ಯಲ್ಲಾಪುರ ಪಟ್ಟಣದ ಸಾಹಿತ್ಯ ಭವನದಲ್ಲಿ ರವಿವಾರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಕನ್ನಡ ಧ್ವಜಾರೋಹಣ ಹಾಗೂ ಕನ್ನಡ ಕಾರ್ತಿಕ ವಿಶೇಷ ಕಾರ್ಯಕ್ರಮದ ಅಂಗವಾಗಿ ಕನ್ನಡ ನಾಡು, ನುಡಿಯ ಬಗ್ಗೆ ಉಪನ್ಯಾಸ ನಡೆಯಿತು.

ಬರಹಗಾರ ದತ್ತಾತ್ರೇಯ ಕಣ್ಣೀಪಾಲ ಉಪನ್ಯಾಸ ನೀಡಿ ಮಾತನಾಡಿ, ಆಧುನಿಕ ಭರಾಟೆಯಲ್ಲಿ ಕನ್ನಡ ಭಾಷೆಯ ಅಂತಃಸತ್ವ ಕ್ಷಿಣವಾಗುತ್ತಿದೆ, ಕನ್ನಡ ಭಾಷೆಯು ಮೂಲ ಸತ್ವವನ್ನು ಬಿಟ್ಟು ಪಲ್ಲಟವಾಗುತ್ತಿರುವುದು ಆತಂಕದ ಸಂಗತಿಯಾಗಿದೆ, ಕನ್ನಡ ಸಾಹಿತ್ಯವನ್ನು ಓದುವ ಅಭಿರುಚಿ ಬೆಳೆಸಿಕೊಂಡರೆ ನಮ್ಮ ಮಾತೃಭಾಷೆಯ ಉಳಿವಿಗೆ ಮತ್ತು ಭಾಷಾ ಬೆಳವಣಿಗೆಗೆ ಹೆಚ್ಚು ಅನುಕೂಲವಾಗುತ್ತದೆ.

ಇಂದಿನ ಎಐ ಯುಗದಲ್ಲಿ ಕನ್ನಡ ಭಾಷೆಯ ಬಳಕೆಯು ಸಂಕ್ಷಿಪ್ತವಾಗುತ್ತಿದೆ, ಭಾಷಾಪ್ರೀತಿ ದೂರವಾಗುತ್ತಿದೆ, ಮಾತೃಭಾಷೆಯಲ್ಲಿ ಸಂವಹನ ನಡೆಸುವುದು ವಿರಳವಾಗುತ್ತಿದೆ, ಇದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಸರ್ಕಾರದಿಂದಲೂ ಕನ್ನಡ ಭಷೆಯ ಬೆಳವಣಿಗೆಗೆ ಇನ್ನಷ್ಟು ಪ್ರೋತ್ಸಾಹ ಸಿಗುವಂತಾಗಬೇಕು, ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಲು ಶೈಕ್ಷಣಿಕವಾಗಿ ಇನ್ನಷ್ಟು ಸುಧಾರಣೆ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿ.ಸುಬ್ರಹ್ಮಣ್ಯ ಭಟ್ಟ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ನಾಡು ನುಡಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ ಎಂದರು.

ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಜಿ.ಎನ್.ಭಟ್ ತಟ್ಟಿಗದ್ದೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ, ನಾಟಕಕಾರ ಟಿ.ವಿ.ಕೋಮಾರ್, ಕಸಾಪ ಸದಸ್ಯರಾದ ಜಿ.ಆರ್.ಹೆಗಡೆ, ಶ್ರೀಧರ ಅಣಲಗಾರ ಮುಂತಾದವರು ಇದ್ದರು.

ಇದೇ ಸಂದರ್ಭದಲ್ಲಿ ನಿವೃತ್ತ ದೈಹಿಕ ಶಿಕ್ಷಕ ಜಿ.ಎಂ.ತಾಂಡೂರಾಯನ್ ದಂಪತಿಯನ್ನು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.

ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರವಿವಾರ ಬೆಳಿಗ್ಗೆ ಪಟ್ಟಣದ ಸಾಹಿತ್ಯ ಭವನದಲ್ಲಿ ನಾಡ ಧ್ವಜಾರೋಹಣ, ಧ್ವಜ ವಂದನೆ ನಡೆಯಿತು. ಕಸಾಪ ಅಧ್ಯಕ್ಷ ವಿ.ಸುಬ್ರಹ್ಮಣ್ಯ ಭಟ್ಟ, ಗೌರವ ಕಾರ್ಯದರ್ಶಿಗಳಾದ ಜಿ.ಎನ್.ಭಟ್ ತಟ್ಟಿಗದ್ದೆ, ಸಂಜೀವಕುಮಾರ ಹೊಸ್ಕೇರಿ, ಖಜಾಂಚಿ ಡಿ.ಎನ್.ಗಾಂವ್ಕಾರ್, ಸದಸ್ಯರಾದ ಬೀರಣ್ಣ ನಾಯಕ ಮೊಗಟಾ, ಟಿ.ವಿ.ಕೋಮಾರ, ಜಿ.ಆರ್.ಹೆಗಡೆ, ದತ್ತಾತ್ರೇಯ ಕಣ್ಣಿಪಾಲ, ಮುಕ್ತಾ ಶಂಕರ, ಟಿ.ಶಂಕರ ಭಟ್ಟ, ಸುಬ್ರಾಯ ಗಾಂವ್ಕಾರ, ಶ್ರೀಧರ ಅಣಲಗಾರ ಮುಂತಾದವರು ಇದ್ದರು.

==================

Leave a Reply

You cannot copy content of this page