








ಪ್ರಜಾಸೇವೆ ಆಂದೋಲನ ಸಭೆ ಕಾಟಾಚಾರದ ಕಾರ್ಯಕ್ರಮ ಆಗಬಾರದು: ಸಚಿವ ಲಕ್ಷ್ಮಣ ಸವದಿ

ಪ್ರಜಾಸೇವಾ ಆಂದೋಲನವು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಅನುಷ್ಠಾನಗೊಳಿಸಿದ ಮಹತ್ವದ ಕಾರ್ಯಕ್ರಮವಾಗಿದೆ, ರಾಜ್ಯದಲ್ಲಿ ಜನಪ್ರೀಯತೆ ಪಡೆದ ಕಾರ್ಯಕ್ರಮವೂ ಇದಾಗಿದೆ. ಪ್ರಜಾಸೇವೆ ಆಂದೋಲನ ಸಭೆ ಕಾಟಾಚಾರದ ಕಾರ್ಯಕ್ರಮ ಆಗಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಅವರು ಶನಿವಾರ ಯಲ್ಲಾಪುರ ಪಟ್ಟಣದ ಅಡಿಕೆ ಭವನದಲ್ಲಿ ನಡೆದ ತಾಲೂಕಾ ಮಟ್ಟದ ಪ್ರಜಾಸೇವೆ ಆಂದೋಲನ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಪ್ರಜೆಗಳು ನಮ್ಮ ಮಾಲೀಕರು, ಅಧಿಕಾರಿಗಳು, ಶಾಸಕರು, ಸಚಿವರು ಖುದ್ದಾಗಿ ಜನರ ಬಳಿ ತೆರಳಿ ಜನರ ಅಹವಾಲುಗಳನ್ನು ಸ್ವೀಕರಿಸಿ, ಸಮಸ್ಯೆಗಳನ್ನು ಪರಿಹರಿಸಿದರೆ ಪ್ರಜಾಪ್ರಭುತ್ವದ ನಿಜವಾದ ಆಶಯ ಸಾರ್ಥಕವಾಗುತ್ತದೆ, ಇದು ಸರ್ಕಾರಕ್ಕೆ ಗೌರವ ತರುವ ಕಾರ್ಯಕ್ರಮವೂ ಆಗಿದೆ.

