


ಅಪಾಯಕಾರಿ ಸ್ಥಳದಲ್ಲಿ ರೀಲ್ಸ್: ಮೂವರ ವಿರುದ್ಧ ಪ್ರಕರಣ ದಾಖಲು

ಎಚ್ಚರಿಕೆ ಮತ್ತು ಸೂಚನಾ ಫಲಕಗಳನ್ನು ನಿರ್ಲಕ್ಷಿಸಿ, ಅಪಾಯಕಾರಿ ಸ್ಥಳಕ್ಕೆ ತೆರಳಿ, ಜಲಪಾತದ ದೃಶ್ಯವನ್ನು ವಿಡಿಯೋ ಚಿತ್ರೀಕರಣ ಮಾಡಿ ಇನ್ಸ್ಟಾಗ್ರಾಂ ಗೆ ಅಪ್ ಲೋಡ್ ಮಾಡಿದ ಯೂಟ್ಯೂಬರ್ ಹಾಗೂ ಇವರ ಜೊತೆಯಲ್ಲಿದ್ದ ಇಬ್ಬರ ವಿರುದ್ಧ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜೂ.25ರಂದು ಸಿದ್ದಾಪುರ ತಾಲೂಕಿನ ಪ್ರಸಿದ್ಧ ಜೋಗಜಲಪಾತ ಪ್ರದೇಶಕ್ಕೆ ತೆರಳಿದ್ದ ಮೂವರು ಯುವಕರು, ರಾಜಾ ಜಲಪಾತದ ಅಪಾಯಕಾರಿ ಸ್ಥಳಕ್ಕೆ ತೆರಳಿ, ಕಲ್ಲು ಬಂಡೆಯ ಮೇಲೆಹೋಗಿ ಜೋಗ್ ಪಾಲ್ಸ್ ನಲ್ಲಿ ಎಷ್ಟು ಎತ್ತರದಿಂದ ನೀರು ಬೀಳುತ್ತಿದೆ ಗಾಯ್ಸ್, ಫುಲ್ ಹೆದರಿಕೆ, ನೆಕ್ಸ್ಟ್ ಲೆವೆಲ್ ವ್ಯೂ ಗಾಯ್ಸ್ ಎಂದು ವಿಡಿಯೋ ಚಿತ್ರೀಕರಣ ಮಾಡಿ, ವಿಡಿಯೋವನ್ನು ಜೂ.28ರಂದು ಮಿಸ್ಟರ್ ಕನ್ನಡಿಗ ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್‍ಲೋಡ್ ಮಾಡಿದ್ದರು.
ಜೂ29ರಂದು ಈ ವಿಡಿಯೋವನ್ನು ಗಮನಿಸಿದ ಸೊಷಿಯಲ್ ಮೀಡಿಯಾ ಮಾನಿಟರಿಂಗ್ ಪೊಲೀಸ್ ಸಿಬ್ಬಂದಿಗಳು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಪರಿಶಿಲನೆ ನಡೆಸಿದ ಸಿದ್ದಾಪುರ ಪೊಲೀಸ್ ಠಾಣೆಯ ಪಿಎಸ್ಸೈ ಶಾಂತಿನಾಥ ಪಾಸಾನೆಯವರು ಯೂಟ್ಯೂಬರ್ ತೀರ್ಥಳ್ಳಿಯ ಜೋಗಿನಕೊಪ್ಪದ ಮೋಹನ ಗೌಡ ಹಾಗೂ ಇವರ ಜೊತೆಗಿದ್ದ ಭರತ ಗೌಡ ಹಾಗೂ ಮದನ ಗೌಡ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ವಿಡಿಯೋವನ್ನು ವೀಕ್ಷಿಸಿ, ಪ್ರವಾಸಿಗರು ಈ ಅಪಾಯಕಾರಿ ಸ್ಥಳಕ್ಕೆ ಬರುವ ಸಾಧ್ಯತೆ ಇರುವುದರಿಂದ ಹಾಗೂ ಈ ಅಪಾಯಕಾರಿ ಸ್ಥಳಕ್ಕೆ ತೆರಳಿ, ನಿಯಮ ಉಲ್ಲಂಘಿಸಿ, ಮಾನವ ಜೀವಕ್ಕೆ ಅಥವಾ ವೈಯಕ್ತಿಕ ಸುರಕ್ಷತೆಗೆ ಹಾನಿಕಾರಕವಾದ ಅಪಾಯಕಾರಿ ಕೃತ್ಯವನ್ನು ಮಾಡಿದ ಯುವಕರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

===============




