ಮನೆ ದರೋಡೆ ಪ್ರಕರಣ ಬೇಧಿಸಿದ ಪೊಲೀಸರಿಗೆ ಗ್ರಾಮಸ್ಥರಿಂದ ಸನ್ಮಾನ
ಯಲ್ಲಾಪುರ ತಾಲೂಕಿನ ಮೂಲೆಗುಂಡ್ಕಲ್ ನ ರಾಮಚಂದ್ರ ಭಟ್ಟ ಅವರ ಮನೆಯಲ್ಲಿ ನಡೆದ ದರೋಡೆ ಪ್ರಕರಣವನ್ನು ಶೀಘ್ರವಾಗಿ ಬೇಧಿಸಿ, ಪ್ರಕರಣದ ಆರೋಪಿಗಳನ್ನು ಬಂಧಿಸಿದ ಯಲ್ಲಾಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಹುಟಕಮನೆ ಗ್ರಾಮಸ್ಥರು ಮಂಗಳವಾರ ಸನ್ಮಾನಿಸಿ, ಗೌರವಿಸಿದರು.
ಈ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸಿ, ಮನೆ ದರೋಡೆ ನಡೆಸಿದ್ದ ಸುಲಿಗೆಕೋರರನ್ನು ಕ್ಷೀಪ್ರವಾಗಿ ಬಂಧಿಸಿದ ಪೊಲೀಸರ ಕಾರ್ಯಕ್ಕೆ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದರು.
ಸಿಪಿಐ ಸುರೇಶ ಕುಂಬಾರ ಅಪರಾಧಗಳನ್ನು ತಡೆಗಟ್ಟುವ ಕುರಿತು ಮಾತನಾಡಿ, ಒಂಟಿ ಮನೆ ಇರುವವರು ಉತ್ತಮ ಗುಣಮಟ್ಟದ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು, ಊರಿನ ಪ್ರಮುಖ ರಸ್ತೆಗಳಲ್ಲಿ ಗ್ರಾಮಸ್ಥರು ಸೇರಿಕೊಂಡು ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಬೇಕು, ಅಪರಾಧಗಳನ್ನು ತಡೆಗಟ್ಟಲು ಹಾಗೂ ಅಪರಾಧಗಳು ಸಂಭವಿಸಿದ ಸಂದರ್ಭದಲ್ಲಿ ಅಪರಾಧಿಗಳ ಪತ್ತೆಗೆ ಸಿಸಿ ಕ್ಯಾಮರಾಗಳು ನೆರವಾಗುತ್ತವೆ, ಗ್ರಾಮಸ್ಥರು ಪೊಲೀಸ್ ಠಾಣೆಯೊಂದಿಗೆ ಹಾಗೂ ಬೀಟ್ ಸಿಬ್ಬಂದಿಯೊಂದಿಗೆ ಸಂಪರ್ಕ ಇಟ್ಟುಕೊಳ್ಳಬೇಕು, ಯಾವುದಾದರೂ ಪ್ರಮುಖ ಮಾಹಿತಿ ಇದ್ದರೆ ತಕ್ಷಣ ಬೀಟ್ ಸಿಬ್ಬಂದಿಗೆ ಅಥವಾ ಪೊಲೀಸ್ ಅಧಿಕಾರಿಗಳಿಗೆ ಅಥವಾ ಠಾಣೆಗೆ ತಿಳಿಸಬೇಕು ಎಂದರು.
ಪಿಎಸ್ಸೈ ರಾಜಶೇಖರ ವಂದಲಿ ಮಾತನಾಡಿ, ಅಪರಿಚಿತರು ಕಂಡುಬಂದರೆ ಜಾಗೃತೆ ವಹಿಸಬೇಕು, ಕೆಲಸಗಾರರನ್ನು ನೇಮಿಸಿಕೊಳ್ಳುವಾಗ, ಕೆಲಸಗಾರರ ಗುರುತು, ಅವರ ಪೂರ್ವಾಪರ ತಿಳಿದುಕೊಳ್ಳುವುದು ಅಗತ್ಯವಾಗಿದೆ, ಕಾನೂನು, ಸುವ್ಯವಸ್ಥೆಗೆ ಮತ್ತು ಅಪರಾಧಗಳನ್ನು ತಡೆಗಟ್ಟಲು ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.