ಭಗವದ್ಗೀತೆಯ ಆರಾಧನೆ ಮತ್ತು ಭಗದ್ಗೀತೆಯ ಸೇವೆಯು ಭಗವಂತನ ಸೇವೆಯಾಗಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ಭಗವದ್ಗೀತಾ ಅಭಿಯಾನದ ಅಂಗವಾಗಿ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಮಹಿಳಾ ಸಮಾಜ ವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಭಗವದ್ಗೀತಾ ಉಪನ್ಯಾಸಕರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಗವದ್ಗೀತಾ ಅಭಿಯಾನಕ್ಕೆ ನಿರ್ಧಿಷ್ಟವಾದ ಗುರಿ, ಉದ್ದೇಶ ಇದೆ. ವ್ಯಕ್ತಿತ್ವ ವಿಕಸನ, ನೈತಿಕತೆಯ ಪುನರುತ್ಥಾನ, ಸಾಮಾಜಿಕ ಸಾಮರಸ್ಯ, ರಾಷ್ಟ್ರೀಯ ಭಾವೈಕ್ಯತೆ ಇವುಗಳಿಗಾಗಿ ಅಭಿಯಾನ ನಡೆಯುತ್ತಿದೆ.

ಎಲ್ಲೆಡೆಯೂ ಗೀತೆಯ ಪ್ರಸಾರ, ಪಠಣ ಆಗಬೇಕು, ಭಕ್ತಿಯ ಭಾವುಕತೆ ಮತ್ತು ವೈಚಾರಿಕ, ವೈಜ್ಞಾನಿಕ ಹಿನ್ನೆಲೆಯಲ್ಲಿ ಗೀತೆಗೆ ಮಹತ್ವದ ಸ್ಥಾನ ಇದೆ. ಇಂತಹ ಮಹತ್ವದ ಅಂಶಗಳನ್ನು ಮತ್ತು ಅಭಿಯಾನದ ಉದ್ದೇಶಗಳನ್ನು ಅರ್ಥಮಾಡಿಕೊಂಡರೆ ಅಭಿಯಾನದ ಉದ್ದೇಶ ಸಾರ್ಥಕವಾದಂತಾಗುತ್ತದೆ ಎಂದರು. ಗೀತೆಯನ್ನು ಓದುವುದರಿಂದ ಮಕ್ಕಳ ಜ್ಞಾನ ವೃದ್ಧಿಯಾಗುತ್ತದೆ. ಶ್ರದ್ಧೆ, ಸಂಯಮ, ತತ್ಪರತೆಯಿಂದ ಸಾಧನೆ ಸುಲಭವಾಗುತ್ತದೆ. ಎಲ್ಲ ವಯೋಮಾನದವರು ಯಾವುದೇ ಬೇಧಭಾವ ಇಲ್ಲದೇ ಗೀತೆಯನ್ನು ಓದಬಹುದು, ಗೀತೆಯ ಸಂದೇಶವು ಎಲ್ಲೆಡೆ ತಲುಪಬೇಕು.

ಗೀತೆಯ ಪಠಣ ಮತ್ತು ಉಪಪನ್ಯಾಸ ಇವು ಅಭಿಯಾನದ ಎರಡು ಪ್ರಮುಖ ಭಾಗಗಳಾಗಿವೆ. ಗೀತೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಉಪನ್ಯಾಸವು ಹೆಚ್ಚು ಪರಿಣಾಮಕಾರಿಯಾಗಿದೆ. ಹೀಗಾಗಿ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಹೆಚ್ಚು, ಹೆಚ್ಚು ಶ್ಲೋಕ ಪಠಣ ಕೇಂದ್ರಗಳನ್ನು ಮತ್ತು ಉಪನ್ಯಾಸವನ್ನು ಆಯೋಜಿಸಬೇಕು ಎಂದು ಸೂಚಿಸಿದರು.

