




ಓವರ್ ಲೋಡ್ ವಾಹನಗಳ ವಿರುದ್ದ ಪ್ರಕರಣ ದಾಖಲಿಸಿ : ಜಿಲ್ಲಾಧಿಕಾರಿ ಸೂಚನೆ
ಜಿಲ್ಲೆಯಲ್ಲಿ ಸರಕು ಸಾಗಣಿಕೆ ವಾಹನಗಳಲ್ಲಿ ಸರಕು ಮತ್ತು ಸಾಮಗ್ರಿಗಳ ಓವರ್ ಲೋಡ್ ಕಂಡುಬಂದಲ್ಲಿ ಕೂಡಲೇ ಪ್ರಕರಣ ದಾಖಲಿಸುವಂತೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ತಪಾಸಣೇಗಳನ್ನು ಕೈಗೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನಿರ್ದಿಷ್ಟ ಒಂದು ರಸ್ತೆಯಲ್ಲಿ ಮಾತ್ರ ತಪಾಸಣೆಗಳನ್ನು ಕೈಗೊಳ್ಳದೇ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ನಿಯಮಿತವಾಗಿ ತಪಾಸಣೆಗಳನ್ನು ಕೈಗೊಂಡು ನಿಗಧಿತ ಮಿತಿಗಿಂತ ಹೆಚ್ಚಿನ ಸರಕು ಸಾಮಗ್ರಿ ಸಾಗಿಸುವ ವಾಹನಗಳ ವಿರುದ್ದ ಪ್ರಕರಣ ದಾಖಲಿಸಬೇಕು. ಖಾಸಗಿ ಸಾರಿಗೆ ಬಸ್ ಗಳ ಡಿಕ್ಕಿಯಲ್ಲಿ ಪ್ರಯಾಣಿಕರ ಲಗೇಜ್ ಹೊರತುಪಡಿಸಿ ಇತರ ಸಾಮಗ್ರಿಗಳನ್ನು ಸಾಗಿಸುವುದರ ಬಗ್ಗೆ ವ್ಯಾಪಕ ತಪಾಸಣೆಗಳನ್ನು ನಡೆಸುವಂತೆ ಮತ್ತು ದೂರದ ಸ್ಥಳಗಳಿಗೆ ಪ್ರಯಾಣಿಸುವ ಬಸ್ ಗಳಲ್ಲಿ ಇಬ್ಬರು ಚಾಲಕರು ಇರುವ ಬಗ್ಗೆ ತಪಾಸಣೆ ನಡೆಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕಾರವಾರದ ಫ್ಲೈ ಓವರ್ ಕೆಳಗೆ ಅಂಗಡಿಗಳು ಮತ್ತು ಜನವಸತಿ ಕಂಡುಬರುತ್ತಿದ್ದು ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಅವರು ಎನ್,ಹೆಚ್.ಐ. ಮಾರ್ಗಸೂಚಿಯಂತೆ ಫ್ಲೈ ಓವರ್ ಕಳಭಾಗದಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳನ್ನು ಶೀಘ್ರದಲ್ಲಿ ಮಾಡುವಂತೆ ತಿಳಿಸಿದರು.

