




ನದಿ ಜೋಡಣೆ ವಿರುದ್ಧದ ಹೋರಾಟಕ್ಕೆ ಸ್ಪಂದಿಸದ ಸರ್ಕಾರ, ಹೆದ್ದಾರಿ ತಡೆ ಅನಿವಾರ್ಯ

ಉತ್ತಮ ಪರಿಸರ, ಪಶ್ಚಿಮ ಘಟ್ಟ ಪ್ರದೇಶವಾದರೂ ಜಿಲ್ಲೆಯ ಘಟ್ಟದ ಮೇಲ್ಭಾಗದಲ್ಲಿ ನೀರಿನ ತೀವೃ ತೊಂದರೆಯಾಗುತ್ತಿದೆ. ಅಂತಹ ಸ್ಥಿತಿಯಲ್ಲಿ ಸರ್ಕಾರ ಅಘನಾಶಿನಿ-ವರದಾ-ಬೇಡ್ತಿ ನದಿಗಳ ನೀರನ್ನು ಹಾವೇರಿ, ಗದಗ ಜಿಲ್ಲೆಗಳಿಗೆ ಸಾವಿರಾರು ಕೋಟಿ ವೆಚ್ಛ ಮಾಡಿ ಒಯ್ಯುವುದಕ್ಕೆ ಮುಂದಾಗಿರುವುದು ತೀರಾ ಅವೈಜ್ಞಾನಿಕ. ಈ ಕುರಿತು ಪೂಜ್ಯ ಸ್ವರ್ಣವಲ್ಲಿ ಶ್ರೀಗಳ ನೇತೃತ್ವದಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಹೋರಾಟ ನಡೆಸಿದ್ದೇವೆ. ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಮೇಲೆ ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಹರಿಪ್ರಕಾಶ ಕೋಣೆಮನೆ ಹೇಳಿದರು.