ಅಭಿಯಾನದ ರಾಜ್ಯ ಪ್ರಮುಖರಾದ ಡಾ.ಶಂಕರ ಭಟ್ಟ ಬಾಲಿಗದ್ದೆ ಮಾತನಾಡಿ, ಶ್ರೀಗಳ ಮಾರ್ಗದರ್ಶನದಲ್ಲಿ
ಭಗವದ್ಗೀತೆಯ ಅಭಿಯಾನವು ಪಂಚಮುಖಿ ಅಭಿಯಾನವಾಗಿ ರಾಜ್ಯಾದ್ಯಂತ ನಡೆಯುತ್ತಿದೆ. ಈ ವರ್ಷ ಆಯ್ಕೆಮಾಡಿರುವ ಗೀತೆಯ ಎರಡನೇ ಅಧ್ಯಾಯವು ವ್ಯಕ್ತಿತ್ವದ ನಿರೂಪಣೆ ಮತ್ತು ಸೂತ್ರ ರೂಪದಲ್ಲಿರುವ ಪ್ರಧಾನ ಅಧ್ಯಾಯವಾಗಿದೆ, ವಿಷಯವನ್ನು ಸರಿಯಾಗಿ ಅರಿತುಕೊಂಡು, ಸರಿಯಾದ ಸಿದ್ಧತೆಯೊಂದಿಗೆ ಉಪನ್ಯಾಸ ನೀಡಬೇಕು ಎಂದರು. ಎಲ್ಲಾ ಶ್ಲೋಕ ಪಠಣ ಕೇಂದ್ರಗಳಲ್ಲಿ ಉಪನ್ಯಾಸ ಆಯೋಜಿಸಬೇಕು ಎಂದು ಮಾರ್ಗದರ್ಶನ ಮಾಡಿದರು.

ಶೃಂಗೇರಿಯ ರಾಜೀವ ಗಾಂಧಿ ವಿದ್ಯಾಪೀಠದ ಉಪನ್ಯಾಸಕ ಡಾ.ಗಣೇಶ ಭಟ್ಟ ಗೀತೆಯ ಮಹತ್ವ ಮತ್ತು ಉಪನ್ಯಾಸ ಸಂಘಟನೆಯ ಬಗ್ಗೆ ವಿವರಿಸಿದರು. ಕಾರ್ಯಾಗಾರದಲ್ಲಿ ವಿಜಯನಗರ ಜಿಲ್ಲಾ ಭಗವದ್ಗೀತಾ ಅಭಿಯಾನ ಸಮೀತಿಯ ಅಧ್ಯಕ್ಷ ಪಿ.ಡಿ.ಗೌತಮ್, ಕಾರ್ಯಾಧ್ಯಕ್ಷ ಅನಂತ ಜೋಷಿ,

ಯಲ್ಲಾಪುರ ತಾಲೂಕಾ ಭಗವದ್ಗೀತಾ ಅಭಿಯಾನ ಸಮೀತಿಯ ಅಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ, ವಿಜಯನಗರ ಜಿಲ್ಲಾ ಭಗವದ್ಗೀತಾ ಅಭಿಯಾನ ಸಮೀತಿಯ ಪ್ರಭಾಸ ಭಟ್ಟ, ದೀಪಕ ಭಾಟೆ, ಹರಿಹರ ಭಟ್ಟ ಶ್ರೀಮಠದ ಪ್ರತಿನಿಧಿ ಕೀರ್ತಿರಾಜ ಕೋಟೆಮನೆ ಮುಂತಾದವರು ಇದ್ದರು.

ಶನಿವಾರ ಸಂಜೆ 4 ಗಂಟೆಗೆ ಹೊಸಪೇಟೆಯ ಹೊಟೇಲ್ ಮಲ್ಲಿಗಿ ವೈಭವಂ ಸಭಾಭವನದಲ್ಲಿ ಸ್ವರ್ಣವಲ್ಲೀ ಶ್ರೀಗಳು ಹಾಗೂ ವಿವಿಧ ಮಠಾಧೀಶರು, ಗಣ್ಯರ ಉಪಸ್ಥಿತಿಯಲ್ಲಿ ರಾಜ್ಯಮಟ್ಟದ ಭಗವದ್ಗೀತಾ ಅಭಿಯಾನದ ಉದ್ಘಾಟನೆ ನಡೆಯಲಿದೆ.

============

Leave a Reply

You cannot copy content of this page