ಇತೀಚೆಗೆ ಕುಮಟಾದಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದ್ದು ಅಗತ್ಯವಿರುವಡೆಗಳಲ್ಲಿ ಬೀದಿದೀಪಗಳನ್ನು ಅಳವಡಿಸಬೇಕು, ರಸ್ತೆಗಳಿಗೆ ಲೈನ್ ಮಾರ್ಕ್ ಮತ್ತು ಕ್ಯಾಟ್ ಐ ಗಳನ್ನು ಅಳವಡಿಸಬೇಕು. ಹೆದ್ದಾರಿಯ ಪಕ್ಕದಲ್ಲಿ ಗುಡ್ಡಗಳಿಂದ ಜಲಪಾತದ ರೀತಿಯಲ್ಲಿ ನೀರು ಬೀಳುವ ಪ್ರದೇಶದಲ್ಲಿ ಸಾರ್ವಜನಿಕರು ರಸ್ತೆಯಲ್ಲಿಯೇ ವಾಹನಗಳನ್ನು ನಿಲ್ಲಿಸಿ ಪೋಟೋ ಮತ್ತು ವೀಡಿಯೋ ಚಿತ್ರೀಕರಣ ಮಾಡುತ್ತಿದ್ದು ಇದರಿಂದ ಅಪಘಾತಗಳಾಗುವ ಸಾಧ್ಯತೆಗಳಿರುವುದರಿಂದ ಇಂತಹ ಪ್ರದೇಶದಲ್ಲಿ ನೋ ಪಾರ್ಕಿಂಗ್ ಸೇರಿದಂತೆ ಇತರೇ ಅಗತ್ಯ ಎಚ್ಚರಿಕೆ ಫಲಕಗಳನ್ನು ಅಳವಡಿಸಿ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಘಟ್ಟ ಪ್ರದೇಶದಿಂದ ಆಗಮಿಸುವ ವಾಹನಗಳ ಚಾಲಕರಿಗೆ ಮುಂದೆ ಎಷ್ಟು ತಿರುವುಗಳು ಇವೆ ಎಂಬ ಬಗ್ಗೆ ಮಾಹಿತಿ ಇಲ್ಲದ ಕಾರಣ ವೇಗವಾಗಿ ವಾಹನ ಚಲಾಯಿಸಿ ಹೆಚ್ಚಿನ ಸಂಖ್ಯೆಯ ಅಪಘಾತಗಳು ಸಂಭವಿಸುತ್ತಿದ್ದು, ಇದನ್ನು ನಿಯಂತ್ರಿಸಲು ಇಳಿಜಾರು ಪ್ರದೇಶ ಆರಂಭವಾಗುವ ಸ್ಥಳದಿಂದಲೇ ಮುಂದೆ ಎಷ್ಟನೇ ತಿರುವು ಇದೆ ಎಂಬ ಸಂಖ್ಯೆಗಳ ಮಾಹಿತಿಯನ್ನು ಒಳಗೊಂಡ ಸೂಚನಾ ಫಲಕಗಳನ್ನು ಅಳವಡಿಸುವಂತೆ ಮತ್ತು ಎಲ್ಲಾ ಸೇತುವೆಗಳ ಬಗ್ಗೆ ಸೂಚನಾ ಫಲಕ ಮತ್ತು ರಾತ್ರಿ ವೇಳೆ ಸೇತುವೆ ಸ್ಪಷ್ಟವಾಗಿ ಗೋಚರವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ಪೊಲೀಸ್ ಇಲಾಖೆಯ ಸೂಚನೆಯಂತೆ ಅಗತ್ಯವಿರುವೆಡೆಗಳಲ್ಲಿ ಎ.ಎನ್.ಪಿ.ಆರ್ ಕೆಮರಗಳನ್ನು ಅಳವಡಿಸಬೇಕು, ಬ್ಲಾಕ್ ಸ್ಪಾಟ್ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು, ವೇಗಮಿತಿ ಸೂಚನಾ ಫಲಕಗಳು ಮತ್ತು ಬ್ಲಿಂಕರ್ಸ್ ಗಳನ್ನು ಅಳವಡಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಉಪ ವಿಭಾಗಧಿಕಾರಿ ಶ್ರವಣಕುಮಾರ್,ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತಿತರರು ಇದ್ದರು.
