ನದಿ ತಿರುವು ಯೋಜನೆಯನ್ನು ವಿರೋಧಿಸಿ ನ.3 ರಂದು ಯಲ್ಲಾಪುರದಲ್ಲಿ ನಡೆಯಲಿರುವ ಹೆದ್ದಾರಿ ತಡೆ ಪ್ರತಿಭಟನೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೆದ್ದಾರಿ ತಡೆ ಪ್ರತಿಭಟನಾ ಸಮೀತಿಯ ಪ್ರಧಾನ ಸಂಚಾಲಕ ಹರಿಪ್ರಕಾಶ ಕೋಣೆಮನೆ ಹೇಳಿದರು.

ಅವರು ಸಮೀತಿಯ ಪ್ರಮುಖರೊಂದಿಗೆ ರವಿವಾರ ಯಲ್ಲಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಹಲವು ಹಂತಗಳಲ್ಲಿ ನದಿ ತಿರುವು ಯೋಜನೆ ವಿರುದ್ಧ ಪ್ರತಿಭಟನೆ ನಡೆದಿದೆ. ಆದರೆ ನಮ್ಮ ಬೆಡಿಕೆಗೆ ಸರ್ಕಾರಗಳು ಸ್ಪಂದಿಸಿಲ್ಲ, ನಮ್ಮ ಪ್ರತಿಭಟನೆಯ ಕಾವು ಹೆಚ್ಚಾದಂತೆ ಸರ್ಕಾರಗಳು ಯೋಜನೆಯ ಪರವಾಗಿ ಒಂದು ಹೆಜ್ಜೆ ಮುಂದಿಡುತ್ತಿರುವುದನ್ನು ನಾವು ಗಮನಿಸಿದ್ದೇವೆ. ಯೋಜನೆಯನ್ನು ವಿರೋಧಿಸಿ ಇತ್ತೀಚೆಗೆ ಶಿರಸಿ, ಬೆಂಗಳೂರಿನಲ್ಲಿ ನಡೆದ ಹೋರಾಟಕ್ಕೆ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರೆಯಲಿಲ್ಲ,

ಸ್ವರ್ಣವಲ್ಲೀ ಶ್ರೀಗಳ ಮಾರ್ಗದರ್ಶನದಲ್ಲಿ ಹೋರಾಟ ನಡೆಯುತ್ತಿದ್ದು, ಈಗಾಗಲೇ ತಾಲೂಕಿನ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜನಜಾಗೃತಿ ಸಭೆ ನಡೆಸಲಾಗಿದೆ. ಪಕ್ಷ, ಜಾತಿ ಮುಂತಾದವುಗಳನ್ನು ಮೀರಿ ಹೋರಾಟ ಸಮಿತಿ ರಚನೆಯಾಗಿದೆ, ಸಮೀತಿಯವರು ಮನೆಮನೆಗೆ ಸಂಪರ್ಕ ಮಾಡಿದ್ದಾರೆ, ಈಗಾಗಲೇ ಜನರು ಸ್ವಯಂಸ್ಪೂರ್ತಿಯಿಂದ ಎಲ್ಲೆಡೆ ಬ್ಯಾನರ್ ಅಳವಡಿಸಿದ್ದಾರೆ. ಎಂದರು.

ಹೆದ್ದಾರಿ ತಡೆ ಪ್ರತಿಭಟನೆಯು ಐತಿಹಾಸಿಕವಾಗಲಿದೆ. ಪ್ರತಿಭಟನೆಯಲ್ಲಿ ಯಲ್ಲಾಪುರ ತಾಲೂಕಿನಿಂದ 15 ಸಾವಿರ ಜನರು ಹಾಗೂ ಇನ್ನುಳಿದ ತಾಲೂಕುಗಳಿಂದ ಐದಾರು ಸಾವಿರ ಜನ ಬರಬಹುದು, ಒಟ್ಟಾರೆ 20 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ, ಪ್ರತಿಭಟನೆಗೆ ಆಗಮಿಸುವವರ ವಾಹನ ನಿಲುಗಡೆ ವ್ಯವಸ್ಥೆ ಆಗಿದೆ, ಊಟೋಪಚಾರ ಸೇರಿದಂತೆ ಹತ್ತು ವಿಭಾಗದ ಒಂದು ಸಾವಿರ ಕಾರ್ಯಕರ್ತರು ವ್ಯವಸ್ಥೆಯಲ್ಲಿ ತೊಡಗಿದ್ದಾರೆ, ಅಂದು ಬೆಳಿಗ್ಗೆ 9.30 ಒಳಗೆ ಜನರು ಯಲ್ಲಾಪುರಕ್ಕೆ ತಲುಪಬೇಕು,

ಪಟ್ಟಣದ ಟಿ.ಎಂ.ಎಸ್. ಎದುರು ಹಾಕಲಾಗುವ ವೇದಿಕೆಯಲ್ಲಿ ಹೋರಾಟದ ರೂಪುರೇಷೆಯ ಬಗ್ಗೆ ಪರಿಸರವಾದಿಗಳಾದ ಬಿ.ಎಂ.ಕುಮಾರಸ್ವಾಮಿ, ಗೋವಾದ ಕಳಾನಂದ ಮಣಿ ಮಾತನಾಡುತ್ತಾರೆ, ನಂತರ ಮೆರವಣಿಗೆಯ ಮೂಲಕ ಬಂದು ಎಲ್.ಎಸ್.ಎಂ.ಪಿ ಸೊಸೈಟಿ ಎದುರು ಹೆದ್ದಾರಿ ತಡೆ ನಡೆಯಲಿದೆ ಎಂದರು. ಈಗಾಗಲೇ ಪ್ರತಿಭಟನೆ ಮತ್ತು ನಮ್ಮ ಬೇಡಿಕೆಯ ಬಗ್ಗೆ ಬಗ್ಗೆ ಜಿಲ್ಲೆಯ ಎಲ್ಲ ಹಂತದ ಜನಪ್ರತಿನಿಧಿಗಳಿಗೆ, ಎಲ್ಲಾ ಹಂತದ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಮುಖ್ಯಮಂತ್ರಿ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಲಿಖಿತ ಮನವಿ ನೀಡಲಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಗಳು ಸ್ಥಳಕ್ಕೆಬಂದು ಯೋಜನೆ ಕೈಬಿಡುವ ಬಗ್ಗೆ ಖಚಿತ ಭರವಸೆ ನೀಡಬೇಕು, ಈ ಪ್ರತಿಭಟನೆಗೆ ಜಿಲ್ಲೆಯ ಪ್ರತಿನಿಧಿಗಳು ಬಂದು ಮುಂದಿನ ತಮ್ಮ ನಿಲುವು ಪ್ರಕಟಿಸಬೇಕು, ನಮ್ಮ ಬೇಡಿಕೆ ಈಡೇರದಿದ್ದರೆ, ನಂತರ ಸ್ವರ್ಣವಲ್ಲೀ ಶ್ರೀಗಳ ನಿರ್ದೇಶನ ಹೋರಾಟ ನಡೆಸಲಿದ್ದೇವೆ ಎಂದರು.

ಹೆದ್ದಾರಿ ತಡೆ ಪ್ರತಿಭಟನೆಯ ಸಂದರ್ಭದಲ್ಲಿ ಜನಪ್ರತಿನಿಧಿಗಳು ಜನರ ಜೊತೆ ಇರಬೇಕು, ಜನರ ಧ್ವನಿಯಾಗಿ ಇರಬೇಕು, ವೇದಿಕೆಯಲ್ಲಿರಲು ಅವಕಾಶ ಇಲ್ಲ ಎಂದು ನಿರ್ಧರಿಸಲಾಗಿದೆ, ಯೋಜನೆ ನಿಲ್ಲಿಸುವ ಬಗ್ಗೆ ಜನಪ್ರತಿನಿಧಿಗಳು ಖಚಿತ ಭರವಸೆ ನೀಡಬೇಕು ಅಥವಾ ತಾವು ಅಸಹಾಯಕರು ಎಂದು ಜನರ ಎದುರು ಹೇಳಬೇಕು ಎಂದರು.

ಪ್ರತಿಭಟನೆಯ ಸಂದರ್ಭದಲ್ಲಿ ಜನರಿಗೆ ವಿತರಿಸಲು 25 ಸಾವಿರ ನೀರಿನ ಪ್ಯಾಕೆಟ್ ವ್ಯವಸ್ಥೆ ಮಾಡಲಾಗಿದೆ. ಊಟದ ವಿತರಣೆಗೆ 70 ರಿಂದ100 ಕೌಂಟರ್ ಮಾಡಲಾಗುವುದು, 1 ಸಾವಿರ ಸ್ವಯಂ ಸೇವಕರು ವ್ಯವಸ್ಥೆಯ ನಿರ್ವಹಣೆ ಮಾಡಲಿದ್ದಾರೆ ಎಂದ ಅವರು ಅಂದು ಪಟ್ಟಣದ ಅಂಗಡಿಕಾರರು
ಸ್ವಯಂ ಸ್ಪೂರ್ತಿಯಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಶ್ರೀನಿವಾಸ ಭಟ್ಟ ಧಾತ್ರಿ, ನಾಗರಾಜ ಕವಡಿಕೆರೆ, ರಾಘವೇಂದ್ರ ಭಟ್ಟ ಹಾಸಣಗಿ, ವಿ.ಎಸ್.ಭಟ್, ರವಿ ಭಟ್ಟ, ಸತೀಶ ನಾಯ್ಕ, ಎಂ.ಕೆ.ಭಟ್ಟ, ನರಸಿಂಹ ಸಾತೊಡ್ಡಿ, ವೆಂಕಟ್ರಮಣ ಭಟ್ಟ, ಎಂ.ಆರ್.ಹೆಗಡೆ ತಾರೆಹಳ್ಳಿ ಮುಂತಾದವರು ಇದ್ದರು.

============

Leave a Reply

You cannot copy content of this page