


ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಿಸಿದ ಸಂಸದ ಕಾಗೇರಿ

ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಂಡು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅವರು ಬುಧವಾರ ಯಲ್ಲಾಪುರ ಪಟ್ಟಣದ ಕಾಳಮ್ಮನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಒಎನ್ ಜಿಸಿ ಸಿಎಸ್‍ಆರ್ ನಿಧಿಯ ಅಡಿಯಲ್ಲಿ ತಾಲೂಕಿನ ಆರು ಸರ್ಕಾರಿ ಪ್ರೌಢ ಶಾಲೆಗಳ 24 ವಿದ್ಯಾರ್ಥಿಗಳಿಗೆ ಶಿಕ್ಷಾ ಟ್ಯಾಬ್ ವಿತರಿಸಿ ಮಾತನಾಡಿದರು.

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತವಾಗಿ ತಲಾ 20 ಸಾವಿರ ರೂ ಮೌಲ್ಯದ ಶಿಕ್ಷಾ ಟ್ಯಾಬ್ ಗಳನ್ನು ಮತ್ತು ವಿವಿಧ ಶಾಲೆಗಳಿಗೆ ಹತ್ತು ಲಕ್ಷ ರೂ ಮೌಲ್ಯದ ನಾಲ್ಕು ಡಿಜಿಟಲ್ ಸ್ಮಾರ್ಟ್ ಬೋರ್ಡ್‍ಗಳನ್ನು ವಿತರಿಸಲಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಈ ಟ್ಯಾಬ್ ಉಪಯುಕ್ತವಾಗಿದೆ.

ವಿದ್ಯಾರ್ಥಿಗಳು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು, ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುವಂತಾಗಲಿ, ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ವೃದ್ಧಿಸಲಿ ಎಂದ ಅವರು, ಶಿಕ್ಷಾ ಟ್ಯಾಬ್ ಬಳಕೆಯಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿ ಕಲಿಕೆಯಲ್ಲಿ ಕ್ರಿಯಾಶೀಲತೆ ಮೂಡಿಬರಲಿ ಎಂದರು.

ಈ ಸಂದರ್ಭದಲ್ಲಿ ಕಾಗೇರಿಯವರು ನಂದೊಳ್ಳಿ, ಹುಣಶೆಟ್ಟಿಕೊಪ್ಪ, ಬಿಸಗೋಡ, ಮಂಚಿಕೇರಿ, ವಜ್ರಳ್ಳಿ, ಕಾಳಮ್ಮನಗರ ಪ್ರೌಢಶಾಲೆಗಳ ತಲಾ ನಾಲ್ಕು ವಿದ್ಯಾರ್ಥಿಗಳಿಗೆ 24 ಉಚಿತ ಟ್ಯಾಬ್ ವಿತರಿಸಿದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಕಾಗೇರಿ ಶಾಲೆಯ ಆವರಣದಲ್ಲಿ ವೃಕ್ಷಾರೋಪಣ ನೆರವೇರಿಸಿದರು.
ಡಿಡಿಪಿಐ ಡಿ.ಆರ್.ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ದೇವಾನಂದ ನಾಯ್ಕ, ಪ್ರಮುಖರಾದ ಹರಿಪ್ರಕಾಶ ಕೊಣೆಮನೆ, ಉಮೇಶ ಭಾಗ್ವತ್, ರಾಘವೇಂದ್ರ ಭಟ್ಟ, ರಾಮು ನಾಯ್ಕ, ಗಜಾನನ ನಾಯಕ, ಪ್ರಭಾರ ಮುಖ್ಯಾಧ್ಯಾಪಕಿ ಗೀತಾ ಭಾಗ್ವತ್ ಮುಂತಾದವರು ಇದ್ದರು.

ಎಸ್.ವಿ.ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಪರಿವೀಕ್ಷಕ ಪ್ರಕಾಶ ತಾರಿಕೊಪ್ಪ ಸ್ವಾಗತಿಸಿದರು. ಶಾಮಲಾ ಭಟ್ಟ ನಿರ್ವಹಿಸಿದರು.

=================