ಉತ್ತಮ ಆರೋಗ್ಯ ಇದ್ದರೆ ಸಾಧನೆ ಮಾಡಲು ಸಾಧ್ಯ : ಅನಂತಮೂರ್ತಿ ಹೆಗಡೆ
ಸಿದ್ದಗಂಗಾ ಮಠದ ಶ್ರೀಗಳ ಸಮಾಜಮುಖಿ ಕೆಲಸಗಳಿಂದ ಪ್ರೇರಣೆಯಾಗಿ ನಾನು ಕೂಡಾ ಸಮಾಜಮುಖಿ ಚಟುವಟಿಕೆಯನ್ನು ಮಾಡುತ್ತಿದ್ದೇನೆ ಎಂದು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಅಭಿಪ್ರಾಯಪಟ್ಟರು.

ಅವರು ತಾಲೂಕಿನ ಬದನಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂತೊಳ್ಳಿ ಹಿರಿಯ ಪ್ರಾಥಮಿಕ ಶಾಲೆಗೆ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿ, ಘಟಕವನ್ನು ಉದ್ಘಾಟಿಸಿ, ಮಾತನಾಡಿದರು. ಸಿದ್ದಗಂಗಾ ಮಠದ ಶ್ರೀಗಳು ಅನ್ನ, ಅಕ್ಷರ, ಆಶ್ರಯ ಚಿಂತನೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ವಸತಿ ಸಹಿತ ಶಿಕ್ಷಣ ನೀಡಿದ್ದಾರೆ. ದೇಶವು ಹಾಳಾಗುತ್ತಿರುವುದು ಜಾತಿ ವವಸ್ಥೆಯಿಂದ, ಸಿದ್ದಗಂಗಾ ಮಠದ ಶಿಕ್ಷಣ ಸಂಸ್ಥೆಯಲ್ಲಿ ಜಾತಿ ವ್ಯವಸ್ಥೆಯಿಲ್ಲ, ಅಲ್ಲಿ ಶಿಕ್ಷಕ, ಕಲಿತ ವಿದ್ಯಾರ್ಥಿಗಳು ದೇಶದಲ್ಲಿ ಉತ್ತಮವಾಗಿ ಸಾಧನೆ ಮಾಡಿದ್ದಾರೆ, ಅವರ ಸಮಾಜಸೇವೆಗಳು ನಮಗೆ ದಾರಿದೀಪವಾಗಿದೆ ಎಂದ ಅವರು, ಇಂದಿನ ಮಕ್ಕಳು ಬಾಲ್ಯದಲ್ಲಿಯೇ ಉತ್ತಮ ಆರೋಗ್ಯವನ್ನು ಹೊಂದಿದ್ದರೆ ಮಾತ್ರ ಭವಿಷ್ಯದಲ್ಲಿ ದೇಶದ ಅತ್ಯಮೂಲ್ಯ ಸಂಪತ್ತಾಗಿ ಬೆಳೆದು, ದೊಡ್ಡಸಾಧನೆಗಳನ್ನು ಮಾಡಲು ಸಾಧ್ಯ ಮಕ್ಕಳ ಆರೋಗ್ಯದ ಕಾಳಜಿಯ ದೃಷ್ಟಿಯಿಂದ ನಮ್ಮ ಟ್ರಸ್ಟ್ ವತಿಯಿಂದ ಈಗಾಗಲೇ ಜಿಲ್ಲೆಯ 150ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಶುದ್ಧ ಕುಡಿಯುವ ನೀರಿನ ಫಿಲ್ಟರ್ ವಿತರಿಸಿದ್ದೇವೆ. ಕೇವಲ ಶೈಕ್ಷಣಿಕ ಕ್ಷೇತ್ರ ಮಾತ್ರವಲ್ಲದೆ ಬಸ್ ನಿಲ್ದಾಣ, ಆಸ್ಪತ್ರೆ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಿಗೂ ನಮ್ಮಿಂದಾಗುವ ಸಹಾಯ, ಸಹಕಾರವನ್ನು ಮಾಡುತ್ತಾ ಬರಲಾಗಿದೆ, ಎಂದರು.
