ಮನೆಯವರಿಗೆ ಚಾಕು ತೋರಿಸಿ, ಬೆದರಿಸಿ, ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಮನೆಯೊಳಗಿನ ಕಪಾಟಿನಲ್ಲಿದ್ದ ಹಣ, ಲಕ್ಷಾಂತರ ರೂ ಮೌಲ್ಯದ ಬಂಗಾರದ ಆಭರಣ ಹಾಗೂ ವಿವಿಧ ವಸ್ತುಗಳನ್ನು ದರೋಡೆ ಮಾಡಿಕೊಂಡುಹೋಗಿರುವ ಘಟನೆ ಯಲ್ಲಾಪುರ ತಾಲೂಕಿನ ಮೂಲೆಗುಂಡ್ಕಲ್ ನಲ್ಲಿ ನಡೆದಿದೆ.

ಹುಟಕಮನೆ ಗ್ರಾಮದ ಮೂಲೆಗುಂಡ್ಕಲ್ ನ ರಾಮಚಂದ್ರ ಮಹಾಬಲೇಶ್ವರ ಭಟ್ಟ (63 ವರ್ಷ) ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾರೆ. ದಾಖಲಾದ ದೂರಿನ ಪ್ರಕಾರ, ಗುರುವಾರ ರಾತ್ರಿ 8.30 ಗಂಟೆಗೆ ಯಾರೋ ಕಳ್ಳರು ರಾಮಚಂದ್ರ ಭಟ್ಟ ಅವರಿಗೆ ಹಾಗೂ ಅವರ ಮನೆಯವರಿಗೆ ಚಾಕು ತೋರಿಸಿ, ಬೆದರಿಸಿ, ಅವರ ಮನೆಯ ಮುಂದಿನ ಬಾಗಿಲನ್ನು ಮುರಿದು ಮನೆಯೊಳಗೆ ನುಗ್ಗಿದ್ದಾರೆ.

ಮನೆಯ ಮಾಳಗಿಯ ಮೇಲಿದ್ದ ಮೂರು ರೂಮುಗಳಲ್ಲಿನ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿ, ಒಂದನೇ ರೂಮಿನಲ್ಲಿದ್ದ ಕಪಾಟನ್ನು ತೆರೆದು ಅದರಲ್ಲಿದ್ದ ಬಟ್ಟೆಗಳನ್ನು ಚಲ್ಲಾಪಿಲ್ಲಿಯಾಗಿ ಮಾಡಿ, ಕಪಾಟಿನಲ್ಲಿದ್ದ 85 ಸಾವಿರ ರೂ ಮೌಲ್ಯದ 20 ಗ್ರಾಂ ತೂಕದ ಬಂಗಾರದ ಕರಿಮಣಿ ಸರ, 85 ಸಾವಿರ ರೂ ಮೌಲ್ಯದ ತಲಾ 10 ಗ್ರಾಂ ತೂಕದ ಎರಡು ಬಂಗಾರದ ಬಳೆಗಳು, 60 ಸಾವಿರ ರೂ ಮೌಲ್ಯದ 12 ಗ್ರಾಂ ತೂಕದ ಒಂದು ಜೊತೆ ಕಿವಿಯೋಲೆ,

20 ಸಾವಿರ ರೂ ಮೌಲ್ಯದ 3 ಗ್ರಾಂ ತೂಕದ ಬಂಗಾರದ ಉಂಗುರ, 6 ಸಾವಿರ ರೂ ಮೌಲ್ಯದ 1 ಗ್ರಾಂ ಬಂಗಾರದ ಲಾಕೆಟ್, 6 ಸಾವಿರ ರೂ ಮೌಲ್ಯದ, 30 ಗ್ರಾಂ ತೂಕದ ಎರಡು ಬೆಳ್ಳಿಯ ಬಟ್ಟಲು, 8 ಸಾವಿರ ರೂ ಮೌಲ್ಯದ ಎರಡು ಕೈಗಡಿಯಾರ, 11 ಸಾವಿರ ರೂ ಮೌಲ್ಯದ ಸ್ಯಾಮಸಂಗ್ ಮೊಬೈಲ್, 9 ಸಾವಿರ ರೂ ಮೌಲ್ಯದ ವಿವೋ ಮೊಬೈಲ್, ಹತ್ತು ಸಾವಿರ ನೋಟು, ನಾಣ್ಯ ಸೇರಿ ಒಟ್ಟೂ 12 ಸಾವಿರ ರೂ ಹಣ ಹಾಗೂ ಮನೆಯಲ್ಲಿದ್ದ ಅಂದಾಜು 60 ಸಾವಿರ ರೂ ಮೌಲ್ಯದ ಟಿವಿಎಸ್ ಅಪಾಚೆ ಬೈಕ್ ಅನ್ನು ದರೋಡೆ ಮಾಡಿಕೊಂಡು ಹೋಗಿದ್ದಾರೆ.

ದರೋಡೆಕೋರರ ದಾಳಿಗೆ ರಾಮಚಂದ್ರ ಭಟ್ಟ ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ದರೋಡೆಯಾದ ವಸ್ತುಗಳ ಒಟ್ಟೂ ಮೌಲ್ಯ 3,62,000 ರೂ ಎಂದು ಅಂದಾಜಿಸಲಾಗಿದೆ. ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದು, ಅಪರಾಧಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

=================

Leave a Reply

You cannot copy content of this page