ಯಲ್ಲಾಪುರ ಪಟ್ಟಣದ ಗಾಂಧಿಕುಟೀರದಲ್ಲಿ ನಡೆದ ಸಂಕಲ್ಪ ಉತ್ಸವದ ವೇದಿಕೆಯಲ್ಲಿ ಭಾರತೀ ನೃತ್ಯ ಕಲಾ ಕೇಂದ್ರದ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಭರತ ನಾಟ್ಯ ಪ್ರದರ್ಶನವು ಪ್ರೇಕ್ಷಕ ಮನಸೂರೆಗೊಂಡಿತು.

ಭಾರತೀ ನೃತ್ಯ ಕಲಾ ಕೇಂದ್ರದ ಮುಖ್ಯಸ್ಥೆ ವಿದುಷಿ ಸುಮಾ ಹೆಗಡೆಯವರ ಮಾರ್ಗದರ್ಶನದಲ್ಲಿ ಕಲಾ ಕೇಂದ್ರದ ಯುವ ಕಲಾವಿದೆಯರು ಭರತನಾಟ್ಯವನ್ನು ಪ್ರದರ್ಶಿಸಿದರು.

ಕಲಾವಿದೆಯರಾದ ವೈಷ್ಣವಿ ದುಂಡಿ, ಸುರಭಿ ಕಟ್ಟಿ, ಪ್ರಿಯಾ ರೇವಣ್ಕರ್ ಅವರು ಭರತನಾಟ್ಯ ಪ್ರದರ್ಶಿಸಿದರು. ದಾಸ ಸಾಹಿತ್ಯದ ಪ್ರಸಿದ್ಧ ಪದ್ಯಗಳಾದ ಮಹಾಗಣಪತಿಂ ಮನಸಾ ಸ್ಮರಾಮಿ ಹಾಗೂ ಕಂಡೆನಾ ನಟರಾಜನ ಮುಂತಾದವುಗಳಿಗೆ ಕಲಾವಿದೆಯರು ನೃತ್ಯ ಪ್ರದರ್ಶಿಸಿ ಪ್ರೇಕ್ಷಕರ ಕರತಾಡನದೊಂದಿಗೆ ಮೆಚ್ಚುಗೆ ಪಡೆದರು. ಇವರನ್ನು ಸಂಘಟಕರು ಸನ್ಮಾನಿಸಿ, ಗೌರವಿಸಿದರು.

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸದ್ಯದಲ್ಲಿಯೇ ನಡೆಯಲಿರುವ ಲಕ್ಷ ದೀಪೋತ್ಸವ ಸಮಾರಂಭದ ಸಂದರ್ಭದಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಭರತ ನಾಟ್ಯ ಪ್ರದರ್ಶಿಸಲು ಭಾರತೀ ನೃತ್ಯ ಕಲಾಕೇಂದ್ರದ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಈಗಾಗಲೇ ಕರಾವಳಿ ಉತ್ಸವ, ಕದಂಬ ಉತ್ಸವ, ಹಂಪಿ ಉತ್ಸವ ಸೇರಿದಂತೆ ವಿವಿಧ ರಾಜ್ಯ ಮಟ್ಟದ ಉತ್ಸವಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತೀ ನೃತ್ಯ ಕಲಾಕೇಂದ್ರದ ವಿದ್ಯಾರ್ಥಿಗಳು ಮುಂಬರುವ ಧರ್ಮಸ್ಥಳದ ಲಕ್ಷದೀಪೋತ್ಸವ ಸಂದರ್ಭದಲ್ಲಿ ಭರತ ನೃತ್ಯ ಪ್ರದರ್ಶಿಸಲು ಆಹ್ವಾನಿತರಾಗಿದ್ದಾರೆ

=================

Leave a Reply

You cannot copy content of this page