




ನ.13ರಿಂದ ಶಕ್ತಿ ಗಣಪತಿ ದೇವಾಲಯದಲ್ಲಿ ಕಾರ್ತಿಕೋತ್ಸವ, ವೈವಿಧ್ಯಮಯ ಕಾರ್ಯಕ್ರಮ

ಯಲ್ಲಾಪುರ ಪಟ್ಟಣದ ರವೀಂದ್ರನಗರ ಶಕ್ತಿಗಣಪತಿ ದೇವಾಲಯದಲ್ಲಿ 13 ನೇ ವರ್ಷದ ಕಾರ್ತಿಕೋತ್ಸವ ಕಾರ್ಯಕ್ರಮವು ನ.13 ರಿಂದ ನ.27 ರ ವರೆಗೆ ಪ್ರತಿದಿನ ಸಂಜೆ ಆರು ಗಂಟೆಯಿಂದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಅನಂತ ಗಾಂವ್ಕರ್ ಕಂಚೀಪಾಲ ತಿಳಿಸಿದ್ದಾರೆ.
ಈ ಕುರಿತು ಬುಧವಾರ ಮಾಹಿತಿ ನೀಡಿದ ಅವರು, 15 ದಿನ ದೀಪೋತ್ಸವ, ಭಗವದ್ಗೀತಾ ಅಭಿಯಾನ, ಭಜನೆ, ತಾಳಮದ್ದಳೆ, ಸಂಗೀತ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ನ.13 ಶುಕ್ರವಾರ ಸಂಜೆ 6 ಗಂಟೆಗೆ ಕಾರ್ತಿಕೋತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದೆ. ಖ್ಯಾತ ವಾಗ್ಮಿ ಬೆಂಗಳೂರಿನ ಹಾರಿಕಾ ಮಂಜುನಾಥ ಮುಖ್ಯ ವಕ್ತಾರರಾಗಿ ಭಾಗವಹಿಸಲಿದ್ದಾರೆ. ಹರಿಪ್ರಕಾಶ ಕೋಣೆಮನೆ, ಶಿವಲಿಂಗಯ್ಯ ಅಲ್ಲನವರಮಟ, ಮಹೇಶ ಭಟ್ಟ ಇಡಗುಂದಿ, ಎಸ್.ಎಂ.ಭಟ್ಟ, ಅನಂತ ಗಾಂವ್ಕರ್ ಮುಂತಾದವರು ಭಾಗವಹಿಸಲಿದ್ದಾರೆ. ನ.14ರಂದು ಮಕ್ಕಳಿಂದ ಮನರಂಜನಾ ಕಾರ್ಯಕ್ರಮ, ನ.15ರಂದು ಕುಮಟಾದ ಮಹಾಗಣಪತಿ ವಾದ್ಯ ವೃಂದದವರಿಂದ ಪಂಚವಾದ್ಯ,

ನ.16ರಂದು ಸಂಗೀತ ಕಾರ್ಯಕ್ರಮ, ನ.17ರಂದು ಚಿಂತನಾ ಹೆಗಡೆ ಮಾಳ್ಕೋಡ ಇವರಿಂದ ಗಾನ ವೈಭವ, ನ.18ರಂದು ಮಾತೆಯರಿಂದ ಭಜನೆ, ನ.19ರಂದು ಆದರ್ಶ ಮಹಿಳಾ ಮಂಡಳದವರಿಂದ ಭಜನೆ, ನ.20ರಂದು ಮಕ್ಕಳಿಂದ ಭೌಮಾಸುರ ಕಾಳಗ ತಾಳಮದ್ದಳೆ, ನ.21ರಂದು ವೆಂಕಟ್ರಮಣ ಭಟ್ಟ ತಂಡದವರಿಂದ ಗಾನ ವೈಭವ, ನ.22ರಂದು ಚೌಡೇಶ್ವರಿ ಬಳಗದವರಿಂದ ಭಜನೆ, ನ.23ರಂದು ಕಾಲಭೈರವೇಶ್ವರ ಭಜನಾ ಮಂಡಳಿಯವರಿಂದ ಭಜನೆ ಹಾಗೂ ವಿಶೇಷ ದೀಪ ನಮಸ್ಕಾರ ಕಾರ್ಯಕ್ರಮ ನಡೆಯಲಿದೆ. ನ.24ರಿಂದ ನ.28ರ ವರೆಗೆ ವೇ.ಹಿರಣ್ಯ ವೆಂಕಟೇಶ ಭಟ್ಟ ಅವರಿಂದ ಪ್ರವಚನ ನಡೆಯಲಿದೆ.
ನ.27ರಂದು ಸಮಾರೋಪ ಸಮಾರಂಭ ನಡೆಯಲಿದೆ. ಧಾರವಾಡದ ದ್ವಾರಕಾಪುರ ಸಂಸ್ಥಾನದ ಶ್ರೀ ಪರಮಾತ್ಮಾಜೀ ಮಹಾರಾಜ್ ಸಾನ್ನಿಧ್ಯ ವಹಿಸುವರು, ಶಾಸಕ ಶಿವರಾಮ ಹೆಬ್ಬಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜ್ಯೋತಿಷಿ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ಉದ್ಯಮಿ ಎಂ.ಎಲ್.ಹೆಗಡೆ ಯಲ್ಲಾರಗದ್ದೆ, ವಿಕಾಸ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ, ವಕೀಲ ಜಿ.ಎಸ್.ಭಟ್ಟ ಹಳವಳ್ಳಿ,
ತಾಲೂಕಾ ಭಗವದ್ಗೀತಾ ಅಭಿಯಾನ ಸಮೀತಿಯ ಅಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ ಭಾಗವಹಿಸಲಿದ್ದಾರೆ.
ಈ ಎಲ್ಲ ಕಾರ್ಯಕ್ರಮಗಳಿಗೆ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕೋರಲಾಗಿದೆ.
ಪ್ರತೀ ದಿನ ದೇವಾಲಯದಲ್ಲಿ ದೀಪೋತ್ಸವ, ಭಗವದ್ಗೀತಾ ಪಠಣ, ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.

=================















