ಜಿಲ್ಲೆಯಲ್ಲಿನ ಸಹಕಾರಿ ಸಂಘಗಳ ವ್ಯವಹಾರ ಮತ್ತು ಚಟುವಟಿಕೆಗಳ ಬಗ್ಗೆ ಹೆಚ್ಚಿನ ನಿಗಾವಹಿಸಿ ಯಾವುದೇ ಅವ್ಯವಹಾರಗಳು ನಡೆಯದಂತೆ ಆಗಾಗ್ಗೆ ತಪಾಸಣೆಗಳನ್ನು ನಡೆಸಿ, ಸಾರ್ವಜನಿಕರ ಠೇವಣಿಗಳ ಮೊತ್ತಕ್ಕೆ ಭದ್ರತೆ ನೀಡುವಂತೆ ಜಿಲ್ಲೆಯ ಸಹಕಾರಿ ಸಂಘಗಳ ಉಪ ನಿಬಂಧಕರಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕೆಲವು ಸಹಕಾರಿ ಸಂಘಗಳಲ್ಲಿನ ಅವ್ಯವಹಾರಗಳಿಂದ ಸಾರ್ವಜನಿಕರು ತಮ್ಮ ಠೇವಣಿಯ ಹಣವನ್ನು ಕಳೆದುಕೊಂಡಿರುವ ಘಟನೆಗಳು ನಡೆದಿದ್ದು, ಇಂತಹ ಘಟನೆಗಳನ್ನು ತಪ್ಪಿಸುವ ಸಲುವಾಗಿ ಸಹಕಾರಿ ಬ್ಯಾಂಕ್‍ಗಳು ನಿಯಮಾನುಸಾರ ಎಲ್ಲಾ ಅನುಮತಿಗಳನ್ನು ನಡೆದು ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ ಮತ್ತು ಅಲ್ಲಿನ ಆರ್ಥಿಕ ಚಟುವಟಿಕೆಗಳ ಬಗ್ಗೆ ಆಗಾಗ್ಗೆ ತಪಾಸಣೆಗಳನ್ನು ನಡೆಸುವ ಮೂಲಕ ಸಾರ್ವಜನಿಕರ ಹಣಕ್ಕೆ ಅಗತ್ಯ ರಕ್ಷಣೆ ದೊರೆಯುವಂತೆ ನೋಡಿಕೊಳ್ಳಬೇಕು ಎಂದರು.


ಜಿಲ್ಲೆಯ ಮುಂಡಗೋಡು, ಹಳಿಯಾಳ ಮತ್ತಿತರ ತಾಲೂಕುಗಳಲ್ಲಿ ಖಾಸಗಿ ಫೈನಾನ್ಸ್ ಗಳ ಹಾವಳಿ ಕುರಿತಂತೆ ದೂರುಗಳು ಬರುತ್ತಿದ್ದು, ಖಾಸಗಿ ಪೈನಾನ್ಸ್ ಗಳು ಆರ್.ಬಿ.ಐ. ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ನಡೆಯುತ್ತಿರುವ ಬಗ್ಗೆ ಮತ್ತು ಇವರು ವಿಧಿಸುವ ಬಡ್ಡಿ ದರಗಳ ಕುರಿತಂತೆ ಪರಿಶೀಲನೆ ನಡೆಸಬೇಕು. ಖಾಸಗಿ ಪೈನಾನ್ಸ್ ಗಳು ಸೇರಿದಂತೆ ಹಣಕಾಸು ಸಂಸ್ಥೆಗಳಲ್ಲಿ ಸಾರ್ವಜನಿಕರು ಸುರಕ್ಷಿತ ವ್ಯವಹಾರ ನಡೆಸುವ ಬಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ನಿರ್ದೇಶನ ನೀಡಿದರು.


ಜಿಲ್ಲೆಯಲ್ಲಿನ ಖಾಸಗಿ ಪೈನಾನ್ಸ್ ಸಂಸ್ಥೆಗಳು ಆರ್.ಬಿ.ಐ. ಮಾರ್ಗಸೂಚಿಯಡಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪರಿಶೀಲಿಸಿ, ಅನಧಿಕೃತ ಎಂದು ಕಂಡು ಬಂದಲ್ಲಿ ಅಂತಹ ಸಂಸ್ಥೆಗಳ ವಿರುದ್ದ ತಕ್ಷಣ ಪ್ರಕರಣ ದಾಖಲು ಮಾಡುವಂತೆ ಸೂಚನೆ ನೀಡಿದರು. ಸಹಕಾರ ಸಂಘಗಳ ಅರ್ಥಿಕ ಅವ್ಯವಹಾರಗಳ ಕುರಿತು ಸಲ್ಲಿಕೆಯಾಗುವ ದೂರುಗಳನ್ನು ನಿಗಧಿತ ಕಾಲಾವಧಿಯಲ್ಲಿ ವಿಲೇಗೊಳಿಸುವುದರ ಜೊತೆಗೆ ಅಂತಹ ಸಂಸ್ಥೆಗಳಲ್ಲಿ ಸಾರ್ವಜನಿಕರ ಠೇವಣಿ ಮೊತ್ತ ಸುರಕ್ಷಿತವಾಗಿರುವಂತೆ ಅಗತ್ಯ ಎಚ್ಚರವಹಿಸುವಂತೆ ಸೂಚಿಸಿದರು.


ಸಭೆಯಲ್ಲಿ ಜಿ.ಪಂ. ಸಿಇಓ ಡಾ.ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಉಪ ವಿಭಾಗಾಧಿಕಾರಿ ಶ್ರವಣ ಕುಮಾರ್, ಸಹಕಾರಿ ಸಂಘಗಳ ಉಪ ನಿಬಂಧಕಿ ತೇಜಸ್ವಿನಿ ಗೌಡ, ಲೀಡ್ ಬ್ಯಾಂಕ್ ಮೇನೇಜರ್ ರಾಜಪ್ಪ ಹಾಗೂ ಸಹಕಾರಿ ಸಂಘಗಳಇಲಾಖೆಯ ಎಲ್ಲಾ ತಾಲೂಕುಗಳು ಅಧಿಕಾರಿಗಳು ಇದ್ದರು.

====================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading