ಯಲ್ಲಾಪುರ ತಾಲೂಕಿನ ಅರಬೈಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರವಿವಾರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಸಡಗರ, ಸಂಭ್ರಮದಿಂದ ನಡೆಯಿತು.

ಈ ನಿಮಿತ್ತ ನಡೆದ ಭವ್ಯ ಮೆರವಣಿಗೆಯಲ್ಲಿ ಶಾಲಾಮಕ್ಕಳು ವಿವಿಧ ವೇಷಭೂಷಣ ಧರಿಸಿ ಕನ್ನಡಾಂಬೆಯ ಜಯಘೋಷ ಮೊಳಗಿಸಿದರು.

ಕನ್ನಡ ನಾಡು ನುಡಿಯ ಕುರಿತು ಸಾಹಿತಿ, ಮುಖ್ಯಾಧ್ಯಾಪಕಿ ಶಿವಲೀಲಾ ಹುಣಸಗಿ ಮಾತನಾಡಿ, ಕನ್ನಡ ನಮ್ಮ ನಾಡು, ಕನ್ನಡ ನಮ್ಮ ನುಡಿ, ಕನ್ನಡ ನಮ್ಮ ಹೆಮ್ಮೆ,
ನಮ್ಮ ಉಸಿರು. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಅತ್ಯಂತ ಶ್ರೀಮಂತವಾದ ಭಾಷೆಯಾಗಿದೆ.

ಕವಿರಾಜಮಾರ್ಗದಿಂದ ಹಿಡಿದು ಇಂದಿನ ಆಧುನಿಕ ಸಾಹಿತ್ಯದವರೆಗೆ ಕನ್ನಡ ಸಾಹಿತ್ಯವು ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ. ಪಂಪ, ರನ್ನ, ಬಸವಣ್ಣ, ಕನಕದಾಸ, ಕುವೆಂಪು, ಬೇಂದ್ರೆ ಮುಂತಾದ ಮಹನೀಯರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.ಕನ್ನಡವನ್ನು ಪ್ರೀತಿಸುವುದು ಕನ್ನಡ ರಾಜ್ಯೋತ್ಸವದ ದಿನಕ್ಕೆ ಮಾತ್ರ ಸೀಮಿತವಾಗಬಾರದು. ನಮ್ಮ ದೈನಂದಿನ ಬದುಕಿನಲ್ಲಿ ಕನ್ನಡವನ್ನು ಮಾತನಾಡಬೇಕು, ಓದಬೇಕು, ಬರೆಯಬೇಕು ಮತ್ತು ಬೆಳೆಸಬೇಕು. ಅನ್ಯ ಭಾಷೆಗಳನ್ನು ಗೌರವಿಸುತ್ತಲೇ ನಮ್ಮ ಮಾತೃಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಸ್ಕೌಟ್ ಗೈಡ್ಸ್ ಸಂಚಾಲಕ, ಶಿಕ್ಷಕ ಮಹೇಶ ಭಟ್ಟ ಮಾತನಾಡಿ, ಸರ್ಕಾರದಿಂದ ಸಿಗುವ ಸೌಲಭ್ಯ ಮತ್ತು ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳುವುದು ಎಲ್ಲರ ಆದ್ಯ ಕರ್ತವ್ಯ.ಕನ್ನಡ ಭಾಷೆ ದಿನನಿತ್ಯದ ಬದುಕಿನಲ್ಲಿ ಅನ್ವಯರೀತಿಯಲ್ಲಿ ಬಳಸಬೇಕು.ವಿಭಿನ್ನ ಶೈಲಿಯ ಕನ್ನಡ ಭಾಷೆಯನ್ನು ಅರ್ಥೈಸಿದಷ್ಟು ಕನ್ನಡ ಸುಲಲಿತವಾಗಿ ಒಲಿಯುವುದು ಎಂದರು.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಕ್ಕಳಿಗೆ ಛದ್ಮವೇಶ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. 1 ರಿಂದ 4 ಕಿರಿಯರ ವಿಭಾಗ ಮತ್ತು 5 ರಿಂದ 7 ಹಿರಿಯರ ವಿಭಾಗದಲ್ಲಿ ಪ್ರಥಮ (500),ದ್ವಿತೀಯ(300), ತೃತೀಯ(200) ನಗದು ಬಹುಮಾನದ ಪ್ರಾಯೋಜಕತ್ವವನ್ನು ಮಾಜಿ ವಿದ್ಯಾರ್ಥಿಗಳಾದ ವಿಶ್ವೇಶ್ವರ ಹೆಗಡೆ ಮಾಜಿ ಗ್ರಾ.ಪಂ ಸದಸ್ಯರು, ದೀಪಕ ನಾಯ್ಕ, ಜಯರಾಮ, ರವಿ ಭಟ್ ನೀಡಿದರು. ಹಿರಿಯರ ವಿಭಾಗದಲ್ಲಿ ಪ್ರಥಮ – ಗೌತಮಿ ಹೆಗಡೆ, ದ್ವಿತೀಯ -ಇಂಚರಾ ಭಟ್ಟ, ಪ್ರಜ್ವಲ್ ರಾಣೆ, ತೃತೀಯ – ಧನ್ಯಾ ನಾಯ್ಕ, ಕಿರಿಯ ವಿಭಾಗದಲ್ಲಿ ಪ್ರಥಮ-ಕೋಮಲ ನಾಯ್ಕ, ದ್ವಿತೀಯ -ಧನುಷ್ ಶೆಟ್ಟಿ, ತೃತೀಯ – ಚೈತ್ರ ಸಿದ್ದಿ ಸ್ಥಾನ ಪಡೆದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಡಿ.ಎಮ್.ಸಿ ಅಧ್ಯಕ್ಷ ನಾಗರಾಜ ಭಟ್ಟ ವಹಿಸಿದ್ದರು.

