E-YELLAPUR.COM NEWS ಯಲ್ಲಾಪುರ.

14-6-2022. ಮಂಗಳವಾರ.

ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯನ್ನು ವಿರೋಧಿಸಿ ಜಿಲ್ಲೆಯ ಎಲ್ಲ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಪಕ್ಷಬೇಧ ಮರೆತು ಸರ್ಕಾರಕ್ಕೆ ನಮ್ಮ ಧ್ವನಿಯನ್ನು ಮುಟ್ಟಿಸಬೇಕು. ಜುಲೈ ತಿಂಗಳ ಅಧಿವೇಶನದಲ್ಲೂ ಈ ಬಗ್ಗೆ ಧ್ವನಿ ಎತ್ತಬೇಕು ಎಂದು ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ಅವರು ತಾಲೂಕಿನ ಮಂಚಿಕೇರಿ ಸಮಾಜ ಮಂದಿರದಲ್ಲಿ ಮಂಗಳವಾರ ಬೇಡ್ತಿ ಮತ್ತು ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಬೇಡ್ತಿ ಮತ್ತು ವರದಾ ನದಿ ಜೋಡಣೆ ಹಾಗೂ ನದಿ ತಿರುವು ಯೋಜನೆಯ ಕುರಿತು ಹಮ್ಮಿಕೊಂಡಿದ್ದ ಜನ ಜಾಗೃತಿ ಸಭೆಯ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.

ಕಾರಣ ಇಲ್ಲದೇ ಈ ಯೋಜನೆಯನ್ನು ವಿರೋಧಿಸುತ್ತಿಲ್ಲ. ಈ ಯೋಜನೆಯನ್ನು ವಿರೋಧಿಸಲು ಅನೇಕ ಸಕಾರಣಗಳು ಇವೆ. ಈ ಯೋಜನೆ ಮಾತ್ರವಲ್ಲ ಜಿಲ್ಲೆಯ ಅಘನಾಶಿನಿ, ಕಾಳಿ, ಶರಾವತಿ ನದಿಗಳ ಸಂರಕ್ಷಣೆಗೂ ಹೋರಾಟ ಆಗಬೇಕು. ಯಾರಿಗೂ ಅನ್ಯಾಯ ಮಾಡುವುದು ನಮ್ಮ ಉದ್ದೇಶವಲ್ಲ, ಪರಿಸರ ಉಳಿಸುವುದೇ ನಮ್ಮ ಗುರಿ ಎಂದ ಅವರು, ಸರ್ಕಾರ ಇಂತಹ ಯೋಜನೆ ಜಾರಿಗೆ ತರುವ ಬದಲು ನೀರಿನ ಕೊರತೆ ಇರುವಲ್ಲಿ ಮಳೆ ನೀರಿನ ಕೊಯ್ಲನ್ನು ಕಡ್ಡಾಯ ಮಾಡಲಿ. ಜನಾಂದೋಲನ, ಎಲ್ಲ ಜನಪ್ರತಿನಿಧಿಗಳ ಸಹಕಾರದಿಂದ ರಾಜಕೀಯ ಒತ್ತಡ ಹಾಗೂ ಸಹಕಾರಿ ಸಂಘಗಳಿಂದ ತಮ್ಮ ವ್ಯಾಪ್ತಿಯ ಜನರ ಸಹಿ ಸಂಗ್ರಹ ಅಭಿಯಾನದ ಮೂಲಕ ಯೋಜನೆಯನ್ನು ವಿರೋಧಿಸಿ ಬಲವಾದ ಹೋರಾಟ ಮಾಡಬೇಕಾಗಿದೆ ಎಂದರು.

ಸೋಂದಾ ಜೈನಮಠದ ಸ್ವಸ್ತಿಶ್ರೀ ಅಕಲಂಕ ಕೇಸರಿ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಈ ಯೋಜನೆಯ ಯೋಜನಾ ವರದಿಯನ್ನು ರದ್ದು ಮಾಡಬೇಕು. ಯೋಜನೆಯನ್ನು ಕೈಬಿಡಬೇಕು ಎಂದರು. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ವಿ.ಪ.ಸದಸ್ಯ ಶಾಂತಾರಾಮ ಸಿದ್ದಿ, ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ವಿವಿಧ ಕ್ಷೇತ್ರಗಳ ತಜ್ಞರಾದ ಬಾಲಚಂದ್ರ ಸಾಯೀಮನೆ, ಡಾ.ಜಿ.ವಿ.ಹೆಗಡೆ, ಶಶಿಭೂಷಣ ಹೆಗಡೆ, ವಾ.ಕ.ರ.ಸಾ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ ಮಾತನಾಡಿದರು. ಆರ್.ಎನ್. ದುಂಡಿ, ಶಿವಾನಂದ ಕಳವೆ, ಡಾ.ಕೇಶವ ಕೊರ್ಸೆ,

