ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಸ್ಕೂಟಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಕೂಟಿ ಸವಾರ ಹಾಗೂ ಸಹಸವಾರ ಇಬ್ಬರೂ ಸ್ಥಳದಲ್ಲೇ ಮೃತಪಟ್ಟ ಘಟನೆ ಯಲ್ಲಾಪುರತಾಲೂಕಿನ ಚಿಕ್ಕಮಾವಳ್ಳಿ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ರವಿವಾರ ಸಂಜೆ ನಡೆದಿದೆ.
ಈ ಅಪಘಾತದಲ್ಲಿ ಮೃತಪಟ್ಟವರನ್ನು ಹಳೆ ಹುಬ್ಬಳ್ಳಿಯ 25 ವರ್ಷದ ಮಂಜುನಾಥ ಚಂದ್ರಶೇಖರ ಗೌಡರ್ ಹಾಗೂ 18 ವರ್ಷದ ಸುಮಿತ್ ಅರ್ಜುನ ಹನಮನಹಳ್ಳಿ ಎಂದು ಗುರುತಿಸಲಾಗಿದೆ.
ಈ ಕುರಿತು ಕೆ.ಎಸ್.ಆರ್.ಟಿ.ಸಿ ಬಸ್ ನಿರ್ವಾಹಕ ಸುರೇಶ ಗುಬ್ಬೇವಾಡ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಕೂಟಿ ಸವಾರ ಮಂಜುನಾಥ ಗೌಡರ್ ಸ್ಕೂಟಿಯ ಹಿಂಬದಿಗೆ ಸುಮಿತ್ ಅವರನ್ನು ಕೂರಿಸಿಕೊಂಡು, ಹೆಲ್ಮೆಟ್ ಧರಿಸದೇ ಅತೀವೇಗವಾಗಿ ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಸ್ಕೂಟಿಯನ್ನು ಚಲಾಯಿಸಿಕೊಂಡುಹೋಗಿ,
ಚಿಕ್ಕಮಾವಳ್ಳಿ ಕ್ರಾಸ್ ಸಮೀಪ ಮುಂದೆ ಹೋಗುತ್ತಿದ್ದ ಕಾರನ್ನು ಓವರ್ ಟೇಕ್ ಮಾಡಿಕೊಂಡುಹೋಗಿ, ಎದುರಿನಿಂದ ಸಿಂಧನೂರಿನಿಂದ ಕಾರವಾರಕ್ಕೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಗೆ ಡಿಕ್ಕಿಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಸ್ಕೂಟಿ ಸವಾರ ಹಾಗೂ ಸಹಸವಾರ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.