ಅತಿಥಿಗಳಾಗಿ ಉಮಾ ಗೌಡ ಉಪಾಧ್ಯಕ್ಷರು ಎಸ್.ಡಿ.ಎಮ್.ಪಾಲಕರು,ಎಸ್.ಡಿ.ಎಮ್.ಸಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆ,ಶಿಕ್ಷಣ ಪ್ರೇಮಿಗಳು, ಮಾಜಿ ವಿದ್ಯಾರ್ಥಿಗಳು ,ಶಾಲೆಯ ಮುದ್ದು ಮಕ್ಕಳು ಭಾಗವಹಿಸಿದ್ದರು.

ಇದೇ ಸಮಯದಲ್ಲಿ ಆಕಸ್ಮಿಕವಾಗಿ ಆಗಮಿಸಿದ ಇಟಲಿಯ ಪ್ರವಾಸಿಗರಾದ ಡೆರ್ವಿಸ್ ಕ್ಯಾಸ್ಟೆಲುಚಿ, ಟಿಜಿಯಾನಾ ಕಟಾನಾ ಶಾಲಾ ಮಕ್ಕಳ ವೇಷಭೂಷಣ ಮತ್ತು ಮೆರವಣಿಗೆಯಲ್ಲಿ ಭಾಗವಹಿಸಿ ಕನ್ನಡ ರಾಜ್ಯೋತ್ಸವದ ಮಹತ್ವವನ್ನು ತಿಳಿದು ಮತ್ತು ಕಾರ್ಯಕ್ರಮ ನೋಡಿ ಹರ್ಷ ವ್ಯಕ್ತಪಡಿಸಿದರು. ರಂಜೀತ ದೆಹಲಿ ಗೈಡ ಉಪಸ್ಥಿತರಿದ್ದರು.

ಶಾಲಾ ಮಕ್ಕಳು ಪ್ರಾರ್ಥಿಸಿದರು. ಶಿಕ್ಷಕ ಮಹೇಶ ಭಟ್ಟ ನಿರ್ವಹಿಸಿದರು. ಶಿಕ್ಷಕಿ ವೀಣಾ ದೇವಾಡಿಗ ವಂದಿಸಿದರು. ನಿರ್ಣಾಯಕರಾಗಿ ತ್ರೇಷಾ ನೋಹಾ,ಗುರುರಾಜ ಆಚಾರಿ ಭಾಗವಹಿಸಿದ್ದರು.

Leave a Reply

You cannot copy content of this page