



ಸಾರ್ವಜನಿಕರ ನೋವಿಗೆ ತಕ್ಷಣ ಸ್ಪಂದಿಸಿ, ನೆಮ್ಮದಿಯ ಜೀವನ ಕಲ್ಪಿಸುವುದು ಸರ್ಕಾರದ ಪ್ರಥಮ ಆದ್ಯತೆ: ಸಚಿವ ಯು.ಟಿ ಖಾದರ್

ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿರುವಂತೆ ಹಾಗೂ ನೈಸರ್ಗಿಕ ವಿಕೋಪಗಳು ಯಾವಾಗ ಮತ್ತು ಹೇಗೆ ಸಂಭವಿಸುತ್ತವೆ ಎಂದು ಊಹಿಸಲು ಸಾಧ್ಯವಿಲ್ಲ. ಪ್ರಕೃತಿ ವಿಕೋಪ ನೆಡೆದ ಸಂದರ್ಭದಲ್ಲಿ ಸಂತ್ರಸ್ತರ, ಸಾರ್ವಜನಿಕರ ನೋವಿಗೆ ತಕ್ಷಣ ಸ್ಪಂದಿಸಿ, ಅವರಿಗೆ ನೆಮ್ಮದಿಯ ಜೀವನ ಕಲ್ಪಿಸುವುದು ಸರ್ಕಾರದ ಪ್ರಥಮಾದ್ಯತೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅವರು ಶನಿವಾರ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಕೃತಿ ವಿಕೋಪದ ನಿರ್ವಹಣೆ ಪೂರ್ವ ತಯಾರಿ ಮತ್ತು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಕೃತಿ ವಿಕೋಪದಂತಹ ತುರ್ತು ಸಂದರ್ಭ ಎದುರಾದಾಗ ಎಲ್ಲಾ ಹಂತದ ಅಧಿಕಾರಿ ಸಿಬ್ಬಂದಿಗಳು ಒಂದು ಕುಟುಂಬದಂತೆ ಒಗ್ಗೂಡಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಯಾವುದೇ ಕ್ಷಣದಲ್ಲಿ ಸಾರ್ವಜನಿಕರಿಂದ ತುರ್ತು ಕರೆಗಳು ಬರಬಹುದು. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯಾವುದೇ ಸಮಯದ ಮಿತಿಯಿಲ್ಲದೆ 24 ಗಂಟೆಯೂ ಸದಾ ಜಾಗರೂಕರಾಗಿ ಅವರ ಸಂಕಷ್ಟಗಳಿಗೆ ಸ್ಪಂಧಿಸುವಂತಾಗಬೇಕು ಎಂದರು.

