





ಶಾಂತಿ, ಸೌಹಾರ್ದಯುತ ಗಣೇಶೋತ್ಸವ ಆಚರಣೆಗೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್

ಉತ್ತರ ಕನ್ನಡ ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಶಾಂತಿಯುತವಾಗಿ, ಸೌಹಾರ್ದಯುತವಾಗಿ ಹಾಗೂ ಕಾನೂನು ಚೌಕಟ್ಟಿನೊಳಗೆ ಆಚರಿಸುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯಿಂದ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ವಿಶೇಷ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ವರ್ಷ ಜಿಲ್ಲೆಯಾದ್ಯಂತ ಒಟ್ಟು 1,492 ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯಾಗುತ್ತಿದ್ದು ಈ ಸಂದರ್ಭದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ 2 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 5 ಡಿ.ಎಸ್.ಪಿ, 22 ಪೊಲೀಸ್ ನಿರೀಕ್ಷಕರು, 72 ಪೊಲೀಸ್ ಸಬ್ ಇನ್ಸ್ಪೆಕ್ಟರ್‌ಗಳು, , 125 ಎ.ಎಸ್.ಐ., 1,020 ಪೊಲೀಸ್ ಕಾನ್ಸ್ಟೆಬಲ್‍ಗಳು ಹಾಗೂ 400 ಹೋಮ್‍ಗಾರ್ಡ್, ಸೇರಿದಂತೆ ಅಧಿಕಾರಿ ಸಿಬ್ಬಂದಿಗಳನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಇದರೊಂದಿಗೆ 5 ಕೆ.ಎಸ್.ಆರ್.ಪಿ. ಹಾಗೂ 15 ಡಿ.ಎ.ಆರ್. ತುಕಡಿಗಳನ್ನು ಸಹ ನಿಯೋಜಿಸಲಾಗಿದೆ. ಹಾಗೂ ತುರ್ತು ಸಂದರ್ಭಗಳಲ್ಲಿ ಅಗತ್ಯ ನೆರವು ಒದಗಿಸಲು ಅಗ್ನಿಶಾಮಕ ದಳ, ಕರಾವಳಿ ಕಾವಲು ಪಡೆ ಮತ್ತು ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿದೆ.
ಜಿಲ್ಲಾ ಮಟ್ಟದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಧಾರ್ಮಿಕ ಮುಖಂಡರು ಹಾಗೂ ಸಾರ್ವಜನಿಕ ಗಣೇಶೋತ್ಸವ ಆಯೋಜಕರನ್ನು ಒಳಗೊಂಡಂತೆ ಶಾಂತಿ ಸಭೆ ನಡೆಸಲಾಗಿದೆ. ಇದೇ ರೀತಿ ಜಿಲ್ಲೆಯ ಪೊಲೀಸ್ ಉಪವಿಭಾಗಗಳಲ್ಲಿ 04, ಪೊಲೀಸ್ ಠಾಣಾ ಮಟ್ಟದಲ್ಲಿ 26 ಹಾಗೂ ಪೊಲೀಸ್ ಬೀಟ್ ಮಟ್ಟದಲ್ಲಿ 392 ಶಾಂತಿ ಸಭೆಗಳನ್ನು ನಡೆಸಿ, ಹಬ್ಬವನ್ನು ಶಾಂತಿಯುತವಾಗಿ ಆಚರಿಸುವ ಕುರಿತು ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಅಲ್ಲದೆ, ಡಿಜೆ ಹಾಗೂ ಸೌಂಡ್ ಸಿಸ್ಟಂ ಮಾಲೀಕರೊಂದಿಗೆ 12 ಸಭೆಗಳನ್ನು ನಡೆಸಿ, ಸುಪ್ರಿಂ ಕೋರ್ಟ್ ಹಾಗೂ ಸರ್ಕಾರದ ಆದೇಶಗಳು ನಿಯಮಾವಳಿಗಳ ಕುರಿತು ಮಾಹಿತಿ ನೀಡಲಾಗಿದೆ.
ಗಣೇಶೋತ್ಸವವನ್ನು ಅಚ್ಚುಕಟ್ಟಾಗಿ ಹಾಗೂ ಸುರಕ್ಷಿತವಾಗಿ ನಡೆಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಭೆಗಳನ್ನು ನಡೆಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿರುವ ಸ್ಥಳಗಳಲ್ಲಿ ಪೊಲೀಸ್ ಶ್ವಾನದಳ ಹಾಗೂ ಎ.ಎಸ್.ಸಿ. ತಂಡಗಳಿಂದ ತಪಾಸಣೆ ನಡೆಸಲಾಗುವುದು. ಪ್ರತಿಷ್ಠಾಪನಾ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಆಯೋಜಕರಿಗೆ ಸೂಚಿಸಲಾಗಿದ್ದು, 24 ಗಂಟೆಯೂ ಕನಿಷ್ಠ ಒಬ್ಬ ಜವಾಬ್ದಾರಿಯುತ ಆಯೋಜಕರು ಸ್ಥಳದಲ್ಲಿರುವಂತೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಸೇವಕರನ್ನು, ಗಣೇಶ ಮೂರ್ತಿ ವಿಸರ್ಜನಾ ಸ್ಥಳಗಳಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಪರಿಣಿತ ಈಜುಗಾರರನ್ನು ನಿಯೋಜಿಸುವಂತೆ ಸೂಚಿಸಲಾಗಿದೆ.
ಕಾನೂನು ಮತ್ತು ಸುವ್ಯವಸ್ಥೆಗೆ ಅಪಾಯವಾಗುವಂತೆ, ಸಾಮಾಜಿಕ ಜಾಲತಾಣದಲ್ಲಿ ತಪ್ಪು ಅಥವಾ ಸುಳ್ಳು ಸುದ್ದಿಗಳನ್ನು ಹರಡುವ, ಪೋಸ್ಟ್ ಗಳ ಮೇಲೆ ತೀವ್ರ ನಿಗಾವನೆಯನ್ನು ವಹಿಸಲಾಗಿದ್ದು, ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಲಾಗುವುದು.
ಸಾರ್ವಜನಿಕರು ಹಾಗೂ ಗಣೇಶೋತ್ಸವ ಆಯೋಜಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ, ಸರ್ಕಾರದ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿ, ಗಣೇಶ ಚತುರ್ಥಿ ಹಬ್ಬವನ್ನು ಸುರಕ್ಷಿತ ಹಾಗೂ ಸಂಭ್ರಮದಿಂದ ಆಚರಿಸುವಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.

========













