ನ.1ರಿಂದ ನ.5ರ ವರೆಗೆ ಯಲ್ಲಾಪುರ ಪಟ್ಟಣದ ತಾಲೂಕಾ ಪಂಚಾಯತಿ ಆವರಣದ ಗಾಂಧಿ ಕುಟೀರದಲ್ಲಿ 40ನೇ ವರ್ಷದ ಸಂಕಲ್ಪ ಉತ್ಸವವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸಂಕಲ್ಪ ಸಂಸ್ಥೆಯ ಸಂಚಾಲಕ ಪ್ರಸಾದ ಹೆಗಡೆ ಹೇಳಿದರು.

ಅವರು ಗುರುವಾರ ಯಲ್ಲಾಪುರದಲ್ಲಿ ಸಂಕಲ್ಪ ಉತ್ಸವದ ಪದಾಧಿಕಾರಿಗಳೊಂದಿಗೆ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಈವರ್ಷ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆಯವರ ಜನ್ಮ ಶತಮಾನೋತ್ಸವದ ನಿಮಿತ್ತ ಐದು ದಿನ ನಡೆಯುವ ಈ ಉತ್ಸವದಲ್ಲಿ ಪ್ರತಿದಿನ ಅವರ ಸಂಸ್ಮರಣೆ ನಡೆಯಲಿದೆ. ಉತ್ಸವದಲ್ಲಿ ವಿವಿಧ ಮಠಾಧೀಶರು, ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ,

ಭಗವದ್ಗೀತಾ ಪಠಣ, ಸಂಕಲ್ಪ ಪ್ರಶಸ್ತಿ ಪ್ರದಾನ, ತಾಳಮದ್ದಳೆ, ಸಿತಾರ್ ವಾದನ, ಶಾಸ್ತ್ರೀಯ ಸಂಗೀತ, ಭರತನಾಟ್ಯ, ಭಜನೆ, ಕೀರ್ತನೆ, ಯಕ್ಷನೃತ್ಯ, ಗಾನವೈಭವ, ಖ್ಯಾತ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು. ಈವರ್ಷ ವಿಶೇಷವಾಗಿ ಸ್ವದೇಶಿ ಗೋ ಸಂಕಲ್ಪ ಉತ್ಸವದಲ್ಲಿ ಗೋವಿನ ಪಾಲನೆ, ಗೋ ಚಿಕಿತ್ಸೆ, ಗೋ ವೈಭವ, ಗೋ ಜೈವಿಕ ಕೃಷಿ, ಗೋ ಸಂಪನ್ಮೂಲಗಳ ನಿರ್ವಹಣೆ, ಗವ್ಯೋತ್ಪನ್ನ ಮಾರಾಟ, ಸದ್ಬಳಕೆ ಕುರಿತು ಉಪನ್ಯಾಸ, ಗವ್ಯೋತ್ಪನ್ನ ವಸ್ತು ತಯಾರಿಕಾ ಪ್ರಶಿಕ್ಷಣ ನಡೆಯಲಿದೆ ಎಂದರು.

ನ. 1 ರಂದು ಉತ್ಸವದ ಉದ್ಘಾಟನೆಯನ್ನು ಸ್ವರ್ಣವಲ್ಲೀ ಮಠದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ನೆರವೇರಿಸಲಿದ್ದಾರೆ. ನ.2ರಂದು ನೆಲೆಮಾವು ಮಠದ ಶ್ರೀಮದ್ ಮಾಧವಾನಂದ ಭಾರತೀ ಸ್ವಾಮೀಜಿ ಹಾಗೂ ಶ್ರೀಕ್ಷೇತ್ರ ಬಂಗಾರಮಕ್ಕಿಯ ಮಾರುತಿ ಗುರೂಜಿ ಭಾಗವಹಿಸಲಿದ್ದಾರೆ, ನ.3ರಂದು ಬಾರಕೂರು ಮಹಾಸಂಸ್ಥಾನದ ವಿದ್ಯಾವಾಚಸ್ಪತಿ ಡಾ.ವಿಶ್ವಸಂತೋಷ ಭಾರತೀ ಶ್ರೀಪಾದರು ಉಪಸ್ಥಿತರಿರುವರು. ನ.4ರಂದು ಎಡನೀರು ಮಠದ ಶ್ರೀಮದ್ ಸಚ್ಚಿದಾನಂದ ಭಾರತೀ ಸ್ವಾಮೀಜಿ ಭಾಗವಹಿಸುವರು, ನ.5ರಂದು ಉತ್ಸವದ ಸಮಾರೋಪ ಸಮಾರಂಭ ನಡೆಯಲಿದೆ. ರಾಮಚಂದ್ರಾಪುರ ಮಠದ ಶ್ರೀಮದ್ ರಾಘವೇಶ್ವರ ಭಾರತೀ ಸ್ವಾಮೀಜಿ ಉಪಸ್ಥಿತರಿರುವರು.

ನ.1ರಂದು ಭಕ್ತಪ್ರಹ್ಲಾದ, ನ.2ರಂದು ಕಂಸ ದಿಗ್ವಿಜಯ, ಕಂಸವಧೆ, ನ.3ರಂದು ವೀರ ಬರ್ಭರೀಕ, ಚಕ್ರಚಂಡಿಕೆ, ನ.4ರಂದು ನಾಗನಂದನೆ, ನ.5 ರಂದು ಗಾನವೈಭವ, ಭಾರ್ಗವ ವಿಜಯ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ.

ಈ ಎಲ್ಲ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ವಿನಂತಿಸಿದ್ದಾರೆ.

ಸಂಘಟಕರಾದ ಸಿ.ಜಿ.ಹೆಗಡೆ, ಪ್ರಶಾಂತ ಹೆಗಡೆ, ಶ್ರೀಪಾದ ಭಟ್ಟ, ಬಾಬು ಬಾಂದೇಕರ, ಗೋಪಣ್ಣ ತಾರಿಮಕ್ಕಿ, ನರಸಿಂಹ ತಾಳಗುಪ್ಪ, ಪ್ರದೀಪ ಯಲ್ಲಾಪುರಕರ್, ರವಿ ದೇವಡಿಗ, ಶಿವು ಅಗೇರ ಇದ್ದರು.

=================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading