ಖಚಿತ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ದಾಳಿ ನಡೆಸಿ, ಯಲ್ಲಾಪುರ ಪಟ್ಟಣದ ಬಿಸಗೋಡ ರಸ್ತೆಯ ಸ್ಮಶಾನದ ಸಮೀಪ ರಸ್ತೆಯಲ್ಲಿ ಶ್ರೀಗಂಧದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ನಾಲ್ಕು ಆರೋಪಿಗಳನ್ನು ಬಂಧಿಸಿ, ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಬುಧವಾರ ಯಲ್ಲಾಪುರ ಪಟ್ಟಣದ ಬಿಸಗೋಡ ರಸ್ತೆ ಮಾರ್ಗದಲ್ಲಿರುವ ಸ್ಮಶಾನದ ಪಕ್ಕದಲ್ಲಿ ಅನಧಿಕೃತವಾಗಿ ದ್ವಿಚಕ್ರದ ವಾಹನದಲ್ಲಿ ಬೆಲೆ ಬಾಳುವ ಶ್ರೀಗಂಧದ ತುಂಡುಗಳನ್ನು ಸಾಗಾಣಿಕೆ ಮಾಡುತ್ತಿರುವ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯವರು, ಆರೋಪಿಗಳಾದ ಯಲ್ಲಾಪುರ ತಾಲೂಕಿನ ಮಾಗೋಡಿನ ನಾಗೇಂದ್ರ ಮಂಜುನಾಥ ಸಿದ್ಧಿ, ಅಂಕೋಲಾ ತಾಲೂಕಿನ ಕಮ್ಮಾಣಿಯ ರವಿ ಕೃಷ್ಣ ಸಿದ್ಧಿ, ಯಲ್ಲಾಪುರ ಪಟ್ಟಣದ ಕಾಳಮ್ಮನಗರದ ಮಂಜುನಾಥ ಪ್ರಭಾಕರ ಸಿದ್ಧಿ ಹಾಗೂ ಲಕ್ಷ್ಮಣ ಪ್ರಭಾಕರ ಸಿದ್ಧಿ ಇವರನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ತಾಲೂಕಿನ ವಜ್ರಳ್ಳಿಯ ಸತೀಶ ಸಿದ್ಧಿ ತಲೆಮರೆಸಿಕೊಂಡಿದ್ದು ತನಿಖೆ ಮುಂದುವರಿದಿದೆ.
ಈ ಆರೋಪಿಗಳಿಂದ ಸಿಪ್ಪೆ ಕೆತ್ತಿದ ಶ್ರೀಗಂಧ-12 ತುಂಡು 3.80 ಕೆ.ಜಿ, ಸಿಪ್ಪೆ ಸಹಿತ-17 ತುಂಡು 55 ಕೆ.ಜಿ ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಜೀಜ್.ಎ.ಶೇಖ ಅವರ ಮಾರ್ಗದರ್ಶದಲ್ಲಿ ವಲಯ ಅರಣ್ಯಾಧಿಕಾರಿ ಮಂಜುನಾಥ ಹೆಚ್ ನಾಯ್ಕ ಇವರ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ದರ್ಶನ.ವಿ.ಎಸ್, ಜಿ.ಸಂತೋಷ, ಶ್ರೀನಿವಾಸ ನಾಯ್ಕ, ಸಂಜಯಕುಮಾರ ಬೋರಗಲ್ಲಿ, ಪ್ರಭಾಕರ ಬಗಲಿ, ಮಂಜುನಾಥ ಗರ್ಭಗುಡಿ, ಶರಣಬಸು ದೇವರ, ಶ್ರೀಧರ ಸಜ್ಜನ, ಉಮೇಶ ಹೊಸಮನಿ ಹಾಗೂ ಗಸ್ತು ಅರಣ್ಯ ಪಾಲಕರಾದ ಶಹನವಾಜ್ ಮುಲ್ತಾನಿ, ಗೌಡಪ್ಪ ಗೌಡ ಸುಳ್ಳದ, ರಮೇಶ ಬಡಿಗೇರ, ಬಸವರೆಡ್ಡಿ ರಡ್ಡೇರ, ಸತೀಶ ಕುಂಬಾರ, ಗೌರೀಶ ನಾಯ್ಕ, ರಾಮು ಕೊಕರೆ, ಶಿವಾನಂದ ಯಾವಗಲ್, ಗಣೇಶ ವಾಹನ ಚಾಲಕರಾದ ಆನಂದ, ದಿನೇಶ, ಪ್ರಶಾಂತ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.