ಅವರು, ಮಂಗಳವಾರ ಪಟ್ಟಣದ ಅಡಿಕೆಭವನದಲ್ಲಿ ನ.3 ರಂದು ರಾಷ್ಟ್ರೀಯ ಹೆದ್ದಾರಿ ಮೇಲೆ ನಡೆಯುವ ಚಳುವಳಿಯ ಪೂರ್ವಸಿದ್ಧತಾ ಸಭೆಯಲ್ಲಿ ಚಳುವಳಿಯ ರೂಪುರೇಷೆ ಕುರಿತು ಮಾಹಿತಿ ನೀಡಿದರು.
ರಾಷ್ಟ್ರೀಯ ಹೆದ್ದಾರಿಯ ಮೇಲೆ ಚಳುವಳಿ ಮಾಡುವುದು ಕಾನೂನು ಪ್ರಕಾರ ಅಲ್ಲವಾದರೂ ಸರ್ಕಾರ ನಮ್ಮ ಒಂದೂವರೆ ವರ್ಷದ ಹೋರಾಟಕ್ಕೆ ಬೆಲೆ ಕೊಡದೇ ಇರುವುದರಿಂದ ಅನಿವಾರ್ಯವಾಗಿ ಈ ಹೋರಾಟಕ್ಕೆ ಮುಂದಾಗಬೇಕಾಯಿತು.
ನಮ್ಮ ಪೂರ್ಣಪ್ರಮಾಣದ ಹೋರಾಟದ ಶಕ್ತಿಯೇ ಸ್ವರ್ಣವಲ್ಲಿ ಶ್ರೀಗಳು. ಅವರ ಮಾರ್ಗದರ್ಶನದಲ್ಲಿ ಈ ಹೋರಾಟ ನಡೆಯುತ್ತಿದೆ. ಅವರು ಈ ಹೋರಾಟ ಐತಿಹಾಸಿಕವಾಗುವಷ್ಟು ಜನ ಸೇರಬೇಕು. ಅಹಿಂಸಾತ್ಮಕವಾಗಿ ಅತ್ಯಂತ ಶಾಂತಿಯಿಂದ ಹೋರಾಟ ನಡೆಸಬೇಕು. ಯಾವುದೇ ಕಾರಣಕ್ಕೂ ಹೋರಾಟದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಆಗದಂತೆ ಪ್ರತಿಯೊಬ್ಬರೂ ನಿಗಾ ವಹಿಸಬೇಕು ಎಂದು ಪೂಜ್ಯರು ನಿರ್ದೇಶಿಸಿದ್ದಾರೆ. ಶಿರಸಿ, ಸಿದ್ದಾಪುರ, ಅಂಕೋಲಾ, ಕುಮಟಾ, ಜೊಯಿಡಾ, ದಾಂಡೇಲಿ, ಮುಂಡಗೋಡು ಭಾಗಗಳಿಂದ ಸುಮಾರು 8 ಸಾವಿರಕ್ಕೂ ಹೆಚ್ಚಿನ ಜನರಲ್ಲದೇ ಕಾಲೇಜು ವಿದ್ಯಾರ್ಥಿಗಳೂ ಭಾಗವಹಿಸುತ್ತಾರೆ.
ತಾಲೂಕಿನ ಪ್ರತಿ ಪಂಚಾಯತಗಳಿಂದ ಕನಿಷ್ಟ 2 ಸಾವಿರ ಜನರು ಭಾಗವಹಿಸಲಿದ್ದಾರೆ. ಈ ಎಲ್ಲ ಕಾರಣಗಳಿಂದ 20 ಸಾವಿರಕ್ಕೂ ಹೆಚ್ಚಿನ ಜನ ಸೇರುವ ನಿರೀಕ್ಷೆಯಿದೆ. ಅಲ್ಲದೇ ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟುಗಳು, ಔಷಧಿ ಅಂಗಡಿ, ಹೊಟೇಲ್‍ಗಳು ಸ್ವಯಂಪ್ರೇರಿತವಾಗಿ ಬಂದ್ ಮಾಡಲು ಮುಂದಾಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹೋರಾಟ ಸಮಿತಿಯ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಈ ಹೋರಾಟ ತಾಲೂಕಿನ, ಜಿಲ್ಲೆಯ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಇದು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾದುದ್ದಲ್ಲ. ಪೂಜ್ಯರ ಸಲಹೆಯಂತೆ ಅಹಿಂಸಾತ್ಮಕ ಚಳುವಳಿ. ಪೂಜ್ಯರು ಸಾಕಷ್ಟು ಬಾರಿ ಚಳುವಳಿಯನ್ನು ಬಹಳ ಎಚ್ಚರಿಕೆಯಿಂದ ಮಾಡಿ ಎಂದು ಸೂಚಿಸಿದ್ದಾರೆ. ಇದು ನಮ್ಮ ಮುಂದಿನ ಜನಾಂಗದ ಬದುಕಿನ ಪ್ರಶ್ನೆಯಾಗಿದೆ ಎಂದರು.
ಗೊಪಾಲಕೃಷ್ಣ ಭಟ್ಟ ಹಂಡ್ರಮನೆ ಮಾತನಾಡಿ, ನಮ್ಮ ಹೋರಾಟದಲ್ಲಿ ಕಠಿಣತ್ವ ಇರಬೇಕು. ಹಾಗಂತ ಎಂದೂ ಶಾಂತಿಗೆ ಭಂಗವಾಗದೇ ಹೋರಾಟ ನಡೆಸಬೇಕು. ಅಶಾಂತಿ, ಅಹಿತಕರ ಘಟನೆ ನಡೆದರೆ ಪೂಜ್ಯರಿಗೂ ನಾವು ಕೆಟ್ಟ ಹೆಸರು ತಂದಂತಾಗುತ್ತದೆ. ಆದ್ದರಿಂದ ಈ ಹೋರಾಟದಲ್ಲಿ ಭಾಗವಹಿಸುವ ಪ್ರತಿಯೊಬ್ಬ ವ್ಯಕ್ತಿಯೂ ತಾಳ್ಮೆಯಿಂದ ಹಿರಿಯರ ಮಾರ್ಗದರ್ಶನದಲ್ಲಿ ಸಲಹೆ-ಸೂಚನೆಯನ್ನು ಮೀರದೇ ನಡೆದುಕೊಳ್ಳಬೇಕು ಎಂದು ವಿನಂತಿಸಿದರು.
ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, 20 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯನ್ನು ಸಂಘಟಕರು ಹೊಂದಿದ್ದಾರೆ. ಅದಕ್ಕಾಗಿ ನಾಲ್ಕೈದು ಆಂಬುಲೆನ್ಸ್, ಸಂಚಾರಿ ಶೌಚಾಲಯಗಳ ವ್ಯವಸ್ಥೆ ಮಾಡಲೇಬೇಕಾಗುತ್ತದೆ. ಐದು-ಆರು ಘಂಟೆ ಮಹಿಳೆಯರು ಇರುವುದರಿಂದ ಅನಿವಾರ್ಯವಾಗಿ ಈ ವ್ಯವಸ್ಥೆಯನ್ನು ಮಾಡಲೇಬೇಕು. ಭಾರೀ ಬಿಸಿಲಿರುವುದರಿಂದ ವೈದ್ಯಕೀಯ ವ್ಯವಸ್ಥೆಯೂ ಅಗತ್ಯವಾಗಿದೆ ಎಂದರು.
ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಮಾತನಾಡಿ, ಪಟ್ಟಣದ ಎಲ್ಲ ವ್ಯಾಪಾರಸ್ಥರು ಸ್ವಯಂಸ್ಪೂರ್ತಿಯಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಸಹಕರಿಸಬೇಕು. ಯಾವುದೇ ಅಹಿತಕರ ಘಟನೆ ಆಗದಂತೆ ಪ್ರತಿಯೊಬ್ಬರೂ ಗಮನಹರಿಸಬೇಕು. ಇದು ನಮ್ಮ ಜಿಲ್ಲೆಯ, ತಾಲೂಕಿನ ಭವಿಷ್ಯತ್ತಿನ ಪ್ರಶ್ನೆಯಾಗಿದೆ ಎಂದರು.
ಹೋರಾಟ ಸಂಚಾಲಕರಾದ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ರಾಘವೇಂದ್ರ ಭಟ್ಟ ಹಾಸಣಗಿ, ವಿನಾಯಕ ಪೈ, ನರಸಿಂಹ ಸಾತೊಡ್ಡಿ, ಎಂ.ಡಿ.ಮುಲ್ಲಾ ಮುಂತಾದವರು ಸಾಂದರ್ಭಿಕವಾಗಿ ಮಾತನಾಡಿದರು. ಪ್ರಮುಖರಾದ ರವಿ ಬದ್ದಿ, ಡಿ.ಜಿ.ಹೆಗಡೆ, ಗಜಾನನ ನಾಯ್ಕ, ಸುರೇಶ ಪಾಟಣಕರ, ವಿ.ಟಿ.ಹೆಗಡೆ, ಭಾಸ್ಕರ ಸಿದ್ದಿ, ರವಿ ದೇವಾಡಿಗ, ಸಂತೋಷ ಎ.ಎಸ್ ಮುಂತಾದವರು ಉಪಸ್ಥಿತರಿದ್ದರು.

=================














