ನದಿ ತಿರುವು ಯೋಜನೆಯನ್ನು ವಿರೋಧಿಸಿ ನ.3 ಮಂಗಳವಾರ ಯಲ್ಲಾಪುರದಲ್ಲಿ ನಡೆಯುವ ಹೆದ್ದಾರಿ ತಡೆ ಪ್ರತಿಭಟನೆಗೆ ಯಲ್ಲಾಪುರ ತಾಲೂಕಾ ರೈತ ಸಂಘ ಬೆಂಬಲವನ್ನು ಘೋಷಿಸಿದೆ.
ನಾಗೇಶ ಹೆಗಡೆ ಪಣತಗೇರಿ
ಈ ಕುರಿತು ಸೋಮವಾರ ತಾಲೂಕಾ ರೈತ ಸಂಘದ ಅಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ ಮಾತನಾಡಿ, ಹೆದ್ದಾರಿ ತಡೆ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತ ಬಾಂಧವರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಬೇಡ್ತಿ ನದಿಯಲ್ಲಿ ಈ ಭಾಗದ ರೈತರ ಜಮೀನುಗಳಿಗೆ ಅಗತ್ಯ ಇರುವಷ್ಟು ನೀರು ಕೂಡಾ ಬೇಸಿಗೆಯ ಸಂದರ್ಭದಲ್ಲಿ ಲಭ್ಯ ಇರುವುದಿಲ್ಲ. ಈ ಯೋಜನೆ ಜಾರಿಯಾದರೆ ಇಲ್ಲಿನ ಪರಿಸರದ ಮೇಲೆ ಮತ್ತು ಜಿಲ್ಲೆಯ ಜನಜೀವನದ ಮೇಲೆ ಅನೇಕ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಈ ಯೋಜನೆ ಅವೈಜ್ಞಾನಿಕವಾಗಿದ್ದು, ಜಿಲ್ಲೆಯ ಜನರ ಒಳಿತಿಗಾಗಿ ಯಾವುದೇ ಕಾರಣಕ್ಕೂ ಯೋಜನೆಯನ್ನು ಜಾರಿಗೊಳಿಸಬಾರದು ಎಂದು ಅವರು ಆಗ್ರಹಿಸಿದ್ದಾರೆ. ಮಂಗಳವಾರ ಯಲ್ಲಾಪುರದಲ್ಲಿ ನಡೆಯುವ ಹೋರಾಟಕ್ಕೆ ತಾಲೂಕಾ ರೈತ ಸಂಘದ ಪದಾಧಿಕಾರಿಗಳು, ಸದಸ್ಯರು ಆಗಮಿಸುತ್ತಾರೆ.
ರೈತರ ಶ್ರೇಯೋಭಿವೃದ್ಧಿಗೆ ಸದಾ ಶ್ರಮಿಸುತ್ತಿರುವ ರೈತ ಸಂಘವು ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ, ಹೋರಾಟದಲ್ಲಿ ಕೈಜೋಡಿಸುತ್ತಿದೆ ಎಂದು ತಿಳಿಸಿದ್ದಾರೆ. ಸಂಘದ ಉಪಾಧ್ಯಕ್ಷ ಶ್ರೀಧರ ಕೋಟೆಮನೆ, ಕಾರ್ಯದರ್ಶಿ ಕೆ.ಟಿ.ಹೆಗಡೆ, ಸಹಕಾರ್ಯದರ್ಶಿ ಗಣೇಶ ಹೆಗಡೆ ಸವಣಗೇರಿ ಹೆದ್ದಾರಿ ತಡೆ ಹೋರಾಟದಲ್ಲಿ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದ್ದಾರೆ.