ಜಿಲ್ಲೆಯಲ್ಲಿನ ಸಂಭವನೀಯ ಭೂ ಕುಸಿತ ಪ್ರದೇಶಗಳಲ್ಲಿ, ಭೂ ಕುಸಿತ ತಡೆಗೆ ರೂ. 100ಕೋಟಿವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಭೂ ಕುಸಿತ ತಡೆಗೆ ರೂ.100 ಕೋಟಿ ವೆಚ್ಚದಲ್ಲಿ 99 ಕಾಮಗಾರಿಗಳನ್ನು ಕೈಗೊಳ್ಳಲು ಈಗಾಗಲೇ ಅನುಮೋದನೆ ನೀಡಲಾಗಿದ್ದು, ಎಲ್ಲಾ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಕೂಡಾ ಮುಕ್ತಾಯವಾಗಿದ್ದು , 80 ಕಾಮಗಾರಿಗಳಿಗೆ ಕಾರ್ಯದೇಶ ನೀಡಲಾಗಿದೆ. ಈ ಕಾಮಗಾರಿಗಳನ್ನು ನಿಗಧಿತ ಅವಧಿಯಲ್ಲಿ ಮುಕ್ತಾಯಗೊಳಿಸುವಂತೆ ಸೂಚಿಸಿದ ಅವರು 19 ಕಾಮಗಾರಿಗಳು ಇನ್ನೂ ಆರಂಭವಾಗದ ಕುರಿತು ತೀವ್ರ ಅಸಮಧಾನ ವ್ಯಕ್ತಪಡಿಸಿ, ಈ ಬಗ್ಗೆ ಸಮರ್ಪಕ ವಿವರಣೆ ನೀಡುವಂತೆ ಸಂಬಂದಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.

ಈಗಾಗಲೇ ಕಾರ್ಯಾದೇಶ ನೀಡಿರುವ ಕಾಮಗಾರಿಗಳ ಈವರೆಗಿನ ಪ್ರಗತಿಯನ್ನು ನೀಡುವಂತೆ ಸೂಚಿಸಿದ ಅವರು ಕಾರ್ಯಾದೇಶ ನೀಡಿದ ನಂತರ ಕಾಮಗಾರಿಗಳು ಯಾವುದೇ ಸಂದರ್ಭದಲ್ಲೂ ವಿಳಂಬವಾಗದಂತೆ ಅನುಷ್ಠಾನ ಇಲಾಖೆಗಳು ಎಚ್ಚರಿಕೆ ವಹಿಸಿ, ನಿಗಧಿತ ಅವಧಿಯಲ್ಲಿ ಪೂರ್ಣಗಳಿಸುವಂತೆ ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ಮಳೆ ಮಾಪನ ಯಂತ್ರಗಳ ನಿರ್ವಹಣೆ ಕುರಿತಂತೆ ರಾಜ್ಯದಿಂದ ಗುತ್ತಿಗೆ ಪಡೆದಿರುವ ಸಂಸ್ಥೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಎಲ್ಲಾ ಮಳೆ ಮಾಪನ ಯಂತ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವ ಕುರಿತಂತೆ ಪರಿಶೀಲಿಸಿ ಖಚಿತಪಡಿಸಿಕೊಳ್ಳಿ ಎಂದರು.

ಶಿರೂರು ಬಳಿ ಗಂಗಾವಳಿ ನದಿಯಲ್ಲಿ ಶೇಖರವಾಗಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯವನ್ನು ಚುರುಕುಗೊಳಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಶೀಘ್ರದಲ್ಲಿ ಮುಕ್ತಾಯಗೊಳಿಸುವಂತೆ ನಿರ್ದೇಶನ ನೀಡಿದರು, ಈ ಕುರಿತಂತೆ ಮಾತನಾಡಿದ ಬಂದರು ಇಲಾಖೆ ಅಧಿಕಾರಿಗಳು ಮಣ್ಣು ತೆರವು ಕಾರ್ಯವು 3 ತಿಂಗಳಲ್ಲಿ ಮುಕ್ತಾಯವಾಗಲಿದೆ ಎಂದರು.

ಸಭೆಯಲ್ಲಿ ವರ್ಚುವಲ್ ಮೂಲಕ ಜಿ.ಪಂ. ಸಿಇಓ ಡಾ.ದಿಲೀಷ್ ಶಶಿ ಭಾಗವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ , ಜಿ.ಪಂ. ಮುಖ್ಯ ಯೋಜನಾಧಿಕಾರಿ ಸೋಮಶೇಖರ್ ಮೇಸ್ತಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

==================

Leave a Reply

You cannot copy content of this page