ಗ್ರಾಮೀಣ ಭಾಗದ ಕುಶಲ ಕೂಲಿಕಾರ್ಮಿಕರಿಗೆ ಈ ಹಿಂದೆ ಮನರೇಗಾ ಯೋಜನೆಯಡಿ ಇದ್ದ 100 ಮಾನವ ದಿನಗಳನ್ನು ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ 125 ದಿನಗಳಿಗೆ ವಿಸ್ತರಿಸಲಾಗಿದ್ದು, ಇದರಿಂದ ದುಡಿಯುವ ಕೈಗಳಿಗೆ ನಿರಂತರ ಕೆಲಸ ಖಾತ್ರಿಯಾಗಿದೆ ಎಂದು ಯಲ್ಲಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ದನವಾಡಕರ ಅವರು ಹೇಳಿದರು.

ಅವರು ಶುಕ್ರವಾರದಂದು ಕಿರವತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಳ್ಳಿ ಅರಣ್ಯ ಪ್ರದೇಶದಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ಕಾಂಟೂರ್ ಟ್ರೆಂಚ್ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಆಯೋಜಿಸಿದ್ದ ಜಾಬ್ ಕಾರ್ಡ್ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿಬಿ-ಜಿ ರಾಮ್ ಜಿ ಯೋಜನೆಯು ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸುವ ಜೊತೆಗೆ ಜಲ ಸಂರಕ್ಷಣೆ, ಮಣ್ಣಿನ ಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣೆಗೆ ಪೂರಕವಾಗುವ ಶಾಶ್ವತ ಆಸ್ತಿಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಯೋಜನೆಯಡಿ ತಮ್ಮ ಊರುಗಳಲ್ಲೇ ಸಾಕಷ್ಟ್ಟು ಕೆಲಸದ ಅವಕಾಶಗಳನ್ನು ಕಲ್ಪಿಸಲಾಗುತ್ತಿದ್ದು, ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರು ಉದ್ಯೋಗಕ್ಕಾಗಿ ವಲಸೆ ಹೋಗದೆ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಇದಕ್ಕೂ ಪೂರ್ವದಲ್ಲಿ ಮದನೂರು ಗ್ರಾಮ ಪಂಚಾಯತಿಯಲ್ಲಿ ಆಯೋಜಿಸಿದ್ದ ಜಾಬ್ ಕಾರ್ಡ್ ಮೇಳದಲ್ಲಿ ಭಾಗವಹಿಸಿ, ಮಹಿಳೆಯರಿಗಾಗಿ ಯೋಜನೆಯಡಿ ಲಭ್ಯವಿರುವ ವಿಶೇಷ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ, ಯೋಜನೆಯ ಲಾಭ ಪಡೆದುಕೊಳ್ಳುವಂತೆ ಪ್ರೇರಣೆ ನೀಡಿದರು.

ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಮಂಜುನಾಥ್ ಆಗೇರ್, ಕಿರವತ್ತಿ ಗ್ರಾಪಂ ಪಿಡಿಒ ಶಿವರಾಜಕುಮಾರ ವಿರಕ್ತಮಠ, ಮದನೂರು ಗ್ರಾಪಂ ಪಿಡಿಒ ಹನುಮಂತ ಚಲವಾದಿ, ತಾಂತ್ರಿಕ ಸಂಯೋಜಕ ನಾರಾಯಣ ತವಣೋಜಿ, ಐಇಸಿ ಸಂಯೋಜಕ ಕಿರಣ ಜೋತೆಪ್ಪನವರ, ಡಿಇಒ ಶ್ರವಣ, ಬಿಎಫ್‍ಟಿ ವಿಠ್ಠು, ಜಿಕೆಎಮ್ ಹಾಗೂ ಕೂಲಿಕಾರರು ಉಪಸ್ಥಿತರಿದ್ದರು.

================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading