

16-8-2022. ಮಂಗಳವಾರ.

ಯಲ್ಲಾಪುರ ತಾಲೂಕಾ ಮಾರ್ಕೆಟಿಂಗ್ ಸೊಸೈಟಿಯಲ್ಲಿ ಖಾಲಿ ಇದ್ದ ಅ ವರ್ಗದ ಪ್ರಾಥಮಿಕ ಸಹಕಾರಿ ಸಂಘಗಳ ಕ್ಷೇತ್ರದ ಪ್ರತಿನಿಧಿಯ ಒಂದು ಸ್ಥಾನಕ್ಕೆ ಕುಂದರಗಿ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಮಂಜುನಾಥ ಹೆಗಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವಿರೋಧವಾಗಿ ಆಯ್ಕೆಯಾದ ಮಂಜುನಾಥ ಹೆಗಡೆಯವರನ್ನು ಟಿ.ಎಂ.ಎಸ್. ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ, ಉಪಾಧ್ಯಕ್ಷ ನರಸಿಂಹ ಕೊಣೆಮನೆ, ನಿರ್ದೇಶಕರಾದ ವೆಂಕಟ್ರಮಣ ಬೆಳ್ಳಿ ಹಾಗೂ ಎಲ್ಲ ನಿರ್ದೇಶಕರು ಅಭಿನಂದಿಸಿದ್ದಾರೆ.

ಮಂಜುನಾಥ ಹೆಗಡೆಯವರ ಹೆಸರನ್ನು ಸಹಕಾರ ಭಾರತಿ ಅಧ್ಯಕ್ಷರಾದ ಎನ್.ಕೆ.ಭಟ್ಟ ಅವರು ಸೂಚಿಸಿದ್ದರು. ಬಿಜೆಪಿ ಮಂಡಳದ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್ ಅನುಮೋದಿಸಿದ್ದರು. ಚುನಾವಣೆಗೆ ಸ್ಪರ್ಧಿಸಿದ್ದ ಮೂವರು ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಂಡು ಅವಿರೋಧ ಆಯ್ಕೆಗೆ ಸಹಕರಿಸಿದ್ದಾರೆ.

ಯಲ್ಲಾಪುರ ತಾಲೂಕಿನ ಗಡಿಭಾಗವಾದ ಕೈಗಡಿಯಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವದ ಆಚರಣೆಯ ಸಂದರ್ಭದಲ್ಲಿ ಕಾರ್ಮಿಕರು ಭತ್ತದ ಗದ್ದೆಯಲ್ಲಿ ಧ್ವಜ ವಂದನೆ ಮಾಡಿ ದೇಶಪ್ರೇಮ ಮೆರೆದಿದ್ದಾರೆ.

ಯಲ್ಲಾಪುರ ತಾಲೂಕಿನ ಉಮ್ಮಚಗಿ ಸಮೀಪದ ಬಳೆಗದ್ದೆಯಲ್ಲಿ ಮಳೆಯಿಂದ ಮನೆ ಕಳೆದುಕೊಂಡ ಅನಂತ ಸಿದ್ದಿ ಕುಟುಂಬದವರು ಮನೆಯಲ್ಲಿ ಧ್ವಜಾರೋಹಣ ನಡೆಸಿ ದೇಶಪ್ರೇಮಕ್ಕೆ ಬಡತನವಿಲ್ಲ ಎಂಬುದನ್ನು ಸಾರಿ ಗಮನ ಸೆಳೆದರು.

ಎಪ್ಪತ್ತೈದರ ಸ್ವಾತಂತ್ರ್ಯ ಸಂಭ್ರಮಕ್ಕೆ ಸನ್ಮಾನದ ಮೆರುಗು:

ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ಡೋಂಗ್ರಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 75 ವರುಷ ಕಳೆದ ಹಿರಿಯ ನಾಗರಿಕರಿಗೆ ಸಮಾಮುಖಿ ಸಮಾನಮನಸ್ಕರಿಂದ ಸನ್ಮಾನಿಸಲಾಯಿತು. 75 ವರುಷಗಳಿಗೂ ಮಿಕ್ಕಿದ ಹಿರಿಯ ನಾಗರಿಕರ ಮನೆಗಳಿಗೇ ಹೋಗಿ , ಅವರ ಯೋಗಕ್ಷೇಮ ವಿಚಾರಿಸಿ, ಸನ್ಮಾನಿಸಿ, ಅವರಿಂದ ಆಶೀರ್ವಾದ ಹಾಗೂ ಸಮಾಜಕ್ಕೆ ಸಂದೇಶ ಪಡೆಯುವ ಕಾರ್ಯಕ್ಕೆ ಹೆಗ್ಗಾರಿನ ಜಪದಮನೆಯಲ್ಲಿ ಚಾಲನೆ ನೀಡಲಾಯಿತು. ಸಂಘಟನೆಯ ಪುಟ್ಟು ಕನಕನಹಳ್ಳಿ, ಡೋಂಗ್ರಿ ಗ್ರಾಮ ಪಂಚಾಯತ ಅಧ್ಯಕ್ಷೆ ಲತಾ ನಾಯ್ಕ, ಸದಸ್ಯರಾದ ನಾರಾಯಣ ಭಟ್ಟ, ಮೋಹನ ಪಟಗಾರ, ಮಂಜುಳಾ ಪೆಡ್ನೇಕರ್,ಪ್ರೇಮಾ ಹೆಬ್ಬಾರ, ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾದ ಗೋಪಣ್ಣ ವೈದ್ಯ, ಸಾಮಾಜಿಕ ಕಾರ್ಯಕರ್ತರಾದ ನಾರಾಯಣ ಹೆಗಡೆ, ಪುಟ್ಟು ಕನಕನಹಳ್ಳಿ, ವಿ ಎಸ್ ಭಟ್ಟ, ಮ.ರಾ ಭಟ್ಟ, ಸುಧಾಕರ ಭಟ್ಟ, ಹಾಗೂ ಊರ ಹಿರಿಯರಾದ ರವಿ ಭಟ್ಟ ಕೋನಾಳ,ಹಾಗೂ ಹೆಗ್ಗಾರ, ಶೇವಕಾರ, ಕಲ್ಲೇಶ್ವರ ಊರಿನ ಪ್ರಜ್ಞಾವಂತ ನಾಗರಿಕರು ಭಾಗವಹಿಸಿದ್ದರು.
ಪ್ರಮುಖ ಸುದ್ದಿಗಳ ವೀಡಿಯೋ ದೃಶ್ಯಾವಳಿಗಳ ವೀಕ್ಷಣೆಗಾಗಿ ನಮ್ಮ e-yellapur digital news ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಮಾಡಿ. ಈ ಲಿಂಕ್ ಒತ್ತಿ.https://youtube.com/channel/UCl9HLpwN7rGV0dyzYruwkFw