ನಮ್ಮ ಈ ಸಮಾಜಮುಖಿ ಕೆಲಸಕ್ಕೆ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳು ಪ್ರೇರಣೆಯಾಗಿದ್ದಾರೆ. ಅವರು ಮಠದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ವಸತಿ ಸಹಿತ ಶಿಕ್ಷಣ ನೀಡಿದ್ದಾರೆ. ಹಾಗೆಯೇ ಕರ್ನಾಟಕದ ಹೆಮ್ಮೆಯ ನಟ ದಿವಂಗತ ಪುನೀತ್ ರಾಜಕುಮಾರ್ ಅವರು ಮನುಷ್ಯನು ತನ್ನ ಜೀವಿತಾವಧಿಯಲ್ಲಿ ಸದಾ ಒಳ್ಳೆಯದನ್ನೇ ಮಾಡುತ್ತಾ, ಕನಿಷ್ಠ ನಾಲ್ಕು ಜನರಿಗೆ ಸಹಾಯವಾಗುವಂತೆ ಬದುಕಬೇಕು ಎನ್ನುವ ಅದ್ಭುತ ಮಾರ್ಗದರ್ಶನ ನೀಡಿ ಹೋಗಿದ್ದಾರೆ. ಅವರ ಆದರ್ಶ ತತ್ವಗಳೇ ನಾವೆಲ್ಲರೂ ಇಂತಹ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಪ್ರೇರಣೆಯಾಗಿದೆ ಈ ಊರಿನ ಅಭಿವೃದ್ಧಿ ನಿಟ್ಟಿನಲ್ಲಿ ಈ ಭಾಗದ ಮುಖಂಡರಾದ ಯುವರಾಜ್ ಗೌಡ, ಸಾಕಷ್ಟು ಶ್ರಮಿಸುತ್ತಿದ್ದಾರೆ, ಪ್ರತಿ ಊರಿನಲ್ಲಿ , ಇಂತಹ ನಾಯಕತ್ವದ ಗುಣ ಇರುವ ವ್ಯಕ್ತಿಗಳು ಇರಬೇಕು ಎಂದು ಅನಂತಮೂರ್ತಿ ಹೆಗಡೆ ಹೇಳಿದರು.
ಗ್ರಾಮಸ್ಥರಾದ ಯುವರಾಜ್ ಗೌಡ ಮಾತನಾಡಿದರು. ಶಾಲೆಗೆ ಅತ್ಯಾಧುನಿಕ ವಾಟರ್ ಫಿಲ್ಟರ್ ಅನ್ನು ಕೊಡುಗೆಯಾಗಿ ನೀಡಿದ ಹಿನ್ನೆಲೆಯಲ್ಲಿ ಅನಂತಮೂರ್ತಿ ಹೆಗಡೆ ಅವರನ್ನು ಶಾಲೆಯ ಎಸ್.ಡಿ. ಸಿ ಪದಾಧಿಕಾರಿಗಳು ಹಾಗೂ ಸಮಸ್ತ ಗ್ರಾಮಸ್ಥರ ವತಿಯಿಂದ ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಆಯೋಗದ ಕಾರ್ಯದರ್ಶಿಯಾದ ಮಾರುತಿ ಎನ್ ಸಾಳುಂಕೆ ಶಾಲೆಯ ಎಸ್.ಎಂ.ಸಿ ಅಧ್ಯಕ್ಷರಾದ ರವಿ ಬೋರಳ್ಳಿ, ಬದನಗೋಡು ಗ್ರಾಮ ಪಂಚಾಯತಿ ಪಿಡಿಓ ಟಿ.ಪಿ. ಲಂಬಾಣಿ, ಶಿವಪ್ಪ ದುರ್ಗಪ್ಪ ಬೋವಿವಡ್ಡರ್ ಸೇರಿದಂತೆ ಇತರರು ಉಪಸ್ಥಿತರಿದ್ದರು

=====




