ಯಲ್ಲಾಪುರ ಪಟ್ಟಣದ ರವೀಂದ್ರನಗರದಲ್ಲಿ ಕಳೆದ ಆರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಆಯುಷ್ಮಾನ್ ಭಾರತ ಆರೋಗ್ಯ ಕೇಂದ್ರವನ್ನು ಸರ್ಕಾರದ ಆದೇಶದಂತೆ ಸ್ಥಗಿತಗೊಳಿಸಲಾಗಿದೆ. ಅ.1ರಿಂದ ಈ ಆರೋಗ್ಯಕೇಂದ್ರ ಬಾಗಿಲು ಮುಚ್ಚಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಈ ಕೇಂದ್ರವನ್ನು ಪುನಃ ಆರಂಭಗೊಳಿಸಬೇಕು, ಸ್ಥಗಿತಗೊಳಿಸಬಾರದು ಎಂದು ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಸೋಮೇಶ್ವರ ನಾಯ್ಕ ಆಗ್ರಹಿಸಿದ್ದಾರೆ.

ರವೀಂದ್ರ ನಗರದ ಸಾರ್ವಜನಿಕರೂ ಸಹ ಈ ಆರೋಗ್ಯ ಕೇಂದ್ರವನ್ನು ಸ್ಥಗಿತಗೊಳಿಸದಿರಲು ಒತ್ತಾಯಿಸಿದ್ದಾರೆ. ಶನಿವಾರ ರವೀಂದ್ರ ನಗರದಲ್ಲಿ ಆರೋಗ್ಯ ಕೇಂದ್ರದ ಎದುರು ಈ ಕುರಿತು ಅವರು ಆಗ್ರಹಿಸಿದರು. ಸೋಮೇಶ್ವರ ನಾಯ್ಕ ಮಾತನಾಡಿ, ರವೀಂದ್ರನಗರ ಪ್ರದೇಶವು ಹಿಂದುಳಿದ ಪ್ರದೇಶವಾಗಿದ್ದು, ಇಲ್ಲಿ ಬಡವರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಇಲ್ಲಿನ ಜನರು ಅನಾರೋಗ್ಯಪೀಡಿತರಾದಾಗ ಸರ್ಕಾರಿ ಆಸ್ಪತ್ರೆ ಹೋಗಲು ಇಲ್ಲಿಂದ ದೂರವಾಗುತ್ತದೆ, ಚಿಕಿತ್ಸೆಗಾಗಿ ಬಾಡಿಗೆ ವಾಹನದಲ್ಲಿ ಹೋಗಬೇಕೆಂದರೆ ಬಾಡಿಗೆ ಹಣ ಭರಿಸಲು ಬಡವರಿಗೆ ಕಷ್ಟವಾಗುತ್ತದೆ. ಇಲ್ಲಿ ಅಂಬ್ಯೂಲೆನ್ಸ್ ಸಹ ಬರುವುದಿಲ್ಲ.

ಇಲ್ಲಿರುವ ಆಯುಷ್ಮಾನ್ ಆರೋಗ್ಯ ಕೇಂದ್ರವನ್ನು ಸ್ಥಗಿತಗೊಳಿಸಬಾರದು ಎಂದು ಈಗಾಗಲೇ ತಹಶೀಲ್ದಾರ್ ಅವರಿಗೆ, ತಾಲೂಕಾ ಆರೋಗ್ಯಾಧಿಕಾರಿಯವರಿಗೆ ಮನವಿಯನ್ನೂ ನೀಡಲಾಗಿದೆ. ಇಲ್ಲಿನ ಜನರಿಗೆ ಅನುಕೂಲ ಕಲ್ಪಿಸುವ ಈ ಆರೋಗ್ಯ ಕೇಂದ್ರವನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಇದು ಇಲ್ಲಿಯೇ ಮುಂದುವರಿಯಬೇಕು ಎಂದು ಅವರು ಆಗ್ರಹಿಸಿದರು. ಸ್ಥಳೀಯ ನಿವಾಸಿಗಳು ಮಾತನಾಡಿ, ಇಲ್ಲಿನ ಸುತ್ತಮುತ್ತಲಿನ ನಿವಾಸಿಗಳಿಗೆ ಈ ಆರೋಗ್ಯ ಕೇಂದ್ರದಿಂದ ಬಹಳ ಅನುಕೂಲವಾಗುತ್ತಿದೆ ಎಂದರು.

=====================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading