀಕ ಪ್ರಕಾಶ ಶೇಟ್, ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ, ಭಗವದ್ಗೀತಾ ಅಭಿಯಾನ ಸಮೀತಿಯ ಕೆ.ಜಿ.ಬೋಡೆ, ಎಸ್.ವಿ.ಭಟ್ಟ ಹುಲಗಾನ, ಸಂತೋಷ ಮರಾಠಿ, ಕವಿ ಕೃಷ್ಣ ಭಟ್ಟ ನಾಯಕನಕೆರೆ ಮುಂತಾದವರು ಇದ್ದರು.

ಸುಜ್ಞಾನ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಭಟ್ ಸ್ವಾಗತಿಸಿದರು. ಕೆ.ಜಿ.ಬೋಡೆ ವಂದಿಸಿದರು. ಶಿಕ್ಷಕ ಶ್ರೀಧರ ಹೆಗಡೆ ನಿರ್ವಹಿಸಿದರು.












============















