







ಕಿರವತ್ತಿಯಲ್ಲಿ ಜಯಕರ್ನಾಟಕ ಸಂಘಟನೆಯಿಂದ ಅದ್ದೂರಿಯಾಗಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭ

ಯಲ್ಲಾಪುರ ತಾಲೂಕಿನ ಕಿರವತ್ತಿಯಲ್ಲಿ ತಾಲೂಕಾ ಜಯ ಕರ್ನಾಟಕ ಸಂಘಟನೆ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಈ ಸಮಾರಂಭವನ್ನು ಉದ್ಘಾಟಿಸಿದ ಜಯಕರ್ನಾಟಕ ಸಂಘಟನೆಯ ಹುಬ್ಬಳ್ಳಿ ತಾಲೂಕಾ ಅಧ್ಯಕ್ಷ ಸದ್ದಾಂ ನಧಾಪ್ ಮಾತನಾಡಿ, ನಾಡು ನುಡಿ ರಕ್ಷಣೆಗೆ ನಾವೆಲ್ಲರೂ ಒಂದಾಗಬೇಕು, ನಮ್ಮೊಳಗಿನ ಭಿನ್ನಾಭಿಪ್ರಾಯ, ಜಾತಿ, ಧರ್ಮ, ಮತ ಎಲ್ಲವನ್ನೂ ಬಿಟ್ಟು ಕನ್ನಡದ ಉಳಿವು ಹಾಗೂ ಬೆಳವಣಿಗೆಗೆ ನಾವೆಲ್ಲರೂ ಶ್ರಮಿಸಬೇಕು ಎಂದು ಹೇಳಿದರು. ನಮ್ಮ ನೆಲ, ನಮ್ಮ ಜಲ, ನಮ್ಮ ಭಾಷೆಯ ವಿಷಯದಲ್ಲಿ ಧರ್ಮ, ಜಾತಿಗಳನ್ನು ದೂರವಿಟ್ಟು ನಾವೆಲ್ಲರೂ ಒಂದಾಗಬೇಕು, ರಾಜಕಾರಣ ಬಿಟ್ಟು ಕನ್ನಡ ನಾಡಿನ ಮತ್ತು ಕನ್ನಡಿಗರ ಸ್ವಾಭಿಮಾನ ಉಳಿಸಲು ಫಣ ತೋಡಬೇಕು ಎಂದರು.

ಮನುಷ್ಯತ್ವದ ಜಾತಿ ಮಾನವ ಧರ್ಮ ನಮ್ಮಲ್ಲಿರಬೇಕು. ಮನುಷ್ಯತ್ವ ಇದ್ದವರು ಮಾತ್ರ ಒಟ್ಟಾಗಿ ಕೆಲಸ ಮಾಡುತ್ತಾರೆ. ಅಂತಹ ಮನಸ್ಥಿತಿ ನಮ್ಮೊಳಗೆ ಬರಬೇಕು. ನಾಡು ನುಡಿ ರಕ್ಷಣೆಗೆ ಎಲ್ಲರೂ ಕೈಜೋಡಿಸೋಣ ಎಂದರು.ಫಾದರ್ ಮೈಕಲ್ ಮಾತನಾಡಿ, ನಾವು ಉಸಿರಾಡುವ ಗಾಳಿ, ನಮ್ಮೊಳಗೆ ಹರಿಯುವ ರಕ್ತ ಒಂದೇ. ಹೀಗಾಗಿ ಜಾತಿ ಬೇಧ ಸಲ್ಲ ಎಂದರು.

ವಿ.ಕೆ.ಎಕ್ಸಲೆನ್ಸ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾದ ಹೆಮ್ಮೆಯ ಸಾಧಕಿ ಸೀಮಾ ಫರ್ನಾಂಡೀಸ್ ಮಾತನಾಡಿ, ಹೆಣ್ಣಿಗೆ ಗೌರವ ನೀಡುವ ನೆಲ ಅಭಿವೃದ್ಧಿ ಹೊಂದುತ್ತದೆ. ಹೆಣ್ಣು ಸಬಲಳಾದರೆ ಇಡೀ ಕುಟುಂಬ ಸಬಲವಾಗುತ್ತದೆ. ಹೀಗಾಗಿ ಹೆಣ್ಣು ಮಕ್ಕಳ ಸಬಲೀಕರಣಕ್ಕಾಗೆ ನಾವೆಲ್ಲರೂ ಶ್ರಮಿಸಬೇಕು ಎಂದರು. ಜಯಕರ್ನಾಟಕ ಸಂಘಟನೆಯು ಜನಸಾಮಾನ್ಯರ ಸಂಘಟನೆಯಾಗಿದೆ. ಕಳೆದ 15 ವರ್ಷಗಳಿಂದ ಕನ್ನಡ ನೆಲ, ಜಲ, ನಾಡುನುಡಿಯ ರಕ್ಷಣೆಗೆ ಮಾದರಿಯಾಗಿ ಶ್ರಮಿಸುತ್ತಿದೆ. ಅಶಕ್ತರ ನೆರವಿಗೆ ಸಹಕಾರ ನೀಡುತ್ತಾ, ಎಲ್ಲರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.
ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅರ್ಜುನ ಬೆಂಗೇರಿ, ನಿವೃತ್ತ ಶಿಕ್ಷಕ ಮಂಜುನಾಥ ಮಲ್ಯ ಮಾತನಾಡಿದರು. ವಿವಿಧ ಕ್ಷೇತ್ರದ ಸಾಧಕರಾದ ಸೀಮಾ ಫನಾರ್ಂಡೀಸ್, ಶಿಕ್ಷಕ ನಾಗರಾಜ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಕಿರವತ್ತಿ ಪ್ರೌಢಶಾಲಾ ಹೆಣ್ಣು ಮಕ್ಕಳ ಕಬಡ್ಡಿ ತಂಡ ಹಾಗೂ ಉರ್ದು ಶಾಲೆಯ ಪ್ರತಿಭಾವಂತ ಪುರಸ್ಕರಿಸಲಾಯಿತು.
ಜಯ ಕರ್ನಾಟಕ ತಾಲೂಕು ಅಧ್ಯಕ್ಷ ವಿಲ್ಸನ್ ಫರ್ನಾಂಡೀಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಸಂಘಟನೆಯ ಕುರಿತು ಮಾತನಾಡಿದರು.
ಭವ್ಯ ಮೆರವಣಿಗೆ

ಸಭಾ ಕಾರ್ಯಕ್ರಮಕ್ಕೂ ಮೊದಲು ಕಿರವತ್ತಿಯಲ್ಲಿ ತಾಯಿ ಭುವನೇಶ್ವರಿ ದೇವಿಯ ಭಾವ ಚಿತ್ರದ ಭವ್ಯ ಮೆರವಣಿಗೆ ನಡೆಯಿತು. ನೂರಾರು ಜನರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಪ್ರಮುಖರಾದ ಉದಯ, ಶಹನಾಜ ಅಕ್ತರ್, ಮಹೇಶ ನಾಯ್ಕ, ಜೀವಾ ಕೈಟ್ಕರ್, ಜಾವು ಪಟಕಾರೆ, ಮುನಾಪ್ ಪಟೇಲ್, ಚನ್ನಪ್ಪ ಹರಿಜನ, ಸುಭಾಷ ಶೇಷಗಿರಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು, ಸಾರ್ವಜನಿಕರು ಇದ್ದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಸಮಂಜರಿ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು.




=================















