ಯಲ್ಲಾಪುರ ಪಟ್ಟಣದ ತಾಲೂಕಾ ಮಾರ್ಕೆಟಿಂಗ್ ಸೊಸೈಟಿಯ ಒಳಿತಿಗಾಗಿ ಮತ್ತು ಸದಸ್ಯರ ಹಿತವನ್ನು ಕಾಯುವ ಸಲುವಾಗಿ ನಾವು ಕಾನೂನು ಹೋರಾಟ ಮಾಡುತ್ತಿದ್ದೇವೆ ಎಂದು ಸಂಸ್ಥೆಯ ಮಾಜಿ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.

ಬುಧವಾರ ಸಂಜೆ ಯಲ್ಲಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈವರೆಗೆ ನಡೆದುಬಂದ ಕಾನೂನು ಹೋರಾಟ ಹಾಗೂ ನ್ಯಾಯಾಲಯದ ತೀರ್ಪಿನ ಬಗ್ಗೆ ಮಾಹಿತಿ ನೀಡಿ ಮಾತನಾಡಿ, ಸಂಸ್ಥೆಯ ಚುನಾವಣಾ ಮತ ಎಣಿಕೆಗೆ ಸಂಬಂಧಿಸಿದಂತೆ ನಾವಾಗಿಯೇ ಮೊದಲು ಕೋರ್ಟಿಗೆ ಹೋಗಿಲ್ಲ. ಆದರೆ ಎದುರಾಳಿಗಳು ಮೊದಲು ಕೋರ್ಟಿಗೆ ಹೋದ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರ ಸಂವಿಧಾನ ಬದ್ಧ ಹಕ್ಕುಗಳ ರಕ್ಷಣೆಯ ಸಲುವಾಗಿ ನಾವೂ ಕೋರ್ಟಿಗೆ ಹೋಗುವುದು ಅನಿವಾರ್ಯವಾಯಿತು.

ಇದೀಗ ಈ ಪ್ರಕರಣವು ಸುಪ್ರಿಂ ಕೋರ್ಟ್ ನಿರ್ದೇಶನದಂತೆ ತಾರ್ಕಿಕ ಅಂತ್ಯ ಕಂಡಿದೆ ಎಂದರು. ಅ ಮತ್ತು ಬ ವರ್ಗದ ಸದಸ್ಯರ ಮತಗಳನ್ನು ಒಟ್ಟುಗೂಡಿಸಿ, ಸಂಘದ ಬೈಲಾ ಪ್ರಕಾರ ಮತಗಳನ್ನು ಎಣಿಸಿ ಚುನಾವಣಾ ಪ್ರಕ್ರಿಯೆಯನ್ನು ಒಂದು ವಾರದೊಳಗೆ ಮುಗಿಸಿ ವಿಭಾಗೀಯ ಪೀಠಕ್ಕೆ ವರದಿ ಸಲ್ಲಿಸಲು ಚುನಾವಣಾಧಿಕಾರಿಗೆ ಆದೇಶಿಸಿ ಉಚ್ಛ ನ್ಯಾಯಾಲಯ ಧಾರವಾಡದ ವಿಭಾಗೀಯ ದ್ವಿಸದಸ್ಯ ಪೀಠವು ಬುಧವಾರ ತೀರ್ಪು ನೀಡಿದೆ. ಈ ತೀರ್ಪಿನ ಬಳಿಕ ಸಂಸ್ಥೆಯ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದ ಸಹಕಾರಿ ಸಂಘಗಳ ಪರ ವಕೀಲರು ವಿಭಾಗೀಯ ಪೀಠಕ್ಕೆ ಮರುಮನವಿ ಮಾಡಿ, ಈಗ ನೀಡಿರುವ ತೀರ್ಪನ್ನು ಅಮಾನತ್ತು ಮಾಡಿ, ತಾವು ಸುಪ್ರಿಂ ಕೋರ್ಟಿಗೆ ಹೋಗಲು ಅವಕಾಶ ನೀಡಬೇಕೆಂದು ಕೇಳಿಕೊಂಡಿರುತ್ತಾರೆ. ಆದರೆ ಈ ಮನವಿಯನ್ನು ಮಾನ್ಯ ಮಾಡದ ವಿಭಾಗೀಯ ಪೀಠ, ತಾನು ಮಾಡಿರುವ ಆದೇಶವನ್ನು ತಾನೇ ಅಮಾನತ್ತಿನಲ್ಲಿ ಇಡುವುದಿಲ್ಲ ಮತ್ತು ಅರ್ಜಿದಾರರು ಸುಪ್ರಿಂ ಕೋರ್ಟಿಗೆ ಹೋಗುವುದಕ್ಕೆ ಸ್ವತಂತ್ರರೆಂದು ಹೇಳಿರುತ್ತದೆ ಎಂದು ನಾರಾಯಣ ಭಟ್ಟ ತಿಳಿಸಿದರು.

ಹರಿಪ್ರಕಾಶ ಕೋಣೆಮನೆ ಮಾತನಾಡಿ, ಟಿಎಂಎಸ್ ಚುನಾವಣಾ ವಿಷಯದ ಹೋರಾಟದಲ್ಲಿ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿಯವರಿಗೆ ಐತಿಹಾಸಿಕ ಜಯ ದೊರೆತಿದೆ. ತಾಲೂಕಿನ ರೈತರ ಜೀವನಾಡಿಯಾದ ಟಿ.ಎಂ.ಎಸ್.ಸಂಸ್ಥೆಯು ಕಳೆದ 9 ತಿಂಗಳಿನಿಂದ ಆಡಳಿತ ಸಮಿತಿ ಇಲ್ಲದೇ ಸೊರಗುತ್ತಿದೆ. ಇದರಿಂದಾಗಿ ಸಂಸ್ಥೆಯಲ್ಲಿ ದೈನಂದಿನ ವ್ಯವಹಾರ ನಡೆಸುವವರು ವಿಶ್ವಾಸ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಸ್ಥೆಗೆ ಬರಬೇಕಾಗಿದ್ದ 5 ಸಾವಿರ ಕ್ವಿಂಟಾಲ್ ಅಡಿಕೆ ಬೇರೆ, ಬೇರೆ ಕಡೆ ವಿಕ್ರಿಯಾಗಿದೆ. ಸಂಸ್ಥೆಗೆ ದಲಾಲಿ ಆದಾಯ ಗಣನೀಯವಾಗಿ ಕಡಿಮೆಯಾಗಿದೆ. ಇದಕ್ಕೆಲ್ಲಾ ಯಾರು ಕಾರಣರು? ಪ್ರಜ್ಞಾವಂತ ಜನರು ಯೋಚಿಸುವ ಸಂದರ್ಭ ಬಂದಿದೆ. ಇನ್ನಾದರೂ ಸಂಸ್ಥೆಯು ಮೊದಲಿನಂತೇ ಏಳಿಗೆ ಕಾಣುವಂತಾಗಲಿ ಎಂದರು.

ಈ ಸಂದರ್ಭದಲ್ಲಿ ಸುಬ್ಬಣ್ಣ ಬೋಳ್ಮನೆ, ರಾಘವೇಂದ್ರ ಭಟ್ಟ ಹಾಸಣಗಿ, ವೆಂಕಟ್ರಮಣ ಭಟ್ಟ ಕಿರಕುಂಭತ್ತಿ, ವಿಘ್ನೇಶ್ವರ ಮೆಣಸುಮನೆ ಇದ್ದರು.

===================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading