ಬೈಕಿಗೆ ಕ್ರೂಸರ್ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೇ ಬೈಕ್ ಸವಾರ ಸಾವು
ಕ್ರೂಸರ್ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವಕ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ನಡೆದಿದೆ.
ರವಿವಾರ ಸಂಜೆ ಯಲ್ಲಾಪುರ ಪಟ್ಟಣದ ಅರಣ್ಯ ಇಲಾಖೆಯ ನರ್ಸರಿ ಎದುರು ಈ ಅಪಘಾತ ಸಂಭವಿಸಿತ್ತು. ಆರೋಪಿ ಕ್ರೂಸರ್ ವಾಹನದ ಚಾಲಕ ಮುಂಡಗೋಡ ತಾಲೂಕಿನ ಅರಿಶಿನಗೇರಿಯ ಅಭಿಷೇಕ ಸಹದೇವ ಹರಸಂಬಿ ಎಂಬಾತ ತನ್ನ ವಾಹನವನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಬಂದು,
ಲಾರಿಯೊಂದನ್ನು ಓವರ್ ಟೇಕ್ ಮಾಡಿ, ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಹೋಗುತ್ತಿದ್ದ ಅಂಕೋಲಾ ತಾಲೂಕಿನ ಕಮ್ಮಾಣಿಯ ಕೂಲಿ ಕೆಲಸದ 22 ವರ್ಷದ ಮಹೇಶ ಸಿದ್ದಿ ಚಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಮಹೇಶ ಸಿದ್ದಿ ಗಂಭೀರವಾಗಿ ಗಾಯಗೊಂಡಿದ್ದನು.
ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಹೇಶ ಸಿದ್ದಿ ಸೋಮವಾರ ಮೃತಪಟ್ಟಿದ್ದು, ಆರೋಪಿ ಅಭಿಷೇಕ ಹರಸಂಬಿ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.