ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸೇವನೆಯಿಂದ ಬಳಲುತ್ತಿರುವವರಿಗೆ ಈ ಪಿಡುಗಿನಿಂದ ಹೊರಬರಲು ಅನುಕೂಲವಾಗುವಂತೆ ವ್ಯಸನ ಮುಕ್ತ ಶಿಬಿರಗಳನ್ನು ಆಯೋಜಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ನಿರ್ದೇಶನ ನೀಡಿದರು.

ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎನ್‍ಕಾರ್ಡ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾದಕ ವಸ್ತುಗಳ ಸೇವನೆ ಪ್ರಕರಣಗಳಲ್ಲಿ ಈಗಾಗಲೇ ಬಂಧನಕ್ಕೆ ಒಳಗಾಗಿರುವವರು ಮತ್ತು ಬಿಡುಗಡೆಯಾಗಿರುವವರು ಪುನ: ಈ ವ್ಯಸನಕ್ಕೆ ಬಲಿಯಾಗದಂತೆ ಅವರಿಗೆ ಅರಿವು ಮೂಡಿಸುವ ಜೊತೆಗೆ ಈ ವ್ಯಸನದಿಂದ ಹೊರಬರುವ ಕುರಿತಂತೆ ಶಿಬಿರಗಳನ್ನು ಆಯೋಜಿಸಿ ಚಿಕಿತ್ಸೆ ನೀಡುವಂತೆ ತಿಳಿಸಿದ ಅವರು ವಿವಿಧ ಸಂಘ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯವನ್ನು ಕೈಗೊಳ್ಳುವಂತೆ ತಿಳಿಸಿದರು.

ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳನ್ನು ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಹೆಚ್ವಿನ ಸಂಖ್ಯೆಯ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಹಾಗೂ ಹೋಂ ಸ್ಟೇಗಳು ಮತ್ತು ರೆಸಾರ್ಟ್ ಗಳಲ್ಲಿ ನಿಯಮಿತವಾಗಿ ತಪಾಸಣೆಗಳನ್ನು ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪೊಲೀಸ್ ಇಲಾಖೆ ವತಿಯಿಂದ ಮಾದಕ ವಸ್ತುಗಳ ಸರಬರಾಜು, ಮಾರಾಟ ಮತ್ತು ಬಳಕೆ ಕುರಿತಂತೆ ಜಿಲ್ಲೆಯಾದ್ಯಂತ ವ್ಯಾಪಕ ತಪಾಸಣೆಗಳನ್ನು ಕೈಗೊಳ್ಳುತ್ತಿದ್ದು, ದೊಡ್ಡ ಪ್ರಮಾಣದ ಮಾದಕ ವಸ್ತುಗಳ ಬಳಕೆ ಜಿಲ್ಲೆಯಲ್ಲಿ ಕಂಡುಬಂದಿಲ್ಲವಾಗಿದ್ದು, ಜಿಲ್ಲೆಗೆ ಪ್ರವಾಸ ಮತ್ತಿತರ ಕಾರಣಗಳಿಂದ ಬರುತ್ತಿರುವವರಲ್ಲಿ ಮಾದಕ ವಸ್ತುಗಳು ಕಂಡುಬರುತ್ತಿದ್ದು ಈ ಬಗ್ಗೆ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಬೇಡ ಬ್ರೋ ಮತ್ತು ರೈಸ್ ಕಾರ್ಯಕ್ರಮದ ಮೂಲಕ ಜಿಲ್ಲೆಯಲ್ಲಿ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ, ಎಲ್ಲಾ ಕಾಲೇಜುಗಳಲ್ಲಿ ಆಂಟಿ ಡ್ರಗ್ ಕಮಿಟಿಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಹೇಳಿದರು.

ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ 5 ಮಾದಕ ವಸ್ತು ಸೀಜ್ ಪ್ರಕರಣಗಳಲ್ಲಿ 11 ಮಂದಿಯನ್ನು ಅರೆಸ್ಟ್ ಮಾಡಿ, ರೂ.1.77 ಲಕ್ಷ ಮೌಲ್ಯದ 5.555 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ಮಾದಕ ವಸ್ತು ಸೇವನೆಯ 65 ಪ್ರಕರಣಗಳಲ್ಲಿ 70 ಜನರನ್ನು ಬಂಧಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ತಡೆಗಟ್ಟುವ ಕುರಿತಂತೆ ಪೊಲೀಸ್, ಅಬಕಾರಿ, ಅರಣ್ಯ, ಮೀನುಗಾರಿಕೆ, ಬಂದರು, ಅಂಚೆ ಇಲಾಖೆÀ, ಕೋಸ್ಟ್ ಗಾರ್ಡ್, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಅಬಕಾರಿ ಇಲಾಖೆಯ ಡಿ.ಸಿ. ಅಮಾನುಲ್ಲಾಖಾನ್, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

=======================

Leave a Reply

You cannot copy content of this page