ಭಟ್ರಕೇರಿಯ ಭಾರದ್ವಾಜಾಶ್ರಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜನೆ
ಯಲ್ಲಾಪುರ ತಾಲೂಕಿನ ನಂದೊಳ್ಳಿ ಸಮಿಪದ ಭಟ್ರಕೇರಿಯ ಭಾರದ್ವಾಜಾಶ್ರಮದಲ್ಲಿ ರಾಷ್ಟ್ರಕ್ಷೇಮವನ್ನು ಸಂಕಲ್ಪಿಸಿ, ಧನ್ವಂತರಿ ಜಯಂತಿಯ ಪ್ರಯುಕ್ತವಾಗಿ ನ.5 ಗುರುವಾರ ಹಾಗೂ ನ.6 ಶುಕ್ರವಾರದಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಐವತ್ತಕ್ಕೂ ಹೆಚ್ಚು ಋತ್ವಿಜರಿಂದ ನಡೆಯುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ, ವೇದ ಪಾರಾಯಣ, ಮಹಾರುದ್ರಾನುಷ್ಠಾನ, ಧನ್ವಂತರಿ ಹವನ, ಅಖಂಡ ಗೀತಾ ಪಾರಾಯಣ ಮುಂತಾದವು ನಡೆಯಲಿವೆ. ಗುರುವಾರ ಬೆಳಿಗ್ಗೆ ಗಂಗಾಪೂಜೆ, ಪೂರ್ವಾಂಗ ಕಾರ್ಯಕ್ರಮಗಳು, ಮಹಾಸಂಕಲ್ಪ, ನಂತರ ವೇದಪಾರಾಯಣ ಆರಂಭ, ಮಹಾನ್ಯಾಸಪೂರ್ವಕ ರುದ್ರ ಪಾರಾಯಣ ಆರಂಭವಾಗಲಿದೆ.
ಮಧ್ಯಾಹ್ನ ಭಾರದ್ವಾಜೇಶ್ವರನಿಗೆ ಮಹಾ ಮಂಗಳಾರತಿ, ಪ್ರಸಾದ ಗ್ರಹಣ, ಸಂತರ್ಪಣೆ ನಡೆಯಲಿದೆ. ಸಂಜೆ ಗೋಪೂಜೆ, ಯಾಗಶಾಲಾ ಪ್ರವೇಶ, ಮಂಟಪ ಪೂಜೆ, ಅಗ್ನಿ ಜನನ, ಕಲಶ ಪೂಜೆ, ರಾಜೋಪಚಾರ ಪೂಜೆ ನಡೆಯಲಿದೆ.
ಶುಕ್ರವಾರ ಬೆಳಿಗ್ಗೆ ಮಹಾರುದ್ರ ಹವನ, ಧನ್ವಂತರಿ ಹವನ, ಗೀತಾ ಪಾರಾಯಣ ಆರಂಭವಾಗಲಿದೆ, ನಂತರ ಮಹಾರುದ್ರ ಹವನ ಪೂರ್ಣಾಹುತಿ, ಮಧ್ಯಾಹ್ನ ಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿಯವರು ಧರ್ಮ ಸಂದೇಶ ನೀಡಲಿದ್ದಾರೆ.
ನಂತರ ತೀರ್ಥಪ್ರಸಾದ ವಿತರಣೆ, ಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 4 ಗಂಟೆಗೆ ಹೀಪನಳ್ಳಿ ನಾರಾಯಣ ದಾಸರಿಂದ ಕೀರ್ತನೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಆರ್ಷವಿದ್ಯಾ ಟ್ರಸ್ಟ್ ಮತ್ತು ಭಾರದ್ವಾಜಾಶ್ರಮದ ಮುಖ್ಯಸ್ಥ ಮಂಜುನಾಥ ಭಟ್ಟ ಭಟ್ರಕೇರಿ ವಿನಂತಿಸಿದ್ದಾರೆ.