ಯಲ್ಲಾಪುರ ಪಟ್ಟಣದ ಟಿ.ಎಂ.ಎಸ್. ಸಂಸ್ಥೆಯ 63 ನೇ ವಾರ್ಷಿಕ ಮಹಾಸಭೆಯು ಬುಧವಾರ ಸಂಸ್ಥೆಯ ಸಭಾಭವನದಲ್ಲಿ ನಡೆಯಿತು.

ಸಂಸ್ಥೆಯ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸದಸ್ಯರ ಸಹಕಾರದಿಂದ ಸಂಸ್ಥೆ ಬೆಳೆಯುತ್ತಿದೆ, ಸಂಸ್ಥೆಯ ಲಾಭ ಮಾತ್ರ ನಮ್ಮ ಗುರಿಯಲ್ಲ. ಸಂಸ್ಥೆಯ ಬೆಳವಣಿಗೆಯ ಜೊತೆಯಲ್ಲಿ ಸದಸ್ಯರೂ ಬೆಳೆಯಬೇಕು, ಅಭಿವೃದ್ಧಿ ಹೊಂದಬೇಕು ಎಂಬ ಆಶಯ ನಮ್ಮದು, ರೈತರಿಗೆ ಹಾಗೂ ಸಂಸ್ಥೆಗೆ ಹಾನಿಯಾಗದ ಹಾಗೇ ಆಡಳಿತ ನಡೆಸುವುದು ನಮ್ಮ ಧ್ಯೇಯವಾಗಿದೆ.

ಚುನಾವಣಾ ಮತ ಎಣಿಕೆಯ ವಿಚಾರವಾಗಿ ನಡೆದ ನಾನಾ ಬೆಳವಣಿಗೆಯಲ್ಲಿ, ಆಡಳಿತ ಮಂಡಳಿ ಇಲ್ಲದೇ ಒಂಭತ್ತು ತಿಂಗಳುಗಳ ಕಾಲ ಸಂಸ್ಥೆಯ ಸದಸ್ಯರಿಗೆ ಆದ ತೊಂದರೆಗೆ ವಿಷಾದ ವ್ಯಕ್ತಪಡಿಸುತ್ತೇವೆ, ಕಳೆದ ಆರ್ಥಿಕ ವರ್ಷದಲ್ಲಿ ಸಂಸ್ಥೆಗೆ 2.59 ಕೋಟಿ ರೂ ನಿವ್ವಳ ಲಾಭವಾಗಿದೆ ಮುಂದಿನ ದಿನಗಳಲ್ಲಿ ಸಂಸ್ಥೆಯನ್ನು ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ಯಲು ಎಲ್ಲರ ಸಹಕಾರ ಅಗತ್ಯ ಎಂದರು. ಸದ್ಯದಲ್ಲಿಯೇ ಮೂಂಡಗೋಡಿನಲ್ಲಿ ಟಿ.ಎಂ.ಎಸ್.ಶಾಖೆಯನ್ನು ತೆರೆಯುವ ಬಗ್ಗೆ ಚಿಂತನೆ ನಡೆದಿದೆ. ಸಂಸ್ಥೆಯ ಆವಾರದಲ್ಲಿ ಹೊಸ ಕಟ್ಟಡ ನಿರ್ಮಾಣ ಗುರಿ ಹೊಂದಿದ್ದೇವೆ ಎಂದರು.

ಬುಧವಾರ ನಡೆದ ಟಿ.ಎಂ.ಎಸ್. ವಾರ್ಷಿಕ ಮಹಾಸಭೆಯಲ್ಲಿ, ಸಂಸ್ಥೆಯ ಚುನಾವಣಾ ಮತ ಎಣಿಕೆಯ ಕುರಿತು ನಡೆದ ಸುಧೀರ್ಘ ಹೋರಾಟದ ಬಗ್ಗೆ ಇಡಗುಂದಿ ಸೊಸೈಟಿ ಅಧ್ಯಕ್ಷರು ಹಾಗೂ ಟಿ.ಎಂ.ಎಸ್. ಅಧ್ಯಕ್ಷರು, ಆಡಳಿತ ಮಂಡಳಿಯ ಪ್ರಮುಖರ ನಡುವೆ ತೀವೃ ಮಾತಿನ ಚಕಮಕಿ ನಡೆಯಿತು.

ಇಡಗುಂದಿ ಸೊಸೈಟಿಯ ಅಧ್ಯಕ್ಷ ನಾರಾಯಣ ಭಟ್ಟ ಬಟ್ಲಗುಂಡಿ ಮಾತನಾಡಿ, ಸುಧೀರ್ಘ ಕಾಲ TMS ಸಂಸ್ಥೆಗೆ ಆಡಳಿತ ಮಂಡಳಿ ಇಲ್ಲದೇ ಸದಸ್ಯರು ಅನುಭವಿಸಿದ ಕಷ್ಟ, ನೋವಿಗೆ ಇಡಗುಂದಿ ಸೊಸೈಟಿ, ದೇಹಳ್ಳಿ ಸೊಸೈಟಿ, ಕಿರವತ್ತಿ ಸೊಸೈಟಿ ಕಾರಣ ಎಂದು ಸಂಸ್ಥೆಯ ಅಢಾವೆ ಪತ್ರಿಕೆಯಲ್ಲಿ ನಮೂದಿಸಿದ್ದೀರಿ. ಸಭೆಯಲ್ಲಿಯೂ ಹೇಳಿದ್ದೀರಿ. ಇದು ಸರಿಯಲ್ಲ, ಸಂಸ್ಥೆಗೆ ಆದ ನಷ್ಟ, ಸದಸ್ಯರಿಗೆ ಅದ ತೊಂದರೆಗೆ ನಾವು ಹೊಣೆಗಾರರಲ್ಲ. ಜನರಿಗೆ ತಪ್ಪು ಸಂದೇಶ ನೀಡಬೇಡಿ ಎಂದರು.

ನಾವು ನಿಯಮಾವಳಿಯ ಪ್ರಕಾರವೇ, ಸದಸ್ಯರ ಹಿತದೃಷ್ಟಿಯಿಂದ, ಸಂಸ್ಥೆಯ ಒಳಿತಿಗಾಗಿ ದಾವೆ ದಾಖಲಿಸಿ ಹೋರಾಡಿದ್ದೇವೆ. ಇದರಲ್ಲಿ ನಮಗೆ ಯಾವುದೇ ದುರುದ್ದೇಶ ಅಥವಾ ಸ್ವಾರ್ಥ ಇಲ್ಲ. ಆದರೂ ನಮ್ಮ ಮೇಲೆ ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ ಎಂದು ಪ್ರತಿಪಾದಿಸಿದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಸಮಯ ಆರೋಪ, ಪ್ರತ್ಯಾರೋಪಗಳ ಸುರಿಮಳೆಯಾಯಿತು. ಈ ಹೋರಾಟಕ್ಕೆ ಸಂಬಂಧಿಸಿ ಟಿ.ಎಂ.ಎಸ್. ಸಂಸ್ಥೆಗೆ 13 ಲಕ್ಷ ಖರ್ಚು ಹಾಕಲಾಗಿದೆ. ಇದು ಸರಿಯಲ್ಲ, ಈ ಖರ್ಚನ್ನು ಹೋರಾಟಕ್ಕೆ ಕಾರಣರಾದವರೇ ಭರಿಸುವಂತಾಗಬೇಕು ಎಂದು ಕೆಲವರು ಸಭೆಯಲ್ಲಿ ಆಗ್ರಹಿಸಿದರು.

TMS ಸಂಸ್ಥೆಯ ಚುನಾವಣಾ ಮತ ಎಣಿಕೆಗೆ ಸಂಬಂಧಿಸಿದಂತೆ ನಡೆದ ಹೋರಾಟದ ಬಗ್ಗೆ, ಇದರಲ್ಲಿ ಯಾರದ್ದು ತಪ್ಪು? ಯಾರದ್ದು ಸರಿ ಎಂಬ ಬಗ್ಗೆ, ಇನ್ನು ಮುಂದಾದರೂ ಆರೋಪ, ಪ್ರತ್ಯಾರೋಪ ನಿಲ್ಲಬೇಕು, ಎಲ್ಲರೂ ಸೇರಿ ಸಂಸ್ಥೆಯ ಬೆಳವಣಿಗೆ, ಸದಸ್ಯರ ಹಿತವನ್ನು ಚಿಂತನೆ ನಡೆಸಬೇಕು, ಇಂತಹ ಅಯಾಚಿತ ಬೆಳವಣಿಗೆ ಇಲ್ಲಿಗೇ ನಿಲ್ಲಬೇಕು, ಜಿದ್ದು, ಹಠ ಮುಂದುವರಿಯಬಾರದು ಎಂದು ಕೆಲವು ಸದಸ್ಯರು ಸಭೆಯಲ್ಲಿ ಸಲಹೆ ನೀಡಿದರು.

ಟಿ.ಎಂ.ಎಸ್ ಸಂಸ್ಥೆಯ ಬೆಳವಣಿಗೆಯಲ್ಲಿ ಅನೇಕ ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ದಿ.ರಾಮಕೃಷ್ಣ ಹೆಗಡೆಯವರ ಕೊಡುಗೆ ಅಪಾರವಾಗಿದೆ. ಅವರ ನೆನಪು ಚಿರಸ್ಥಾಯಿಯಾಗಿರುವಂತೆ ಸಂಸ್ಥೆಯ ಅವರಣದಲ್ಲಿ ರಾಮಕೃಷ್ಣ ಹೆಗಡೆಯವರ ಪ್ರತಿಮೆ ಸ್ಥಾಪಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಇದಕ್ಕೆ ಸಮ್ಮತಿ ವ್ಯಕ್ತಪಡಿಸಿದರು. ಸಂಸ್ಥೆಯು ಲಾಭದಲ್ಲಿದ್ದು, ಸದಸ್ಯರ ಪಡೆದ ಸಾಲಕ್ಕೆ ಬಡ್ಡಿ ದರದವನ್ನು ಸ್ವಲ್ಪ ಕಡಿಮೆ ಮಾಡಬೇಕು ಎಂಬ ಬೇಡಿಕೆ ಕೇಳಿಬಂತು.

ಸಭೆಯಲ್ಲಿ ಸಂಸ್ಥೆಯ ಹಿರಿಯ ಸದಸ್ಯರನ್ನು ಸನ್ಮಾನಿಸಿ, ಗೌರವಿಸಲಾಯಿತು. ವೇದಿಕೆಯಲ್ಲಿ ಸಂಸ್ಥೆಯ ಎಲ್ಲ ನಿರ್ದೇಶಕರು ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಾಹಕ ಸುದೀಪ ಹೆಗಡೆ ವಾರ್ಷಿಕ ವರದಿ ಮಂಡಿಸಿ, ನಿರ್ವಹಿಸಿದರು.

====================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading