





ನಾವೆಲ್ಲರೂ ಒಂದು ಎಂಬ ಭಾವನೆ ಬರಬೇಕು: ಬ್ರಹ್ಮಾನಂದ ಭಾರತೀ ಸ್ವಾಮೀಜಿ
ಜಾತಿಯ ಹೆಸರಿನಲ್ಲಿ ಸಮಾಜವನ್ನು ಕತ್ತರಿಸುವ ಕೆಲಸ ವಾಗುತ್ತಿದೆ, ಸಮಾಜವನ್ನು ಹೊಲಿಯಬೇಕಾಗಿದೆ, ಸೇರಿಸಬೇಕಾಗಿದೆ. ನಾವೆಲ್ಲರೂ ಒಂದು ನಾವೆಲ್ಲರೂ ಬಂಧು ನಾವೆಲ್ಲರೂ ಹಿಂದೂ ಎಂಬ ಭಾವನೆ ಎಲ್ಲರಲ್ಲೂ ಬರಬೇಕು ಎಂದು ಚೈತನ್ಯ ರಾಜಾರಾಮ ಕ್ಷೇತ್ರ ಶಿರಳಗಿಯ ಬ್ರಹ್ಮಾನಂದ ಭಾರತೀ ಸ್ವಾಮೀಜಿಗಳು ನುಡಿದರು.

