ಧಾರಾಕಾರವಾಗಿ ಸುರಿದ ಗಾಳಿ-ಮಳೆಯಿಂದಾಗಿ ಶಿರಸಿಯ ಗಾಂಧಿನಗರದ ರಾಮಚಂದ್ರ ನಾಯ್ಕ ಎಂಬುವವರ ಮನೆಯ ಮೇಲೆ ಪಕ್ಕದ ಮನೆಯ ಕಂಪೌಂಡ್ ಗೋಡೆ ಕುಸಿದು ಬಿದ್ದು, ಅಪಾರ ಹಾನಿ ಸಂಭವಿಸಿದೆ. ಘಟನಾ ಸ್ಥಳಕ್ಕೆ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ , ಶಿರಸಿ ಬಿಜೆಪಿ ಅಧ್ಯಕ್ಷ ಆನಂದ್ ಸಾಲೇರ ತಂಡದ ಜೊತಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಅವರು, ಸಂತ್ರಸ್ತರು ಜೊಮ್ಯಾಟೋದಲ್ಲಿ ಕೆಲಸ ಮಾಡುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಕಂಪೌಂಡ್ ಕುಸಿದು ಈಗಾಗಲೇ ಹಾನಿಯಾಗಿದ್ದು, ಮತ್ತೆ ಮಳೆ ಬಂದರೆ ಇನ್ನಷ್ಟು ಕುಸಿಯುವ ಭೀತಿ ಎದುರಾಗಿದೆ. ಈ ಬಗ್ಗೆ ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ರಾತ್ರಿಯ ವೇಳೆ ಪಕ್ಕದ ಮನೆಯ ಕಂಪೌಂಡ್ ಕುಸಿದು ಬಿದ್ದಿದ್ದರಿಂದ ಮನೆಯ ಹಂಚು, ಗೋಡೆ ಹಾಗೂ ನೀರಿನ ಟ್ಯಾಂಕ್ ಸಂಪೂರ್ಣ ಹಾನಿಯಾಗಿದೆ. ನಾನು ಜೊಮ್ಯಾಟೋದಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಈಗ ಆಸರೆಯಿಲ್ಲದಂತಾಗಿದೆ ಎಂದು ಸಂತ್ರಸ್ತ ರಾಮಚಂದ್ರ ನಾಯ್ಕ ತಮ್ಮ ನೋವನ್ನು ತೋಡಿಕೊಂಡರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ಆನಂದ್ ಸಾಲೇರ್ ಅವರು ತಕ್ಷಣವೇ ನಗರಸಭೆ ಇಂಜಿನಿಯರ್‍ಗೆ ಕರೆ ಮಾಡಿ, ಮಳೆಯಿಂದಾಗಿ ಮಣ್ಣು ಪದೇ ಪದೇ ಕುಸಿಯುತ್ತಿರುವ ಪರಿಸ್ಥಿತಿಯನ್ನು ವಿವರಿಸಿದರು. ಹಾಗೂ ಸ್ಥಳಕ್ಕೆ ಭೇಟಿ ನೀಡಿ ಹಾನಿಗೆ ತಕ್ಕ ಪರಿಹಾರ ಒದಗಿಸುವಂತೆ ವಿನಂತಿಸಿದರು. ಇದಕ್ಕೆ ಸ್ಪಂದಿಸಿದ ಇಂಜಿನಿಯರ್ ಸುಫಿಯಾನ್ ಅವರು ಶೀಘ್ರದಲ್ಲೇ ಸ್ಥಳಕ್ಕೆ ಭೇಟಿ ನೀಡುವುದಾಗಿ ಭರವಸೆ ನೀಡಿದರು. ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಸಂತ್ರಸ್ತ ರಾಮಚಂದ್ರ ನಾಯ್ಕ ಅವರಿಗೆ ವೈಯಕ್ತಿಕವಾಗಿ ಆರ್ಥಿಕ ಸಹಾಯ ಹಸ್ತಾಂತರಿಸಿ, ನಾವು ನಿಮ್ಮೊಂದಿಗಿದ್ದೇವೆ ಎಂದು ಧೈರ್ಯ ತುಂಬಿದರು. ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ ಹಾಗೂ ನಗರಸಭೆ ಮಾಜಿ ಉಪಾಧ್ಯಕ್ಷ ರಮಾಕಾಂತ್ ಭಟ್ ಉಪಸ್ಥಿತರಿದ್ದರು.

