ಜಾಬ್ ಕಾರ್ಡ್ ಮೇಳ: ನಾಟಿ ಕೆಲಸದಲ್ಲಿದ್ದ ರೈತರಿಗೆ ಕರಪತ್ರ ವಿತರಣೆ
ಶಿರಸಿ: ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಭದ್ರತೆ ಹಾಗೂ ಗ್ರಾಮೀಣ ಜನರ ಜೀವನೋಪಾಯದ ಮಟ್ಟವನ್ನು ಬಲಪಡಿಸುವ ದೃಷ್ಟಿಯಿಂದ ವಿಬಿಜಿ ರಾಮ್ ಜಿ ಯೋಜನೆಯಡಿ “ಜಾಬ್ ಕಾರ್ಡ್ ಮೇಳ” ಕಾರ್ಯಕ್ರಮದಡಿ ಶುಕ್ರವಾರ ಜಾಗೃತಿ ಮೂಡಿಸಲಾಯಿತು.
ಶಿರಸಿ ತಾಲೂಕಿನ ಹುತ್ತಗಾರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೊಲದಲ್ಲಿ ನಾಟಿ ಕೆಲಸದಲ್ಲಿ ನಿರತರಾಗಿರುವ ರೈತರಿಗೆ ವಿಬಿಜಿ ರಾಮ್ ಜಿ ಯೋಜನೆ ಕುರಿತಾದ ಕರಪತ್ರಗಳನ್ನು ನೀಡಿ ಯೋಜನೆಯ ಸದುಪಯೋಗ ಪಡೆಯುವಂತೆ ಹಾಗೂ ಹೊಸ ಜಾಬ್ ಕಾರ್ಡ್ ಪಡೆಯುವುದು ಮತ್ತು ನವೀಕರಣ ಮಾಡಿಸಿಕೊಳ್ಳುವಂತೆ ಪಂಚಾಯತ್ ಕಾರ್ಯದರ್ಶಿ ತಿರುಮಲೇಶ್ ಹಾಗೂ ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ ಮಾಹಿತಿ ನೀಡಿದರು.
ವಿಬಿಜಿ ರಾಮ್ ಜಿ ಯೋಜನೆಯಡಿ ಜಲ ಸಂರಕ್ಷಣೆ, ಮೂಲಭೂತ ಸೌಕರ್ಯಗಳು, ಜೀವವನೋಪಾಯ ಹಾಗೂ ವಿಪತ್ತು ನಿರ್ವಹಣೆ ಕುರಿತಾದ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದ್ದು, ಆರ್ಥಿಕ ವರ್ಷದಲ್ಲಿ ರೂ.382 ಸಮಾನ ಕೂಲಿಯೊಂದಿಗೆ ಪುರುಷರು ಹಾಗೂ ಮಹಿಳೆಯರು 125 ದಿನಗಳ ಕೆಲಸ ಪಡೆಯಬಹುದು ಎಂದು ಅರಿವು ಮೂಡಿಸಿ, ಯೋಜನೆಯಡಿ ಹೊಸ ಜಾಬ್ ಕಾರ್ಡ್ ಪಡೆಯುವವರು ಗ್ರಾಮ ಪಂಚಾಯತ್ಗೆ ಸಂಬಂಧಿಸಿದ ದಾಖಲೆಗಳನ್ನು ನೀಡಿ ಜಾಬ್ ಕಾರ್ಡ್ ಪಡೆಯಬೇಕು. ಹಾಗೂ ಸಾರ್ವಜನಿಕ ಕಾಮಗಾರಿಗಳಲ್ಲಿ ಹೆಚ್ಚು ಹೆಚ್ಚು ಕೂಲಿಕಾರರು ಪ್ರಯೋಜನ ಪಡೆಯುವಂತೆ ತಿಳಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಮಧುಕರ್, ಅನಿಲ್, ಗಜೇಂದ್ರ, ರಾಜೇಶ್ವರಿ ಹಾಗೂ ಕೃಷಿ ಸಖಿ ಹಾಜರಿದ್ದರು.