ತಾಲೂಕಿನ ಕುಚಗುಂಡಿಯಲ್ಲಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಇನ್ನೊಬ್ಬರಿಗೆ ಒಳ್ಳೆಯದನ್ನು ಮಾಡಬೇಕು ಎಂಬ ಯೋಚನೆ ಬರುವುದು ಸಹ ಪೂರ್ವ ಜನ್ಮದ ಪುಣ್ಯ. ಇನ್ನೊಬ್ಬರ ಯಶಸ್ಸನ್ನು ನೋಡಿ ಖುಷಿ ಪಡುವವರ ಸಂಖ್ಯೆ ಅತೀ ವಿರಳ. ಇನ್ನೊಬ್ಬರ ಏಳಿಗೆಗೆ ಅಡ್ಡಗಾಲು ಹಾಕುವುದು ಧರ್ಮವಲ್ಲ. ಇನ್ನೊಬ್ಬರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದರೆ ಅದನ್ನು ಭಗವಂತ ಪೂಜೆ ಎಂದು ಪರಿಗಣಿಸುತ್ತಾನೆ.
ಮನುಷ್ಯನ ಶರೀರ ಇರುವುದೇ ಪರೋಪಕಾರಕ್ಕಾಗಿ. ಯಾವ ಅಪೇಕ್ಷೆಯೂ ಇಲ್ಲದೆ ಅನಂತಮೂರ್ತಿ ಹೆಗಡೆ ಯವರು ಸತ್ಕಾರ್ಯವನ್ನು ಮಾಡಿದ್ದಾರೆ. ಅವರಿಂದ ಒಂದಿಷ್ಟು ಜನರು ಪ್ರೇರಣೆ ಪಡೆಯಬೇಕು. ದೇಶ ಕಟ್ಟುವ ಕೆಲಸದಲ್ಲಿ ಕೈ ಜೋಡಿಸುವಂತಾಗಲಿ ಎಂದರು.
ಕುಟುಂಬ ಸೇರಿಕೊಂಡಿದೆ ಎಂದರೆ ಅದಕ್ಕೆ ಮಹಿಳೆಯರೇ ಕಾರಣ. ಗೃಹಿಣಿಯರು ಸರಿಯಿಲ್ಲದಿದ್ದರೆ ಆ ಮನೆ ದುಸ್ಥಿತಿಯತ್ತ ತೆರಳುತ್ತದೆ. ಮನೆ ಲವಲವಿಕೆಯಿಂದಿರಲು ಮನೆಯಲ್ಲಿ ಗೃಹಿಣಿ ಇರಬೇಕು. ಮಹಿಳೆಯರು ಬಟ್ಟೆಯನ್ನು ಮಾತ್ರ ಹೊಲಿಯದೇ ಕುಟುಂಬವನ್ನು ಬೆಸೆಯುವ ಕೆಲಸ ಮಾಡಬೇಕಿದೆ. ಮನೆಯನ್ನು ಒಡೆಯಲು ಬಿಡದೆ ಸೇರಿಸಿಕೊಂಡು ಹೋಗುವ ಕೆಲಸ ಮಹಿಳೆಯರಿಂದ ಆಗುವಂತೆ ಆಗಲಿ ಎಂದರು.
ಕುಟುಂಬದಲ್ಲಿ ಆತ್ಮೀಯತೆ ಇದ್ದರೆ ಇನ್ನೊಬ್ಬರ ಮುಂದೆ ಕೈ ಚಾಚುವ ಪರಿಸ್ಥಿತಿ ಬರುವುದಿಲ್ಲ. ಸಮಾಜದಲ್ಲಿ ಮಾನಸಿಕ ಸ್ವಾಸ್ಯದ ಕುಸಿತ ವಾಗುತ್ತಿದೆ. ಇದು ಆಗಬಾರದು.
ಭಾರತೀಯ ಸಂಸ್ಕøತಿಯನ್ನು ಒಡೆಯುವ ಹುನ್ನಾರ ನಡೆಯುತ್ತಿದೆ. ಇದಕ್ಕೆ ನಾವು ಅವಕಾಶ ನೀಡಬಾರದು. ನಾವೆಲ್ಲರೂ ಒಂದು ಎಂಬ ಭಾವನೆ ಬರಬೇಕು. ಈ ಭಾವನೆ ಬರಲು ಊರಿನಲ್ಲಿ ಒಂದು ದೇವಸ್ಥಾನ ಇರಬೇಕು ಎಂದರು. ಊರು ಸುಂದರವಾಗಿರಲು ಆ ಊರಿನ ದೇವಸ್ಥಾನ ಸುಂದರವಾಗಿರಬೇಕು. ಪೂಜೆ ಧ್ಯಾನಗಳು ನಡೆಯುವುದರಿಂದ ಊರಿನ ಅಭಿವೃದ್ಧಿಯಾಗುತ್ತದೆ. ಮನಸ್ಸಿನ ಸಂಕಲ್ಪಕ್ಕೆ ಅಪಾರ ಶಕ್ತಿಯಿದೆ. ನಮ್ಮೂರ ದೇವಸ್ಥಾನ ನಮ್ಮ ಸ್ವಾಭಿಮಾನ ಎಂಬ ಅಭಿಮಾನ ಎಲ್ಲರಲ್ಲೂ ಬರಬೇಕು ಎಂದರು.
ಪತ್ರಕರ್ತ ಪ್ರವೀಣ ಹೆಗಡೆ ಕರ್ಜಗಿ, ಹಸ್ರಗೋಡ ಗ್ರಾಪಂ ಮಾಜಿ ಅಧ್ಯಕ್ಷ ಪ್ರದೀಪ ಹೆಗಡೆ ಕರ್ಜಗಿ ಮುಂತಾದವರು ಮಾತನಾಡಿದರು. ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಕುಚಗುಂಡಿ ಗ್ರಾಮಸ್ಥರು ನಮಗೆ ಬಹಳ ಆತ್ಮೀಯತೆ ತೋರುತ್ತಿದ್ದಾರೆ. ಈ ಮೊದಲು ಇದೇ ಗ್ರಾಮದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಸಲಾಗಿತ್ತು. ಇದೀಗ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಶಿಬಿರವನ್ನು ನಡೆಸಿದ್ದೇವೆ. ಹೊಲಿಗೆ ಕಲಿಕೆ ಮಹಿಳೆಯರಿಗೆ ಅತೀ ಅವಶ್ಯಕವಾಗಿ ಬೇಕಾಗಿರುವಂತದ್ದು. ಜೀವನದಲ್ಲಿ ಅಡುಗೆ ಹಾಗೂ ಹೊಲಿಗೆ ಎರಡು ವಿದ್ಯೆಯನ್ನು ನಾವು ಕಲಿತರೆ ಸ್ವಾವಲಂಬಿಯಾಗಿ ಬದುಕಲು ಬಹಳ ಸಹಕಾರಿಯಾಗಲಿದೆ. ಮಹಿಳೆಯರು ಸ್ವ ಉದ್ಯೋಗ ಮಾಡಿದರೆ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಪ್ರಮುಖ ಅಣ್ಣಪ್ಪ ಗೌಡ, ಗ್ರಾಪಂ ಮಾಜಿ ಸದಸ್ಯ ಕೆರಿಯಾ ಗೌಡ, ದೇವಸ್ಥಾನದ ಅಧ್ಯಕ್ಷ ಸುಬ್ರಾಯ ಹೆಗಡೆ, ನಾರಾಯಣ ಹೆಗಡೆ ಚಾರೇಕೊಣೆ ,ಹೊಲಿಗೆ ಶಿಕ್ಷಕಿ ಆಶಾ ಶಿರಸಿ ಹಾಗೂ ಯಲುಗಾರ, ದಂಟಕಲ್ , ಕುಚಗುಂಡಿ ಗ್ರಾಮಸ್ಥರು ಸೇರಿದಂತೆ ಹಲವರು ಇದ್ದರು. ನೇತ್ರಾವತಿ ಹೆಗಡೆ ಸ್ವಾಗತಿಸಿದರು. ಗುರುನಾಥ ಹುಕ್ಲಕೈ ನಿರೂಪಿಸಿದರು. ವಿನಯ ದಂಟಕಲ್ ವಂದಿಸಿದರು.

===============