ಗೃಹ ಬಳಕೆ ಸಿಲಿಂಡರ್‍ಗಳನ್ನು ವಾಣಿಜ್ಯ ಉದ್ದೇಶದ, ಹೋಟೆಲ್, ಬಾರ್ ರೆಸ್ಟೋರೆಂಟ್, ರೆಸಾರ್ಟ್, ಬೇಕರಿ, ಇತ್ಯಾದಿ ಉಪಯೋಗಕ್ಕೆ ಬಳಕೆ ಮಾಡಬಾರದು ಹಾಗೂ ಅಧಿಕೃತ ಏಜನ್ಸಿಯವರಿಂದ ವಾಣಿಜ್ಯ ಸಿಲಿಂಡರ್ ಬಿಲ್ ಪಡೆದುಕೊಂಡಿರಬೇಕು. ಆಹಾರ ನಾಗರಿಕ ಸರಬರಾಜು ಇಲಾಖೆಯಿಂದ ತಪಾಸಣೆ ಮಾಡುವಾಗ ಗೃಹಬಳಕೆ ಸಿಲಿಂಡರ್ ಬಳಕೆ ಮಾಡುವುದು ಕಂಡು ಬಂದರೆ ಅಥವಾ ವಾಣಿಜ್ಯ ಸಿಲಿಂಡರ್ ನ ಅಧಿಕೃತ ಬಿಲ್ ಇಲ್ಲದಿದ್ದರೇ ಅಂತವರ ಮೇಲೆ ಎಲ್ಪಿಜಿ ಸರಬರಾಜು ಮತ್ತು ವಿತರಣೆ ನಿಯಂತ್ರಣ ಆದೇಶ 2000 ದ ಪ್ರಕಾರ ಕ್ರಮ ತೆಗೆದುಕೊಂಡು, ಅವರಿಗೆ ವಾಣಿಜ್ಯ ಉದ್ದೇಶಕ್ಕಾಗಿ ವಾಣಿಜ್ಯ ತೆರಿಗೆ ಇಲಾಖೆ, ಕಾರ್ಮಿಕ ಇಲಾಖೆ, ಆಹಾರ ಸುರಕ್ಷತಾ ಇಲಾಖೆ, ನಗರಸಭೆ, ಪಟ್ಟಣ ಪಂಚಾಯತ್, ಗ್ರಾಮ ಪಂಚಾಯತ್ ಅವರಿಂದ ನೀಡಲಾಗುವ ಲೈಸನ್ಸ್ ಗಳನ್ನು ನವೀಕರಣ ಮಾಡಬಾರದು ಎಂದು ಪತ್ರ ಬರೆಯಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ತಾಲೂಕಿನ ತಹಶೀಲ್ದಾರ್ ಕಚೇರಿಯ ಆಹಾರ ಶಿರಸ್ತೇದಾರ/ಆಹಾರ ನಿರೀಕ್ಷಕರನ್ನು ಅಥವಾ ಉಪನಿರ್ದೇಶಕರು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉತ್ತರ ಕನ್ನಡ ಕಾರವಾರ ಇವರನ್ನು ಖುದ್ದಾಗಿ ಅಥವಾ ದೂರವಾಣಿ ಮೂಲಕ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಲ್ಲಾಪುರ ವಿಭಾಗದ ಕಿರವತ್ತಿ ವಲಯದ ಕಿರವತ್ತಿ ಶಾಖೆ, ಕೋಳಿಕೇರಿ ಶಾಖೆ ಹುಣಶೆಟ್ಟಿಕೊಪ್ಪ ಶಾಖಾ ವ್ಯಾಪ್ತಿಯ ಮದನೂರ ಗಾಂವಠಾಣಾದಲ್ಲಿ ಶ್ರೀ ಗ್ರಾಮ ದೇವಿ ದೇವಸ್ಥಾನ, ಅನ್ವರ ಕಾಸಿಂ ಶೇಖ, ಮೀರಮಹಮ್ಮದಗೌಸ ಮೀರರಜಾಕ, ವಿನಾಯಕ ತಿನ್ನೇಕರ ಸಾ. ಹುಣಶೆಟ್ಟಿಕೊಪ್ಪ, ಸದಾನಂದ ತಮ್ಮು ಕೇಸರಕರ, ಫಕೀರಪ್ಪಾ ಕಾಸಾರ,

ಅನಂತ ಕಲ್ಯಾಣಕರ ಮತ್ತು ಪುಂಡಲೀಕ ವಾರೇಗೌಡಾ. ಡೋಮಗೇರಿ ಗಸ್ತಿನ ಡೊಮಗೇರಿ ರಸ್ತೆ, ಇವರ ಮನೆಯ ಹತ್ತಿರವಿರುವ ಗೌಂವಠಾಣಾ ಪ್ರದೇಶ ಹಾಗೂ ಅಂಗನವಾಡಿ ಕೇಂದ್ರ ಖಾರವಾಡಾ ಶಾಲೆಗೆ ಇರುವ ಆತಂಕಕಾರಿ ಮರಗಳನ್ನು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ, ಯಲ್ಲಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಆದೇಶದಂತೆ ಜು.13 ರಂದು ಬೆಳಿಗ್ಗೆ 11 ಗಂಟೆಗೆ ಕಿರವತ್ತಿ ವಲಯದ ಆಯಾ ಶಾಖೆಗಳ ಎರಿಯಾದಲ್ಲಿ ಯಲ್ಲಾಪುರ ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ನೇತ್ರತ್ವದಲ್ಲಿ ಬಹಿರಂಗ ಹರಾಜು ಮಾಡಲಾಗುವುದು ಎಂದು ಕಿರವತ್ತಿ ವಲಯ ಅರಣ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

=======================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading