




ಶಾಸಕ ಹೆಬ್ಬಾರ್ ರಾಜೀನಾಮೆಗೆ ಹರಿಪ್ರಕಾಶ ಕೋಣೆಮನೆ ಆಗ್ರಹ

ಬಿಜೆಪಿ ಪಕ್ಷದಿಂದ ಆಯ್ಕೆಯಾಗಿ ಶಾಸಕರಾಗಿರುವ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರು ನೈತಿಕ ಹೊಣೆಹೊತ್ತು ತಕ್ಷಣ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಆಗ್ರಹಿಸಿದ್ದಾರೆ.

ಅವರು ಬುಧವಾರ ಯಲ್ಲಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯಿಂದ ಉಚ್ಛಾಟಿತರಾದ ಬಳಿಕವೂ ಪದೇ,ಪದೆ ಬಿಜೆಪಿ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಈಗ ನಾನು ಫ್ರೀಬರ್ಡ್ ಎಂದು ಇತ್ತೀಚೆಗೆ ಕಾರವಾರದಲ್ಲಿ ಹೇಳಿಕೆ ನೀಡಿರುವ ಹೆಬ್ಬಾರ್ ಅವರು ಶಾಸಕ ಸ್ಥಾನದಲ್ಲಿದ್ದುಕೊಂಡು, ಫ್ರೀಬರ್ಡ್ ಆಗಲು ಹೇಗೆ ಸಾಧ್ಯವಿದೆ? ಶಾಸಕರೊಬ್ಬರು ಫ್ರೀ ಬರ್ಡ್ ಆಗುವುದಾದರೆ ಚುನಾಯಿತ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಆಗಬಹುದು.

ಆದರೆ ಪ್ರಸ್ತುತ ಶಾಸಕ ಹೆಬ್ಬಾರ್ ಅವರು, ಕ್ಷೇತ್ರದ ಮತದಾರರ ಹಾಗೂ ತಮ್ಮ ಆಯ್ಕೆಗೆ ಕಾರಣವಾದ ಬಿಜೆಪಿ ಪಕ್ಷದ ಋಣದಲ್ಲಿ ಇದ್ದಾರೆ. ಬಿಜೆಪಿ ಪಕ್ಷ ಮತ್ತು ಶಾಸಕ ಸ್ಥಾನದ ಸಂಬಂಧ ಸಂವಿಧಾನಬದ್ಧವಾದದ್ದು, ಕಾಲಿಗೆ ಹಗ್ಗಕಟ್ಟಿಕೊಂಡು ಫ್ರೀ ಬರ್ಡ್ ಎಂದರೆ ಇದನ್ನು ನಂಬಲು ಜಿಲ್ಲೆಯ ಜನರು ಕಿವಿಯ ಮೇಲೆ ಹೂವಿಟ್ಟುಕೊಂಡಿಲ್ಲ, ಹೆಬ್ಬಾರ್ ಅವರು ಯಾವ ಪಕ್ಷಕ್ಕೆ ಹೋಗಲೂ ಸ್ವತಂತ್ರರಿದ್ದಾರೆ. ಆದರೆ ತಾವು ಮೊದಲು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ತಮಗೆ ಬೇಕಾದ ಪಕ್ಷಕ್ಕೆ ಹೋಗಲಿ.
ಅದನ್ನು ಬಿಟ್ಟು ಈ ರೀತಿ ನಿರಂತರವಾಗಿ ಬಿಜೆಪಿಯನ್ನು ಹಳಿಯುವ ಜಾಯಮಾನ ಸರಿಯಲ್ಲ. ತಾವು ಆಯ್ಕೆಯಾದಂದಿನಿಂದ ಕಾಂಗ್ರೆಸ್ ಜೊತೆ ನಿಕಟ ಸಂಬಂಧಹೊಂದಿರುವ ಶಾಸಕರು, ಬಿಜೆಪಿ ಪಕ್ಷವನ್ನು ಮತ್ತು ಸಂಸದ ಕಾಗೇರಿಯವರನ್ನು ಟೀಕಿಸುವ ಜಾಯಮಾನದಿಂದಾಗಿ ಜಿಲ್ಲೆಯ ಮತ್ತು ಕ್ಷೇತ್ರದ ಜನರು ತಮ್ಮ ಮೇಲೆ ಇಟ್ಟ ವಿಶ್ವಾಸ ಮತ್ತು ನಂಬಿಕೆಯನ್ನು ಕಳೆದುಕೊಂಡಿದ್ದಾರೆ.
ಯಾವ ಪಕ್ಷಕ್ಕೆ ಹೋಗಬೇಕು ಎನ್ನುವ ಆಯ್ಕೆ ನಿಮ್ಮದು, ಅದಕ್ಕೆ ನಮ್ಮ ಅಭ್ಯಂತರ ಇಲ್ಲ, ಆದರೆ ಜನರಿಂದ, ಬಿಜೆಪಿ ಚಿಹ್ನೆಯಿಂದ ಚುನಾಯಿತರಾಗಿ ಶಾಸಕ ಸ್ಥಾನದಲ್ಲಿದ್ದರೆ ನಿಮಗೆ ಈ ಆಯ್ಕೆ ಇಲ್ಲ, ರಾಜೀನಾಮೆ ನೀಡಿ ಹೋಗಬಹುದು ಎಂದರು.

