






ನಮ್ಮ ಸಂಪ್ರದಾಯ, ಸಂಸ್ಕೃತಿಯನ್ನು ಉಳಿಸಿಕೊಳ್ಳೋಣ: ಎನ್.ಕೆ.ಭಟ್ಟ

ನಮ್ಮ ಭಾರತೀಯ ಪರಂಪರೆಯಲ್ಲಿಯೇ ಅನಾದಿ ಕಾಲದಿಂದಲೂ ಸಂಸ್ಕಾರಯುಕ್ತ ಆಹಾರ-ವಿಹಾರ, ಜೀವನಶೈಲಿ ಇತ್ತು. ಹಾಗಾಗಿಯೇ ಆಸ್ಪತ್ರೆಗೆ ಹೋಗುವ ಸ್ಥಿತಿ ಇರಲಿಲ್ಲ. ಇಂದು ಆಧುನಿಕ ಶೈಲಿ, ಪಾಶ್ಚಾತ್ಯ ಅನುಕರಣೆಯಿಂದ ಮನೆಯಲ್ಲಿ ಕನಿಷ್ಠ ಒಬ್ಬಿಬ್ಬರಾದರೂ ಆಸ್ಪತ್ರೆಗೆ ಹೋಗಬೇಕಾಗಿದೆ. ಇದು ವಿಪರ್ಯಾಸದ ಸ್ಥಿತಿ ಎಂದು ಟಿಎಂಎಸ್ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.

ಅವರು ಯಲ್ಲಾಪುರ ಪಟ್ಟಣದ ಅಡಿಕೆ ಭವನದಲ್ಲಿ ಭಾನುವಾರ ಥ್ಯಾಂಕ್ ಯು ಯೂನಿವರ್ಸ್ ಅಕಾಡೆಮಿ, ಆರ್ಟ್ ಆಫ್ ಲಿವಿಂಗ್ ಯಲ್ಲಾಪುರ, ಮಹಾಗಣಪತಿ ಕಲಾಬಳಗ ಇವರ ಸಹಯೋಗದಲ್ಲಿ ಶುದ್ಧ ಕುಂಕುಮ ತಯಾರಿಕೆ ಮನೆಯಲ್ಲೇ ಮಾಡುವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.

ಪಾಶ್ಚಿಮಾತ್ಯ ಸಂಸ್ಕೃತಿ ಸಂಪೂರ್ಣವಾಗಿ ನಮ್ಮನ್ನು ಆವರಿಸಿದೆ. ಮಾಧ್ಯಮಗಳಲ್ಲಿ ಬರುವ ಒಳ್ಳೆಯದನ್ನು ಬಿಟ್ಟು ನಮ್ಮ ಬದುಕಿಗೆ ಮಾರಕವಾದ ಚಿಂತನೆ, ಯೋಚನೆಗಳನ್ನು ಸ್ವೀಕರಿಸುತ್ತಿದ್ದೇವೆ. ಹಳೆಯದರ ಮಹತ್ವವನ್ನು ಅರಿಯದೇ ಗೊಡ್ಡು ಸಂಪ್ರದಾಯ ಎಂದು ಭಾವಿಸಿ, ಮುಂದುವರಿದ ಪರಿಣಾಮವೇ ನಮ್ಮ ಸ್ಥಿತಿ ಇಲ್ಲಿಗೆ ಬಂದು ತಲುಪಿದೆ. ನಮ್ಮ ಹಳೆಯ ಸಂಪ್ರದಾಯ ಉಳಿಸಿಕೊಳ್ಳುವಲ್ಲಿ ಪ್ರಯತ್ನ ಮಾಡಬೇಕು ಎಂದರು.

ಅಡಿಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಆರ್.ವಿ.ಹೆಗಡೆ ಮಾತನಾಡಿ,ನಮ್ಮ ಹಳೆಯ ಎಲ್ಲ ಸಂಪ್ರದಾಯಗಳು ವೈಜ್ಞಾನಿಕತೆಯ ಹಿನ್ನೆಲೆಯಲ್ಲೇ ಇವೆ. ಹಾಗಾಗಿಯೇ ಋಷಿಮುನಿಗಳು ಶಾಸ್ತ್ರ ಎಂದು ಮಾಡಿದ್ದು, ಅದನ್ನು ಪರಿಪಾಲಿಸುತ್ತಾರೆಂಬ ಉದ್ದೇಶದಿಂದ. ನಿಸರ್ಗಕ್ಕೆ, ಪರಿಸರಕ್ಕೆ, ಪ್ರಕೃತಿಗೆ ಪೂರಕವಾದ ಬದುಕು ನಮ್ಮದಾಗಬೇಕು. ಆಗ ಮಾತ್ರ ನಮ್ಮ ಆರೋಗ್ಯ ಸಾಧ್ಯ ಎಂದರು.
ಯೋಗ ಫೆಡರೇಷನ್ ಆಫ್ ಇಂಡಿಯಾದ ತಾಲೂಕಾಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ಮಾತನಾಡಿ, ಪಾಲಕರ ಅದರಲ್ಲೂ ಮಾತೆಯರ ಉದಾಸೀನತೆಯೇ ಹೆಣ್ಣುಮಕ್ಕಳು ಕುಂಕುಮ, ಬಳೆ ಹಚ್ಚದೇ ಇರುವುದ್ಕೆ ಕಾರಣವಾಗಿದೆ. ಬಳೆ, ಕುಂಕುಮ, ಮೂಗುತಿ, ಕಿವಿಗೆ ಬಂಗಾರದ ಆಭರಣ, ಕುತ್ತಿಗೆಗೆ ಹೀಗೆ ವಿವಿಧೆಡೆ ಶರೀರದ ಬೇರೆ ಬೇರೆ ಭಾಗಗಳಲ್ಲಿ ನಾವು ತೊಡುವ ಬೆಳ್ಳಿ-ಬಂಗಾರದ ಧಾತು ಸ್ಪರ್ಶದಿಂದ ಆರೋಗ್ಯಕ್ಕೆ ಪೂರಕ ಎಂಬುದನ್ನು ವೈಜ್ಞಾನಿಕತೆ ಒಪ್ಪಿದೆ. ಹಣೆಗೆ ಕುಂಕುಮ ಹಚ್ಚುವುದರಿಂದ ಮನಸ್ಸು ಸರಿ ದಾರಿಯಲ್ಲಿ ಸಾಗುತ್ತದೆ ಎಂಬುದಕ್ಕೆ ಅನೇಕ ಉದಾಹರಣೆಗಳನ್ನು ಕಾಣಬಹುದು ಎಂದರು.
ಶಿಕ್ಷಕ ಸುಬ್ರಾಯ ಭಟ್ಟ, ಸಾಮಾಜಿಕ ಕಾರ್ಯಕರ್ತೆ ವೀಣಾ ಯಲ್ಲಾಪುರಕರ್, ಚಂದ್ರಶೇಖರ ಭಟ್ಟ ಉಪಸ್ಥಿತರಿದ್ದರು. ನಿರ್ಮಲಾ ಭಾಗ್ವತ ಪ್ರಾರ್ಥಿಸಿದರು. ಸದಾನಂದ ದಬಗಾರ ನಿರ್ವಹಿಸಿದರು.

=================















