ಸಭಾಪತಿ ಸ್ಥಾನದಿಂದ ಕೆಳಗೆ ಇಳಿಸಿರುವ ಕ್ರಮ ಸಂವಿಧಾನಕ್ಕೆ ವಿರುದ್ಧವಾಗಿದ್ದು ಶಿಕ್ಷಕರ ಕ್ಷೇತ್ರದಿಂದ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಇಷ್ಟು ವರ್ಷಗಳ ಕಾಲ ಘನತೆಯಿಂದ ಕಾಪಾಡಿಕೊಂಡು ಬಂದಿರುವ ಗೌರವಕ್ಕೆ ದಕ್ಕೆ ಬಂದಿದ್ದು ನಿಜ, ಇದರಿಂದ ಮತ್ತೆ ಪುಟ್ಟಿದೆದ್ದು ಬಂದು ಇನ್ನೂ ಹೆಚ್ಚಿನ ಸಮಯ ಶಿಕ್ಷಕರ ಕ್ಷೇತ್ರದಲ್ಲಿ ಸೇವೆಯನ್ನು ಮಾಡಲು ಅವಕಾಶವನ್ನ ಪಡೆಯುವಂತಾಗಿದೆ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಯಲ್ಲಾಪುರ ಪಟ್ಟಣದ ಹೋಲಿ ರೋಜರಿ ಪ್ರೌಢಶಾಲೆಯ ಸಭಾಭವನದಲ್ಲಿ ನಡೆದ ತಾಲೂಕ ಮಟ್ಟದ ಮಾಧ್ಯಮಿಕ ನೌಕರರ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದರಿಂದಾಗಿ ಹೆಚ್ಚಿನ ಸಂಘಟನೆಯಲ್ಲಿ ಹಾಗೂ ಶಿಕ್ಷಕರಿಗಾಗಿ ಕಾರ್ಯ ಮಾಡಲು ಸಾಧ್ಯವಾಗಿದೆ. ಕಾಲ್ಪನಿಕ ವೇತನದ ಕುರಿತು ನ್ಯಾಯಾಂಗ ವ್ಯವಸ್ಥೆ ನೀಡಿರುವ ತೀರ್ಪನ್ನು ಅನುಸರಿಸಿ ಸರ್ಕಾರವನ್ನು ಈ ರಾಜ್ಯದಲ್ಲಿ ಒಪಿಎಸ್ ಜಾರಿ ಮಾಡುವಂತೆ ಒತ್ತಾಯಿಸುವುದರ ಮುಖ್ಯ ಉದ್ದೇಶವನ್ನು ಇಟ್ಟುಕೊಂಡು ಹಾಗೂ ಅನುದಾನಿತ ಶಾಲೆಗಳು ಕನ್ನಡ ಮಾಧ್ಯಮದ ಶಾಲೆಗಳ ಉಳಿವಿಗಾಗಿ ಸದಾ ಶ್ರಮಿಸಲು ಶಿಕ್ಷಕರ ಸಂಘಟನೆಗಳೊಂದಿಗೆ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ನಡೆಸಲು ಈಗಾಗಲೇ ತೀರ್ಮಾನಿಸಲಾಗಿದೆ.

ಕೆಪಿಎಸ್ ಶಾಲೆ ದ್ವಿಭಾಷೆ ಶಾಲೆಗಳನ್ನ ಪ್ರಾರಂಭಿಸುವ ಮೂಲಕ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನ ಅನುದಾನಿತ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸಿದೆ. ಆಡಳಿತ ಮಂಡಳಿ ಹಾಗೂ ಶಿಕ್ಷಕರ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ. ಈ ಕುರಿತು ಗಂಭೀರವಾದ ಪ್ರತಿಭಟನೆ ನಡೆಸುವುದರ ಮೂಲಕ ಸರ್ಕಾರವನ್ನು ಎಚ್ಚರಿಸಲಾಗುವುದು ಎಂದರು.

ಎಲ್ಲರೂ ಸದಸ್ಯರಾಗಿ ಕೇಂದ್ರ ಸಮಿತಿಯವರು ನೀಡುವ ಸೂಚನೆಯಂತೆ ಸಂಘಟನೆಯನ್ನು ಬಲಪಡಿಸಬೇಕು ಎಂದರು. ವೇದಿಕೆಯಲ್ಲಿ ತಾಲೂಕ ಮಾಧ್ಯಮಿಕ ನೌಕರ ಸಂಘದ ಅಧ್ಯಕ್ಷ ವಿನಾಯಕ ಹೆಗಡೆ ಕಾರ್ಯದರ್ಶಿ ಶರಣಬಸವ ಬೇವಿನಕಟ್ಟಿ

ಕೇಂದ್ರ ಸಮಿತಿಯ ವೀಕ್ಷಕರಾಗಿ ಆಗಮಿಸಿದ ಎಂ ರಾಜಶೇಖರ ಹಾಗೂ ತಾಲೂಕಿನ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕರು ತಮ್ಮ ಅಳಲುಗಳನ್ನು ಮಾಜಿ ಸಭಾಪತಿಗಳಲ್ಲಿ ನಿವೇದಿಸಿಕೊಂಡರು. ನಿವೃತ್ತಿ ಹೊಂದಿದ ಶಿಕ್ಷಕರು ತಮ್ಮ ಜೀವನದ ಸಂಕಷ್ಟಗಳನ್ನು ವಿವರಿಸಿದಾಗ ಮಾಜಿ ಸಭಾಪತಿಯವರು ಈ ಎಲ್ಲ ಸಮಸ್ಯೆಗಳಿಗೆ ಸದ್ಯದಲ್ಲಿ ಪರಿಹಾರಗಳನ್ನು ಸಂಘಟನೆಗಳ ಬಲಪಡಿಸುವುದರ ಮೂಲಕ ಕಂಡುಕೊಳ್ಳಲಾಗುವುದು ಎನ್ನುವ ಭರವಸೆಯನ್ನು ನೀಡಿದರು.

===================

Leave a Reply

You cannot copy content of this page