ಪ್ರಕೃತಿ ವಿಕೋಪದ ಸಂದರ್ಭದಲ್ಲಿ ತಕ್ಷಣದ ಸ್ಪಂದನೆಗಾಗಿ ಜಿಲ್ಲಾಧಿಕಾರಿ ಪಿ.ಡಿ ಖಾತೆಯಲ್ಲಿ ರೂ.61 ಕೋಟಿ ಇದೆ. ಆಯಾ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಲಾಗಿದ್ದು, ಪ್ರವಾಹ ಅಥವಾ ಮಳೆಯಿಂದ ಮನೆಗಳಿಗೆ ಹಾನಿಯಾದ ತಕ್ಷಣ ಸ್ಥಳದಲ್ಲೇ ಪರಿಶೀಲಿಸಿ, ತಕ್ಷಣದ ಖರ್ಚಿಗೆ ನಿಯಮಾನುಸಾರ ತಾತ್ಕಾಲಿಕ ಪರಿಹಾರವನ್ನು ಶೀಘ್ರವಾಗಿ ವಿತರಿಸಬೇಕು. ಪರಿಹಾರ ವಿತರಿಸಲು ವಿಳಂಬ ಮಾಡಿದ್ದಲ್ಲಿ ಅಂತಹ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮಳೆಗಾಲದ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ವಿಪತ್ತುಗಳು ಸಂಭವಿಸುವ ಸಾಧ್ಯತೆಗಳಿದ್ದು, ಹೆಚ್ಚಿನ ಬದ್ಧತೆಯಿಂದ ಪ್ರತಿಯೊಬ್ಬ ಅಧಿಕಾರಿಯೂ ಸಾರ್ವಜನಿಕರ ಸೇವೆಗಾಗಿ ತಮ್ಮ ಮನಸ್ಥಿತಿಯನ್ನು ಸಿದ್ಧಪಡಿಸಿಕೊಂಡು, ಅತ್ಯಂತ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮಳೆಗಾಲದ ಸಾಂಕ್ರಾಮಿಕ ರೋಗಗಳ ತಡೆಗೆ ಆರೋಗ್ಯ ಇಲಾಖೆ ಅಗತ್ಯ ಮನ್ನೆಚ್ಚರಿಕೆ ವಹಿಸಬೇಕು. ಸಾರ್ವಜನಿಕರು ಜ್ವರ ಕಾಣಿಸಿಕೊಂಡ ತಕ್ಷಣ ಸ್ವಯಂ ವೈದ್ಯರಾಗದೇ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆ ನೀಗಿಸಲು ತಾತ್ಕಾಲಿಕ ನೇಮಕಾತಿಗೂ ಕ್ರಮ ಕೈಗೊಳ್ಳಲಾಗುತ್ತಿದೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸೇರಿದಂತೆ ತಾಲೂಕು ವೈದ್ಯಾಧಿಕಾರಿಗಳು ಮತ್ತು ಕಾರ್ಯಕ್ರಮ ಅಧಿಕಾರಿಗಳು ಕಡ್ಡಾಯವಾಗಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲ್ವಿಚಾರಣೆ ಮಾಡಬೇಕು. ಅಗತ್ಯ ಬಿದ್ದರೆ ನಿವೃತ್ತ ವೈದ್ಯರಲ್ಲಿ ಕೆಲಸ ಮಾಡಲು ಕ್ಷಮತೆ ಇದ್ದರೆ ಅವರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿನ ಜಾನುವಾರುಗಳ ಮೇವಿನ ಕೊರತೆಯಾಗದಂತೆ ಮುಂದಿನ 41 ವಾರಗಳಿಗೆ ಸಾಕಾಗುವಷ್ಟು ಮೇವನ್ನು ದಾಸ್ತಾನು ಮಾಡಿಕೊಳ್ಳುವಂತೆ ಸೂಚಿಸಿದ ಅವರು, ಅನಾವೃಷ್ಟಿಯಿಂದ ಆಗಿರುವ ಬೆಳೆ ಹಾನಿಗೆ ಸಂಬಂಧಿಸಿದಂತೆ ಕಂದಾಯ ಮತ್ತು ಕೃಷಿ ಇಲಾಖೆ ಜಂಟಿ ಸರ್ವೇ ಮಾಡಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗುರುತಿಸಿರುವ ಅಪಾಯಕಾರಿ ಸ್ಥಳಗಳಲ್ಲಿ ಭೂಕುಸಿತವಾಗದಂತೆ ರಕ್ಷಣಾ ತಡೆಗೊಡೆ ನಿರ್ಮಿಸಬೇಕು ಇಲ್ಲವಾದರೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಐಆರ್‍ಬಿ ಕಂಪನಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.ವಿಶ್ವಪ್ರಸಿದ್ದ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಒಳಗೆ ಕೊಳಚೆ ನೀರು ಸೇರುತ್ತಿರುವ ಬಗ್ಗೆ ತೀವ್ರ ಆಕ್ಷೇಕ ವ್ಯಕ್ತಪಡಿಸಿದ ಅವರು, ದೇವಸ್ಥಾನದ ಒಳಗೆ ನೀರು ಸೇರದಂತೆ ಶಾಶ್ವತ ಪರಿಹಾರ ಒದಗಿಸಲು ಖಾಸಗಿ ತಜ್ಞರಿಂದ ಸ್ಥಳ ಪರೀಶಿಲಿಸಿ ಅವರ ಸಲಹೆ ಪಡೆದು ಶಾಶ್ವತ ಪರಿಹಾರ ಕೈಗೊಳ್ಳುವಂತೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಮಾತನಾಡಿ, ಜಿಲ್ಲೆಯಲಿ ಪ್ರಕೃತಿ ವಿಕೋಪದಿಂದ ಎದುರಾಗುವ ಸವಾಲುಗಳನ್ನು ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದ್ದು, ಈಗಾಗಲೇ ಜಿಲ್ಲಾಧಿಕಾರಿ ಕಚೇರಿ, ಎಸ್.ಪಿ ಕಚೇರಿ ಹಾಗೂ ಎಲ್ಲಾ ತಾಲೂಕುಗಳಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, 24 ಗಂಟೆ ಕಾರ್ಯನಿರ್ವಹಿಸಲಿವೆ ಹಾಗೂ ಅಗತ್ಯ ಮನ್ನೆಚ್ಚರಿಕೆಯ ಕ್ರಮವಾಗಿ 294 ಕಾಳಜಿ ಕೇಂದ್ರ ತೆರೆಯಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಮನವ ಜೀವಹಾನಿಯಾಗಿಲ್ಲ. 2 ಮನೆ ಸಂಪೂರ್ಣ ಹಾನಿಗೊಳಗಾಗಿದ್ದು ಹಾಗೂ 34 ಮನೆಗಳು ಭಾಗಶಃ ಹಾನಿಗೊಳಗಿದೆ. ಈ ಸಂತ್ರಸ್ತರಿಗೆ ಪರಿಹಾರ ವಿತರಿಸಲಾಗಿದೆ ಎಂದರು.
ಸಭೆಯಲ್ಲಿ ಶಾಸಕ ಸತೀಶ ಕೆ. ಸೈಲ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್ ಶಾಸಕರಾದ ಶಿವರಾಮ ಹೆಬ್ಬಾರ್, ಕೆ.ದಿನಕರ್ ಶೆಟ್ಟಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ಪರಿಷ್ಠಾಧಿಕಾರಿ ದೀಪನ್ ಎಂ.ಎನ್. ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಉಪ ವಿಭಾಗಾಧಿಕಾರಿ ಶ್ರವಣ್ ಕುಮಾರ ಹಾಗೂ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿ ಉಪಸ್ಥಿತರಿದ್ದರು.

=================




