ಸಾಂಬಾರು ಪದಾರ್ಥಗಳನ್ನು ವಿದೇಶಕ್ಕೆ ರಪ್ತು ಮಾಡಲು ಮುಂದಾದ ಉದ್ಯಮಿಯೊಬ್ಬರಿಗೆ ಅಪರಿಚಿತ ವ್ಯಕ್ತಿಗಳು 4.29 ಲಕ್ಷ ರೂ ವಂಚಿಸಿದ ಘಟನೆ ನಡೆದಿದೆ.
ವನ್ನಳ್ಳಿಯ ನಿತ್ಯಾನಂದ ನಾಯ್ಕ ಅವರು, ಸಾಂಬಾರು ಪದಾರ್ಥಗಳನ್ನು ವಿದೇಶಕ್ಕೆ ರಪ್ತು ಮಾಡುವ ಕುರಿತು ಖರೀದಿದಾರರಿಗಾಗಿ 28-9-2026 ರಂದು ಗೂಗಲ್ ನಲ್ಲಿ ಹುಡುಕುತ್ತಿದ್ದಾಗ, Web Solution Export ಎಂಬ ಕಂಪನಿಯ ವೆಬ್ ಸೈಟ್ ನೋಡಿ, ಅಲ್ಲಿದ್ದ ಮೊಬೈಲ್ ನಂಬರ್ ಗೆ ಸಂಪರ್ಕಿಸಿದ್ದರು.
ತಾನು Web Solution Export ಕಂಪನಿಯ ಮಾಲೀಕ ಎಂದು ತನ್ನನ್ನು ಪರಿಚಯಿಸಿಕೊಂಡ ಭುವನಚಂದ್ರ ಎಂಬ ಹೆಸರಿನ ವ್ಯಕ್ತಿಯು ವಿದೇಶದಲ್ಲಿರುವ ಸಾಂಬಾರು ಪದಾರ್ಥಗಳ ಖರೀದಿದಾರರನ್ನು ಹುಡುಕಿಕೊಡುವ ಕೆಲಸವನ್ನು ತಮ್ಮ ಕಂಪನಿಯು ಮಾಡುತ್ತಿರುವುದಾಗಿ ನಿತ್ಯಾನಂದ ನಾಯ್ಕ ಅವರಿಗೆ ತಿಳಿಸಿದ್ದನು.
ಗ್ರೀಸ್ ದೇಶದ ಕಂಪನಿಯ ಮಾಲೀಕ ಎಂದು ವ್ಯಕ್ತಿಯೊಬ್ಬರನ್ನು ವಾಟ್ಸಪ್ ಮೂಲಕ ಪರಿಚಯಿಸಿದ್ದನು. ಆ ವ್ಯಕ್ತಿಯು ತಾನು 98 ಲಕ್ಷ ರೂ ಮೌಲ್ಯದ 25 ಮೆಟ್ರಿಕ್ ಟನ್ ಅರಿಶಿನ ಕೊಂಬನ್ನು ಖರೀದಿಸುವುದಾಗಿ ನಿತ್ಯಾನಂದ ನಾಯ್ಕ ಅವರಿಗೆ ತಿಳಿಸಿದ್ದನು, ಈ ರಪ್ತಿಗೆ ಸಂಬಂಧಿಸಿದಂತೆ ವಿವಿಧ ಕಾಗದ ಪತ್ರಗಳು ಅವಶ್ಯವಿದ್ದು, ಈ ಕಾಗದ ಪತ್ರಗಳನ್ನು ಪಡೆಯಲು ಮುಂಗಡವಾಗಿ 4.29 ಲಕ್ಷ ರೂ ಹಣ ಬೇಕೆಂದು ತಿಳಿಸಿ, ಅ.6ರಿಂದ ಅ.21 ರ ವರೆಗೆ ಅಪರಿಚಿತರು ಹಣವನ್ನು ತಮ್ಮ ಖಾತೆಗೆ ಹಾಕಿಸಿಕೊಂಡು ಮೋಸ ಮಾಡಿದ್ದಾರೆ. ಈ ಕುರಿತು ನಿತ್ಯಾನಂದ ನಾಯ್ಕ ಅವರು ಕಾರವಾರದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.