ತಾಲೂಕಾ ಪಂಚಾಯತಿ ಚುನಾವಣಾ ಮೀಸಲಾತಿಯಲ್ಲಿ ಬ ವರ್ಗಕ್ಕೆ ಅನ್ಯಾಯ, ಬಿಜೆಪಿಗರ ಆಕ್ಷೇಪ
ತಾಲೂಕಾ ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ಪ್ರಕಟವಾದ ಮೀಸಲಾತಿಯಲ್ಲಿ ಯಲ್ಲಾಪುರ ಕ್ಷೇತ್ರದಲ್ಲಿ”ಬ” ವರ್ಗಕ್ಕೆ ಅನ್ಯಾಯವಾಗಿದ್ದು ಇದನ್ನು ಖಂಡಿಸುವುದಾಗಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರವಿ ಕೈಟಕರ್ ಹಾಗೂ ನಟರಾಜ ಗೌಡರ್ ತಿಳಿಸಿದ್ದಾರೆ.
ಈ ಕುರಿತು ಶನಿವಾರ ಯಲ್ಲಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಲ್ಲಾಪುರ ಕ್ಷೇತ್ರದ ಯಲ್ಲಾಪುರ, ಮುಂಡಗೋಡ, ಬನವಾಸಿ ಭಾಗದಲ್ಲಿ “ಬ” ವರ್ಗಕ್ಕೆ ಸಂಬಂಧಿಸಿದ ಮರಾಠಾ, ಲಿಂಗಾಯತ, ಕ್ರಿಶ್ಚಿಯನ್ ಸಮುದಾಯವನ್ನು ಪ್ರತಿನಿಧಿಸುವವರ ಸಂಖ್ಯೆ 35 ರಿಂದ 40 ಸಾವಿರದಷ್ಟಿದೆ.
ತಾ.ಪಂ. ಮೀಸಲಾತಿಯಲ್ಲಿ “ಬ” ವರ್ಗದ ಈ ಸಮುದಾಯದವರಿಗೆ ಪ್ರಾತಿನಿಧ್ಯ ದೊರಕದ ಕಾರಣ, ದೊಡ್ಡ ಸಂಖ್ಯೆಯಲ್ಲಿರುವ ಈ ಸಮುದಾಯಗಳಿಗೆ ಅನ್ಯಾಯವಾದಂತಾಗಿದೆ. ನಾವು ಇದನ್ನು ಖಂಡಿಸುತ್ತೇವೆ, ಮೀಸಲಾತಿಯನ್ನು ಮರುಪರಿಶೀಲನೆ ನಡೆಸಬೇಕು, ಪ್ರಕಟವಾದ ಮೀಸಲಾತಿಯನ್ನು ಪರಿಷ್ಕರಿಸಿ “ಬ” ವರ್ಗಕ್ಕೆ ಆದ್ಯತೆ ನೀಡುವ ಮೂಲಕ ಬ ವರ್ಗದ ಸಮುದಾಯಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು.
ಯಲ್ಲಾಪುರ ತಾಲೂಕಿನಲ್ಲಿ ಈಬಾರಿ ತಾಲೂಕಾ ಪಂಚಾಯತಿ ಕ್ಷೇತ್ರಗಳ ಸಂಖ್ಯೆ ಕಡಿಮೆ ಮಾಡಲಾಗಿದೆ. ಈ ಹಿಂದೆ ಇದ್ದ 11 ಕ್ಷೇತ್ರಗಳನ್ನು ಈಗ 9 ಕ್ಷೇತ್ರಗಳಿಗೆ ಇಳಿಕೆ ಮಾಡಲಾಗಿದೆ. 13 ಕ್ಷೇತ್ರಗಳಷ್ಟಾದರೂ ಇದ್ದರೆ ಅಭಿವೃದ್ಧಿಗೆ ಅನುಕೂಲವಾಗುತ್ತಿತ್ತು. ಕ್ಷೇತ್ರಗಳ ಸಂಖ್ಯೆ ಕಡಿಮೆ ಮಾಡಿರುವುದರಿಂದ ಅನುದಾನ ಹಂಚಿಕೆಯಲ್ಲಿ ಸಮಸ್ಯೆ ಆಗಬಹುದು, ಅಭಿವೃದ್ಧಿ ಕೆಲಸಗಳಿಗೆ ಹಿನ್ನೆಡೆಯಾಗಬಹುದು ಎಂದರು.
“ಬ” ವರ್ಗಕ್ಕೆ ಮೀಸಲಾತಿಯಲ್ಲಿ ಆದ ಅನ್ಯಾಯದ ವಿರುದ್ಧ ಬಿಜೆಪಿ ಪಕ್ಷದಿಂದ ಆಕ್ಷೇಪಣೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು. ಪಕ್ಷದ ವಿಟ್ಟು ಪಾಂಡ್ರಮಿಸೆ, ಗಾಂಧಿ ಸೋಮಾಪುರಕರ್, ಚಂದ್ರು ಮಡಾಳಕರ್, ರವಿ ದೇವಾಡಿಗ, ಪ್ರಕಾಶ ಶಾಪೂರಕರ ಮುಂತಾದವರು ಇದ್ದರು.