ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಶನಿವಾರ ಬೆಳಿಗ್ಗೆ ಕೆ.ಎಸ್.ಆರ್.ಟಿ. ಬಸ್ ಹಾಗೂ ಮಿನಿ ಬಸ್ ನಡುವೆ ನಡೆದ ಅಪಘಾತದಲ್ಲಿ 11 ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ.

ಶನಿವಾರ ಬೆಳಿಗ್ಗೆ ಭಟ್ಕಳದಿಂದ ರಾಯಭಾಗಕ್ಕೆ ಹೋಗುತ್ತಿದ್ದ ಸಾರಿಗೆ ಬಸ್ಸು ಅರಬೈಲ್ ಘಟ್ಟದ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ, ಅರಬೈಲ್ ಘಟ್ಟದ ಶೀರ್ಲೆ ಫಾಲ್ಸ್ ಕ್ರಾಸ್ ಸಮೀಪ ಎದುರಿನಿಂದ ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಬಂದ ಮಿನಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಮಿನಿ ಬಸ್ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಹೋಗುತ್ತಿತ್ತು. ಮಿನಿ ಬಸ್ ಸಾರಿಗೆ ಬಸ್ಸಿನ ಬಲಬದಿಯ ಭಾಗಕ್ಕೆ ಡಿಕ್ಕಿಯಾಗಿದೆ.

ಈ ಅಪಘಾತದಲ್ಲಿ ಸಾರಿಗೆ ಬಸ್ಸಿನ ಚಾಲಕ ಸಹದೇವಪ್ಪಾ ದೇಸಾಯಿ, ನಿರ್ವಾಹಕ ಮಹೇಶ, ಬಸ್ಸಿನಲ್ಲಿದ್ದ ಹೊನ್ನಾವರದ ಲಕ್ಷ್ಮಣ ನಾಯ್ಕ, ಕುಮಟಾದ ಕೇವಲರಾಮ ಪಟೇಲ್, ಗುಳ್ಳಾಪುರದ ಕುಸುಮಾ ಹುರಳಿಕೊಪ್ಪ ಹಾಗೂ ಮಿನಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಾರಾಷ್ಟ್ರದ ನಿತೀಶ ನಾಗೇಶ ಬಂಡ, ಅಶ್ವಿನಿ ನಿತೀಶ ಬಂಡ,

ವಿಟ್ಠಲ ಜಾಧವ, ಅನ್ನಪೂರ್ಣಾ ಜಾಧವ,ಪ್ರನಯ ಲಂಜುವಾಲಾ, ಮಿನಿ ಬಸ್ ಚಾಲಕ ಕೈಲಾಶ್ ರಾಥೋಡ ಅವರಿಗೆ ಗಾಯವಾಗಿದೆ. ಗಾಯಾಳುಗಳನ್ನು ಯಲ್ಲಾಪುರ ಸರ್ಕಾರಿ ಅಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಆರೋಪಿ ಮಿನಿ ಬಸ್ ಚಾಲಕ ಮಹಾರಾಷ್ಟ್ರ ರಾಜ್ಯದ ಪುಣೆ, ತೆರೆಗಾಂವ್ ದಾಬಾಡಿಯ ಕೈಲಾಶ್ ರಾಥೋಡ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತದ ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿನೀಡಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಹೆದ್ದಾರಿಯಲ್ಲಿ ಕೆಲವು ಕಾಲ ವಾಹನ ಸಂಚಾರ ಸ್ಥಗಿತವಾಗಿತ್ತು. ನಂತರ ಪೊಲೀಸರು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.


Leave a Reply

You cannot copy content of this page