ಹಿರಿಯ ಸಹಕಾರಿ ಆರ್.ಎನ್.ಹೆಗಡೆ ಗೋರ್ಸಗದ್ದೆ, ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಮುಂತಾದವರು ವೇದಿಕೆಯಲ್ಲಿ ಇದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಅನಂತ ಹೆಗಡೆ ಅಶೀಸರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಕೆ.ಭಟ್ಟ ಯಡಳ್ಳಿ, ಗಣಪತಿ ಬಿಸ್ಲಕೊಪ್ಪ, ನಾರಾಯಣ ಗಡಿಕೈ ನಿರ್ವಹಿಸಿದರು. ರಾಧಾ ಹೆಗಡೆ ನಿರ್ಣಯ ಮಂಡಿಸಿದರು. ಶಿರಸಿ, ಯಲ್ಲಾಪುರ ಭಾಗದ ಸಾವಿರಾರು ಜನರು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ಕೈಗೊಂಡ ನಿರ್ಣಯಗಳು.

1) ಬೇಡ್ತಿ-ವರದಾ ನದಿ ಜೋಡಣೆ ಅವ್ಯವಹಾರಿಕ ಹಾಗೂ ಅವೈಜ್ಞಾನಿಕವಾಗಿದೆ. ಅರಣ್ಯ, ವನ್ಯಜೀವಿಗಳಿಗೆ ಆಪತ್ತು ತರಲಿದೆ. ಮಲೆನಾಡಿನ ವನವಾಸಿಗಳು ಮತ್ತು ರೈತರಿಗೆ ಮಾರಕವಾಗಲಿದೆ. ಈ ಕಾರಣಗಳಿಂದ ಬೇಡ್ತಿ ಕಣಿವೆಯ ಜನತೆ ಕಳೆದ 20 ವರ್ಷಗಳಿಂದ ವ್ಯಾಪಕವಾಗಿ ವಿರೋಧ ವ್ಯಕ್ತಪಡಿಸುತ್ತಲೇ ಇದೆ. ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ರದ್ದು ಮಾಡಬೇಕು.
2) ಉ.ಕ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಶಾಸಕರು ಹಾಗೂ ಸಂಸದರು. ಪಕ್ಷ ಬೇಧ ಮರೆತು ಒಕ್ಕೊರಲಿನಿಂದ ಬೇಡ್ತಿ -ವರದಾ ಯೋಜನೆಯನ್ನು ಅನುಷ್ಠಾನ ಮಾಡದಂತೆ ಸರಕಾರಕ್ಕೆ ಒತ್ತಡ ಹಾಕಬೇಕು.
3) ಕಾಳಿ, ಕಣಿವೆಯ ಜನರು ಕಾಳಿ ನದಿ ತಿರುಗಿಸುವ ಯೋಜನೆಗೆ ತೀವ್ರ ವಿರೋಧ ವ್ಯಕ್ತ ಮಾಡುತ್ತಿದ್ದಾರೆ. ಈ ಸಮಾವೇಶ ಕಾಳಿ ಕಣಿವೆಯ ಮಣ್ಣಿನ ಮಕ್ಕಳ ಬೇಡಿಕೆಗೆ ಬೆಂಬಲ ನೀಡುತ್ತದೆ.
4) ಎತ್ತಿನಹೊಳೆ ನದೀ ತಿರುವು ಬೃಹತ್ ಯೋಜನೆ ವಿಫಲವಾಗಿರುವ ಹಿನ್ನೆಲೆಯಲ್ಲಿ ದಕ್ಷಿಣಭಾರತದ ನೀರಿನ ಸುರಕ್ಷತೆಯ ದೃಷ್ಟಿಯಿಂದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬೇಡ್ತಿ, ಅಘನಾಶಿನಿ, ಕಾಳಿ, ಶರಾವತಿ, ಇತ್ಯಾದಿ ನದಿ ತಿರುವು, ನದಿ ಜೋಡಣೆ ಯೋಜನೆಗಳನ್ನು ಕೈಗೆತ್ತಿಕೊಳ್ಳಬಾರದು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಈ ಬೇಡ್ತಿ ಸಮಾವೇಶ ಆಗ್ರಹದ ಮನವಿ ಮಾಡುತ್ತದೆ.

ADVT

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading