






ಜೀವನದಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು: ಡಾ. ಆರ್.ಡಿ.ಜನಾರ್ಧನ್

ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಅಭಿಮಾನದೊಂದಿಗೆ ಮಾನವೀಯ ಸೇವೆಯ ಸಂದೇಶ ಸಾರುವ ಉದ್ದೇಶದಿಂದ 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಯಲ್ಲಾಪುರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಬೃಹತ್ ರಕ್ತದಾನ ಶಿಬಿರ ನಡೆಯಿತು.

ಕಾಲೇಜಿನ ವತಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆಸ್ಪತ್ರೆ ಯಲ್ಲಾಪುರ, ಗ್ರೀನ್ ಕೇರ್ ಶಿರಸಿ, ಕ್ರಿಯೇಟಿವ್ ಕಂಪ್ಯೂಟರ್ ಇನ್‍ಸ್ಟಿಟ್ಯೂಟ್ ಕೆ.ಎಂ.ಎಫ್. ಲೈಫ್ ಲೈನ್ ರಕ್ತ ಕೇಂದ್ರ ಹಾಗೂ ರೋಟರಿ ಕ್ಲಬ್ ನ್ಯೂ ಜನರೇಷನ್ ಇವರ ಸಹಯೋಗದಲ್ಲಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾಲೇಜಿನ ಪ್ರಾಂಶುಪಾಲ ಡಾ. ಆರ್.ಡಿ. ಜನಾರ್ಧನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ರಾಜ್ಯೋತ್ಸವವೆಂದರೆ ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಸಂಭ್ರಮಕ್ಕೆ ಸೀಮಿತವಾಗಬಾರದು. ಸಮಾಜಕ್ಕೆ ನಮ್ಮಿಂದಾದ ಕೊಡುಗೆಯನ್ನು ನೀಡುವ ಮೂಲಕ ನಾಡಿನ ಹಬ್ಬವನ್ನು ಅರ್ಥಪೂರ್ಣಗೊಳಿಸಬೇಕು. ರಕ್ತದಾನವು ಜಾತಿ, ಧರ್ಮ, ಭಾಷೆ ಮತ್ತು ವರ್ಗಗಳ ಎಲ್ಲೆಗಳನ್ನು ಮೀರಿ ಮನುಷ್ಯರನ್ನು ಬೆಸೆಯುವ ಶ್ರೇಷ್ಠ ಮಾನವೀಯ ಕಾರ್ಯವಾಗಿದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಒಬ್ಬರ ರಕ್ತದಾನ ಮತ್ತೊಬ್ಬರ ಬದುಕಿಗೆ ಬೆಳಕಾಗಬಲ್ಲದು. ಯುವಜನತೆ ಇಂತಹ ಜೀವಪರ ಕಾರ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ತಾಲೂಕಾ ವೈದ್ಯಾಧಿಕಾರಿ ಡಾ. ನರೇಂದ್ರ ಪವಾರ ಹಾಗೂ ಶಿರಸಿಯ ಡಾ. ಸುಮನ್ ಹೆಗಡೆ, ಶ್ರೀನಿವಾಸ ಮುರುಡೇಶ್ವರ, ಜಿತೇಂದ್ರಕುಮಾರ್ ಮತ್ತು ರೋಟರಿ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ರಕ್ತದಾನವು ಅತ್ಯಂತ ಶ್ರೇಷ್ಠವಾದ ಮಾನವೀಯ ಸೇವೆಯಾಗಿದ್ದು, ಒಬ್ಬ ವ್ಯಕ್ತಿಯ ರಕ್ತದಾನ ಮತ್ತೊಬ್ಬರ ಜೀವ ಉಳಿಸಲು ನೆರವಾಗುತ್ತದೆ. ಯುವಜನತೆ ರಕ್ತದಾನದ ಮಹತ್ವವನ್ನು ಅರಿತು ಸ್ವಯಂಪ್ರೇರಿತರಾಗಿ ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಿಬಿರದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡು ರಕ್ತದಾನ ಮಾಡಿದರು. ಶಿಬಿರದಲ್ಲಿ 50ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹಿಸಲಾಯಿತು. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸ್ವಯಂಪ್ರೇರಿತ ಪಾಲ್ಗೊಳ್ಳುವಿಕೆ ಶಿಬಿರಕ್ಕೆ ವಿಶೇಷ ಮೆರುಗು ನೀಡಿತು.
ಕಾಲೇಜಿನ ಯೂಥ್ ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಡಾ. ರವಿ ಶೇಷಗಿರಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ರವಿ ಭಟ್ ಅವರು ಶಿಬಿರದ ಸಂಘಟನೆಗೆ ಶ್ರಮಿಸಿದರು. ಕಾಲೇಜಿನ ವಿದ್ಯಾರ್ಥಿಗಳಲ್ಲಿ ರಕ್ತದಾನದ ಕುರಿತು ಜಾಗೃತಿ ಮೂಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಳ್ಳುವಂತೆ ಪ್ರೇರೇಪಿಸಿದರು.
ಕನ್ನಡ ರಾಜ್ಯೋತ್ಸವವನ್ನು ಕೇವಲ ಸಾಂಸ್ಕೃತಿಕ ಸಂಭ್ರಮಕ್ಕೆ ಸೀಮಿತಗೊಳಿಸದೆ, ರಕ್ತದಾನದಂತಹ ಜೀವಪರ ಕಾರ್ಯದ ಮೂಲಕ ಆಚರಿಸಿರುವುದು ಕಾರ್ಯಕ್ರಮದ ವಿಶೇಷತೆಯಾಗಿತ್ತು. ಕನ್ನಡದ ಭಾಷಾಭಿಮಾನವನ್ನು ಮಾನವೀಯತೆ, ಸಹಕಾರ ಮತ್ತು ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಬೆಸೆಯುವಲ್ಲಿ ಈ ಶಿಬಿರ ಯಶಸ್ವಿಯಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲ ಗಣ್ಯರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ರಕ್ತದಾನಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಕಾಲೇಜಿನ ಸಿಬ್ಬಂದಿಗೆ ಆಯೋಜಕರು ಕೃತಜ್ಞತೆ ಸಲ್ಲಿಸಿದರು.

=================