ನಮ್ಮ ಮನೆ ನಮ್ಮ ಹಕ್ಕು ಜನಾಗ್ರಹ ಆಂದೋಲನದಲ್ಲಿ ಸಂಸದ ಕಾಗೇರಿಯವರು ಪಂಚಾಯತಿಗಳ ಮುಂದೆ ಚೊಂಬು ಬಡಿಯುವ ಬದಲು ಸಂಸತ್ತಿನ ಗೋಡೆಗೆ ತಲೆ ಚಚ್ಚಿಕೊಳ್ಳಲಿ ಎಂಬ ಶಾಸಕರ ಬೇಜವಾಬ್ದಾರಿ ಮತ್ತು ಅಸಂಬದ್ಧ ಹೇಳಿಕೆಯನ್ನು ಜಿಲ್ಲೆಯ ಪ್ರಜ್ಞಾವಂತ ಜನರು ಒಪ್ಪುವುದಿಲ್ಲ, ಶಾಸಕರ ಈ ಉಢಾಪೆಯ ಮಾತನ್ನು ನಾವು ಖಂಡಿಸುತ್ತೇವೆ, ಕೆಸರೆರಚಾಟದ ರಾಜಕಾರಣ ಮಾಡಿದರೆ, ನಾವೂ ಸಹ ಅದಕ್ಕೆ ತಕ್ಕ ಉತ್ತರ ನೀಡಲು ಸಿದ್ಧರಿದ್ದೇವೆ: ಹರಿಪ್ರಕಾಶ ಕೋಣೆಮನೆ ಬಿಜೆಪಿ ರಾಜ್ಯ ವಕ್ತಾರ
.
ಜಿಲ್ಲೆಯ ಜನರ ತೀವ್ರ ವಿರೋಧಕ್ಕೆ ಕಾರಣವಾಗಿರುವ ಬೇಡ್ತಿ ನದಿ ತಿರುವು ಯೋಜನೆ ಕಾರಣದಿಂದಲೂ ತಾವು ಶಾಸಕ ಸ್ಥಾನಕ್ಕೆ ರಾಜೀನಾಮ ನೀಡುವುದೇ ಸೂಕ್ತ, ಈ ಯೋಜನೆಯ ಯೋಜನಾ ವರದಿಯನ್ನು ಶಾಸಕ ಹೆಬ್ಬಾರ್ ಅವರ ಒತ್ತಾಸೆಯಂತೆ ಮಾಡಲಾಗಿದೆ ಎಂದು ಸ್ವತಃ ಮುಖ್ಯಮಂತ್ರಿಯವರೇ ಮಾಧ್ಯಮಗಳ ಎದುರು ಹೇಳಿದ್ದಾರೆ. ನಾವು ರಾಜೀನಾಮೆ ಕೇಳಲು ಇದೂ ಸಹ ಕಾರಣವಾಗಿದೆ ಎಂದು ಕೋಣೆಮನೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಉಮೇಶ ಭಾಗ್ವತ್, ರಾಘವೇಂದ್ರ ಭಟ್ಟ ಹಾಸಣಗಿ, ಗಣೇಶ ಪಾಟಣಕರ್, ಪ್ರಸಾದ ಹೆಗಡೆ, ಮಹಾಬಲೇಶ್ವರ ಭಟ್ಟ, ಜಿ.ಆರ್.ಭಾಗ್ವತ್ ಮುಂತಾದವರು ಇದ್ದರು.

================















