







ಕನ್ನಡ ಭಾಷೆ, ಸಂಸ್ಕೃತಿ ಮತ್ತು ನೆಲ-ಜಲದ ರಕ್ಷಣೆಗೆ ಬದ್ಧರಾಗಿರೋಣ: ಸಚಿವ ಲಕ್ಷ್ಮಣ ಸವದಿ

ಕನ್ನಡ ಭಾಷೆ, ಸಂಸ್ಕೃತಿ ಮತ್ತು ನೆಲ-ಜಲದ ರಕ್ಷಣೆಗೆ ಬದ್ಧರಾಗಿರುವುದೇ ನಾವು ಕನ್ನಡಾಂಬೆಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ಸಹಕಾರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಅವರು ಭಾನುವಾರ ಉತ್ತರ ಕನ್ನಡ ಜಿಲ್ಲಾಡಳಿತ ವತಿಯಿಂದ ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕರ್ನಾಟಕವು ತನ್ನ ವೈವಿಧ್ಯಮಯ ಸಂಸ್ಕೃತಿ, ಜನಪದ ಕಲೆಗಳಿಂದ ಶ್ರೀಮಂತವಾಗಿದ್ದು, ಕನ್ನಡವು ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಪಡೆದಿದೆ. ಪ್ರತಿಯೊಬ್ಬರೂ ಕನ್ನಡವನ್ನು ಪ್ರೀತಿಸಿ, ಕನ್ನಡದಲ್ಲಿ ವ್ಯವಹರಿಸಿ ಕನ್ನಡದ ಕಲೆ ಮತ್ತು ಸಾಹಿತ್ಯವನ್ನು ಗೌರವಿಸಬೇಕು. ನಮ್ಮ ನಾಡಿನ ಏಕತೆ, ಸೌಹಾರ್ದತೆ ಮತ್ತು ಪ್ರಗತಿಗೆ ಕೈಜೋಡಿಸಬೇಕು, ಜಾತಿ, ಧರ್ಮ, ಭೇದ ಭಾವಗಳನ್ನು ಬಿಟ್ಟು, ಕರ್ನಾಟಕ ರಾಜ್ಯದ ಪ್ರಗತಿಗೆ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂದರು.

ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದ ಕೋಟ್ಯಂತರ ಜನರ ಬದುಕಿಗೆ ಭದ್ರತೆ ಮತ್ತು ಆತ್ಮ ವಿಶ್ವಾಸವನ್ನು ಒದಗಿಸಿದ್ದು, ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ ರೂ. 657.12 ಕೋಟಿ, ಅನ್ನಭಾಗ್ಯ ಯೋಜನೆಯಡಿ ರೂ. 298.89 ಕೋಟಿ, ಯುವನಿಧಿ ಯೋಜನೆಯಡಿ ರೂ.28.30 ಕೋಟಿ, ಗೃಹಲಕ್ಷ್ಮಿ ಯೋಜನೆಯಡಿ ರೂ.1984.89 ಕೋಟಿ , ಗೃಹಜ್ಯೋತಿ ರೂ.661.29 ಕೋಟಿ ಮೊತ್ತದ ನೆರವು ನೀಡಲಾಗಿದೆ ಎಂದರು.
ಕರಾವಳಿ ಜಿಲ್ಲೆಗಳ ಅಭಿವೃದ್ಧಿಗಾಗಿ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆಯನ್ನು ಆಯೋಜಿಸಲಾಗಿದ್ದು, ಈ ಸಭೆಯಲ್ಲಿ ಜಿಲ್ಲೆಗೆ ಅಂದಾಜು ರೂ. 10,000 ಕೋಟಿಗೂ ಅಧಿಕ ಮೊತ್ತದ ಯೋಜನೆಗಳು ಮಂಜೂರಾಗಿವೆ ಎಂದರು.

ಜಿಲ್ಲೆಯಲ್ಲಿ ಇದುವರೆಗೆ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಒಟ್ಟು 24 ಪ್ರಜಾಸೇವಾ ಆಂದೋಲನ ಸಭೆಗಳನ್ನು ಆಯೋಜಿಸಿ, ಸಾರ್ವಜನಿಕರಿಂದ 4,880 ಮನವಿಗಳನ್ನು ಸ್ವೀಕರಿಸಲಾಗಿದೆ. ಇವುಗಳಲ್ಲಿ 4,348 ಮನವಿಗಳನ್ನು ಇತ್ಯರ್ಥಪಡಿಸಲಾಗಿದ್ದು, ಬಾಕಿ ಅರ್ಜಿಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸಲು ಕ್ರಮ ವಹಿಸಲಾಗುತ್ತಿದೆ. 162 ಭಾರತ್ ಜೋಡೋ ಯುವ ಸಂಘಗಳನ್ನು ರಚಿಸಲಾಗಿದ್ದು, ಈ ಸಂಘಗಳಿಗೆ ರೂ.10 ಲಕ್ಷಗಳ ಅನುದಾನ ಒದಗಿಸುವ ಮೂಲಕ ಯುವಜನರಲ್ಲಿ ಕ್ರೀಡೆ, ಸಂಸ್ಕøತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮಾಜಿಕ ಸೌಹಾರ್ದತೆಯನ್ನು ಬೆಳೆಸಿ, ನಾಡಿನ ನವ ನಿರ್ಮಾಣದಲ್ಲಿ ಯುವಶಕ್ತಿಯನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಯೋಜಿಸಲಾಗಿದೆ ಎಂದರು.
ಜಿಲ್ಲೆಯ ಅಂಕೋಲಾ, ಭಟ್ಕಳ, ಶಿರಸಿ, ಮುಂಡಗೋಡ, ಯಲ್ಲಾಪುರ, ಜೋಯಿಡಾ, ದಾಂಡೇಲಿ ಹಾಗೂ ಹಳಿಯಾಳ ತಾಲೂಕುಗಳನ್ನು ಬರ ಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ. ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಹಾಗೂ ಅಗತ್ಯವಿರುವ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕಾರ್ಯಪಡೆ ಸಮಿತಿಗಳ ಮೂಲಕ ಕ್ರಮ ವಹಿಸಲಾಗಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ರೂ.10 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಸದ್ಯದ ಬರ ಪರಿಸ್ಥಿತಿಯಿಂದ ಸಂಕಷ್ಟÀ್ಟಕ್ಕೊಳಗಾದ ರೈತರಿಗೆ ತಕ್ಷಣದ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ, ಮುಖ್ಯಮಂತ್ರಿಗಳು ಪ್ರತಿ ಅರ್ಹ ರೈತರಿಗೆ ಗರಿಷ್ಠÀ್ಠ ರೂ.2,500 ಗಳ ಬೆಳೆಹಾನಿ ಪರಿಹಾರವನ್ನು ಮೊದಲನೇ ಕಂತಾಗಿ ಪಾವತಿಸಲು ಘೋಷಿಸಿದ್ದು, ಅದರಂತೆ ಎಸ್.ಡಿ.ಆರ್.ಎಫ್ ಮಾರ್ಗಸೂಚಿಗಳನ್ವಯ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಭೂ ಗ್ಯಾರಂಟಿಯ ಭಾಗವಾಗಿ ಸೈನಿಕ ಸಮ್ಮಾನ ಯೋಜನೆಯಡಿಯಲ್ಲಿ ಸೈನಿಕ/ ಮಾಜಿ ಸೈನಿಕರು ಸೇರಿದಂತೆ ಅರ್ಹ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಜಿಲ್ಲೆಯಲ್ಲಿ 214 ಎಕ್ರೆ ಜಮೀನನ್ನು ಗುರುತಿಸಿದ್ದು, ಸದರಿ ಉದ್ದೇಶಕ್ಕೆ ಕಾಯ್ದಿರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈಗಾಗಲೇ ಗುರುತಿಸಲಾದ 17 ಸಾವಿರ ಫಲಾನುಭವಿಗಳಿಗೆ ಅರ್ಹತೆಯ ಆಧಾರದ ಮೇಲೆ ನಿವೇಶನ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ರಾಜ್ಯದಲ್ಲಿ ನಗರ ಪ್ರದೇಶದ ಶಾಲಾ ವಿದ್ಯಾರ್ಥಿಗಳಿಗೆ ತರಗತಿ ಕಲಿಕೆಯನ್ನು ನೈಜ ಜೀವನದ ಅನುಭವದೊಂದಿಗೆ ಮೇಳೈಸುವ ಹಾಗೂ ಗ್ರಾಮೀಣ ಜೀವನದ ವಿವಿಧ ಆಯಾಮಗಳ ಕುರಿತು ಪ್ರಾಯೋಗಿಕ ಜ್ಞಾನವನ್ನು ಒದಗಿಸುವ ಉದ್ದೇಶದಿಂದ ಆರಂಭಿಸಿರುವ “ಗ್ರಾಮಾನುಭವ” ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಇಂದು ಚಾಲನೆ ನೀಡಲಾಗಿದೆ ಎಂದರು.
ಈ ಬಾರಿಯ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಉತ್ತರ ಕನ್ನಡ ಜಿಲ್ಲೆಯವರಾದ ಕನ್ನಡದ ಶ್ರೇಷ್ಠ ನಟ ಅನಂತನಾಗ್ ಮತ್ತು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಹಿರಿಯ ಪತ್ರಕರ್ತ ಜಿ.ಯು.ಭಟ್ ಅವರಿಗೆ ಸಚಿವರು ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಗಣಪತಿ ಡಿ.ಉಳ್ವೇಕರ, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಕಾರವಾರ ಉಪ ವಿಭಾಗಾಧಿಕಾರಿ ರಮ್ಯಾ ಮತ್ತಿತರರು ಭಾಗವಹಿಸಿದ್ದರು.
ಪೊಲೀಸ್, ಅರಣ್ಯ, ಗೃಹ ರಕ್ಷಕ ದಳ, ಎನ್.ಸಿ.ಸಿ, ಸ್ಕೌಟ್ಸ್ ಅಂಡ್ ಗೈಡ್ಸ್, ಸೇವಾದಳ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಹಾಗೂ ಶಾಲಾ ವಿದ್ಯಾರ್ಥಿಗಳಿಂದ ನಾಡಿನ ಕಲೆ ಸಾಹಿತ್ಯ ಸಂಸ್ಕøತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ವೇದಿಕೆ ಕಾರ್ಯಕ್ರಮದ ಪೂರ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ರಾಜ್ಯೋತ್ಸವದ ಪ್ರಯುಕ್ತ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಸ್ತಬ್ಧ ಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಬೇಡರ ಕುಣಿತ ಕಲಾ ತಂಡಗಳು ಸೇರಿದಂತೆ ಲೋಕೋಪಯೋಗಿ ಇಲಾಖೆ, ಮೂಲ ಸೌಕರ್ಯ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರಸಭೆ, ಅರಣ್ಯ ಇಲಾಖೆ, ಕಾರ್ಮಿಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಾಧನೆ ಬಿಂಬಿಸುವ ಆಕರ್ಷಕ ಸ್ತಬ್ಧ ಚಿತ್ರಗಳು ಭಾಗವಹಿಸಿದ್ದವು.
