ಮಾತನಾಡುವದೇ ಸಾಧನೆ ಆಗಬಾರದು, ಸಾಧನೆಯೇ ನಮ್ಮ ಮಾತಾಗಬೇಕು, ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಸ್ವೀಕರಿಸಿದ ಅಹವಾಲುಗಳಿಗೆ ಕನಿಷ್ಠ ಹದಿನೈದು ದಿನದೊಳಗೆ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು, ಪರಿಹಾರ ಸಾಧ್ಯವಾಗದಿದ್ದರೆ ನಿರ್ದಿಷ್ಟವಾದ ಕಾರಣವನ್ನು ಕೊಡಬೇಕು, ಇಲ್ಲವಾದರೆ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ಅವಕಾಶವಿದೆ ಎಂದರು.
ಪ್ರಜಾಸೇವೆ ಆಂದೋಲನದಲ್ಲಿ ಈವರೆಗೆ ಜಿಲ್ಲೆಯಲ್ಲಿ 6114 ಅರ್ಜಿಗಳು ಸಲ್ಲಿಕೆಯಾಗಿದ್ದು, ಇವುಗಳಲ್ಲಿ 5421 ವಿಲೇವಾರಿ ಮಾಡಲಾಗಿದೆ. ಶೇ.90 ಪ್ರಗತಿ ಆಗಿದೆ, ಯಲ್ಲಾಪುರ ತಾಲೂಕಿನಲ್ಲಿ 1415 ಅರ್ಜಿಗಳು ಸಲ್ಲಿಕೆಯಾಗಿದ್ದು, 995 ಅರ್ಜಿಗಳು ವಿಲೇವಾರಿಯಾಗಿವೆ. ಅಧಿಕಾರಿಗಳು ಬದ್ಧತೆ ಹಾಗೂ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿ, ಈಗಾಗಲೇ ಯಲ್ಲಾಪುರ ಕ್ಷೇತ್ರದಲ್ಲಿ ಆರು ಪ್ರಜಾಸೇವೆ ಸಭೆಗಳು ನಡೆದಿವೆ. ಕಾಲಮಿತಿಯಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಈ ಸಭೆಗಳು ಸಹಕಾರಿಯಾಗಿವೆ ಎಂದರು.
ಜಿಲ್ಲಾಧಿಕಾರಿ ಬೋಯರ್ ಹರ್ಷಲ್, ಎಸ್ಪಿ ದೀಪನ್ ಎಂ.ಎನ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಡಿಸಿಎಫ್ ಅಬ್ದುಲ್ ಅಜೀಜ್ ಶೇಖ್, ಸಹಾಯಕ ಆಯುಕ್ತ ಚಂದ್ರಶೇಖರ್, ಜಿ.ಪಂ. ಉಪಕಾರ್ಯದರ್ಶಿ ಅಲ್ಲಾಭಕ್ಷ, ತಹಶೀಲ್ದಾರ ಎಂ.ಆರ್.ಕುಲಕರ್ಣಿ, ಗ್ಯಾರಂಟಿ ಯೋಜನಾ ಸಮಿತಿಯ ಜಿಲ್ಲಾ ಅಧ್ಯಕ್ಷ ಸತೀಶ ನಾಯ್ಕ, ತಾಲೂಕಾ ಅಧ್ಯಕ್ಷ ಉಲ್ಲಾಸ ಶಾನಭಾಗ, ಬ್ರಾಹ್ಮಣ ಅಭಿವೃದ್ಧಿ ನಿಗಮದ ನಿರ್ದೇಶಕ ಎನ್.ಕೆ.ಭಟ್ಟ ಮುಂತಾದವರು ವೇದಿಕೆಯಲ್ಲಿ ಇದ್ದರು.ವಿವಿಧ ಯೋಜನೆಗಳ ಫಲಾನುಭವಿಗಲಿಗೆ ಸರ್ಕಾರದ ಸೌಲಭ್ಯಗಳನ್ನು ವಿತರಿಸಲಾಯಿತು. ಡಿಡಿಪಿಐ ನಾಗರಾಜ ನಾಯ್ಕ ಸ್ವಾಗತಿಸಿದರು, ಬಿಇಒ ರೇಖಾ ನಾಯ್ಕ ವಂದಿಸಿದರು. ಸೌಮ್ಯಶ್ರೀ ನಿರ್ವಹಿಸಿದರು.
ಪಕ್ಕದ ಮನೆ ತೆಂಗಿನ ಮರದ ಸಮಸ್ಯೆ ನಿವಾರಿಸಲು ಸಚಿವರಿಗೆ ಮೊರೆ !!
ತಾಲೂಕಿನ ಇಡಗುಂದಿಯಲ್ಲಿ ವ್ಯಕ್ತಿಯೊಬ್ಬರ ಮನೆಗೆ ಅವರ ಪಕ್ಕದ ಮನೆಯವರ ತೆಂಗಿನ ಮರದಿಂದ ಸಮಸ್ಯೆಯಾಗುತ್ತಿದ್ದು, ತೆಂಗಿನ ಮರವನ್ನು ತೆರವುಗೊಳಿಸಿಕೊಡಬೇಕು ಎಂದು ಮನವಿ ಸಲ್ಲಿಕೆಯಾಗಿದೆ. ಇಡಗುಂದಿಯ ಜನತಾ ಕಾಲೋನಿಯ ನಿವಾಸಿಯೊಬ್ಬರು ಸಚಿವರಿಗೆ ಮನವಿ ಸಲ್ಲಿಸಿ, ಪಕ್ಕದ ಮನೆಯ ತೆಂಗಿನ ಮರದಿಂದ ಕಾಯಿಗಳು ಬಿದ್ದು ನಮ್ಮ ಮನೆಯ ಮೇಲ್ಛಾವಣಿಗೆ ಹಾನಿಯಾಗುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ವಿನಂತಿಸಿದರು. ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಸವದಿ ಅಧಿಕಾರಿಗಳಿಗೆ ಸೂಚಿಸಿದರು.
ಸಚಿವರಿಗೆ ಮನವಿ ಸಲ್ಲಿಕೆ
ಸಭೆಯಲ್ಲಿ ಉಪಸ್ಥಿತರಿದ್ದ ಸಾರ್ವಜನಿಕರು ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಸಚಿವರಿಗೆ ಮನವಿ ಸಲ್ಲಿಸಿದರು.
ಪಟ್ಟಣದಲ್ಲಿ ಹಂದಿ, ನಾಯಿ, ಹುಚ್ಚು ನಾಯಿ ಹಾವಳಿ ನಿಯಂತ್ರಿಸಬೇಕು, ಬೀದಿ ಬದಿಯಲ್ಲಿ ಮೀನು ಮಾರಾಟ ನಿರ್ಬಂಧಿಸಬೇಕು, ಗ್ರಾಮೀಣ ಬಾಗಗಳಲ್ಲಿ ರಸ್ತೆ ದುರಸ್ತಿಗೊಳಿಸಬೇಕು, ರೈತರ ಜಮೀನಿನಲ್ಲಿ ಆನೆ ಮುಂತಾದ ಕಾಡು ಪ್ರಾಣಿಗಳ ಹಾವಳಿ ನಿಯಂತ್ರಿಸಬೇಕು, ಪ್ರತಿನಿತ್ಯ ಯಲ್ಲಾಪುರದಿಂದ ಕಮ್ಮಾಣಿಗೆ ಬಸ್ ಸೌಲಭ್ಯ ಕಲ್ಪಿಸಬೇಕು, ಕೆರೆಗಳ ಒತ್ತುವರಿ ತೆರವುಗೊಳಿಸಬೇಕು, ಯಲ್ಲಾಪುರದಲ್ಲಿ ಶವ ಸಂಸ್ಕಾರಕ್ಕೆ ಕಟ್ಟಿಗೆ ಕೊರತೆಯಾಗಿದ್ದು ಅಗತ್ಯವಿರುವಷ್ಟು ಕಟ್ಟಿಗೆ ಒದಗಿಸಬೇಕು, ಬೇಡ್ತಿ ನದಿ ತಿರುವು ಯೋಜನೆಯನ್ನು ಜಾರಿಗೊಳಿಸಬಾರದು, ರೈತರ ಆಸಾಮಿ ಖಾತೆಯ ಸಾಲ ಮನ್ನಾ ಮಾಡಬೇಕು ಮುಂತಾದವುಗಳ ಬಗ್ಗೆ ಮನವಿ ಸಲ್ಲಿಕೆಯಾದವು.

=================















