





ನದಿ ತಿರುವು ಯೋಜನೆ ವಿರೋಧಿಸಿ ನ.3ರಂದು ಯಲ್ಲಾಪುರದಲ್ಲಿ ಬೃಹತ್ ರಸ್ತಾ ರೋಖೊಗೆ ಸಿದ್ಧತೆ

ನದಿ ಜೋಡಣೆ ಯೋಜನೆ ವಿರೋಧಿಸಿ ನವೆಂಬರ್ 3 ರಂದು ಪಟ್ಟಣದಲ್ಲಿ ಹಮ್ಮಿಕೊಂಡಿರುವ ಬೃಹತ್ ರಸ್ತಾ ರೋಖೊ ಸಿದ್ಧತೆಗಾಗಿ ರಸ್ತೆ ತಡೆ ಸಂಚಾಲನಾ ಸಮಿತಿಯ ಪೂರ್ವಭಾವಿ ಸಭೆ ಟಿಎಂಎಸ್ ಸಭಾಭವನದಲ್ಲಿ ಸಮಿತಿ ಅಧ್ಯಕ್ಷ ಎನ್.ಕೆ ಭಟ್ಟ ಅಗ್ಗಾಶಿಕುಂಬ್ರಿ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನದಿ ಉಳಿವಿನ ಹೋರಾಟ ಕೇವಲ ಎರಡು-ಮೂರು ತಾಲೂಕುಗಳಿಗೆ ಸೀಮಿತವಾಗಬಾರದು. ಇಡೀ ಜಿಲ್ಲೆಯ ಜನ ಭಾಗವಹಿಸುವಂತಾಗಬೇಕು. ಜಾತಿ, ಮತ, ಪಕ್ಷ ಬೇಧ ಮರೆತು ಜಿಲ್ಲೆಯ ಉಳಿವಿಗಾಗಿ ಜಿಲ್ಲೆಯ ಜನರು ಒಂದಾಗಬೇಕು. ದೊಡ್ಡ ಪ್ರಮಾಣದಲ್ಲಿ ಜನ ಸೇರಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವಂತಾಗಬೇಕು.ಪಕ್ಷ ಬೇಧವಿಲ್ಲದೇ ಎಲ್ಲಾ ಸ್ಥರದ ಜನಪ್ರತಿನಿಧಿಗಳು ನಮ್ಮೊಂದಿಗೆ ಕೈಜೋಡಿಸಬೇಕು ಎಂದರು.

ಪ್ರಧಾನ ಸಂಚಾಲಕ ಹರಿಪ್ರಕಾಶ ಕೋಣೆಮನೆ ಮಾತನಾಡಿ, ನದಿ ಜೋಡಣೆಯಿಂದ ಜಿಲ್ಲೆಯ ಪರಿಸರದ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು. ನದಿ ಉಳಿವಿಗಾಗಿ ಜನರು ಸ್ವಯಂ ಪ್ರೇರಿತರಾಗಿ ಹೋರಾಟದಲ್ಲಿ ಭಾಗವಹಿಸುವಂತಾಗಬೇಕು.
ಜನಪ್ರತಿನಿಧಿಗಳು ಬಂದು ಪೆÇಳ್ಳು ಭರವಸೆ ನೀಡಿದರೆ ಸಾಲದು. ಅವರು ಯೋಜನೆಯನ್ನು ತಡೆಯುವ ವಿಚಾರದಲ್ಲಿ ಬದ್ಧತೆಯನ್ನು ತೋರಿಸಿ ಪಾಲ್ಗೊಳ್ಳಬೇಕು.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪ್ರತಿನಿಧಿಗಳು ಬಂದು ನಮ್ಮ ಹೋರಾಟಕ್ಕೆ ಸ್ಪಂದಿಸುವವರೆಗೆ ರಸ್ತೆ ತಡೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ ಅವರು ಈ ಹೋರಾಟದ ಮೂಲಕ ಸರ್ಕಾರಕ್ಕೆ ಪಕ್ಷಾತೀತವಾಗಿ ಒಗ್ಗಟ್ಟಿನ ಸ್ಪಷ್ಟ ಸಂದೇಶ ನೀಡೋಣ.ನಮಗೆ ಜಿಲ್ಲೆಯ ಉಳಿವು ಮುಖ್ಯ.ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂದರು.
ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ಮನೆ ಮನೆಗೆ ಹೋರಾಟದ ಬಗ್ಗೆ ಮಾಹಿತಿ ತಲುಪಿಸಿ, ರಸ್ತೆ ತಡೆಯಲ್ಲಿ ಹೆಚ್ಚಿನ ಜನ ಭಾಗವಹಿಸುವಂತೆ ಮಾಡುವ ಹೊಣೆಯನ್ನು ತಾಲೂಕಾ ಸಂಚಾಲಕರು ಇನ್ನಿತರ ಪ್ರಮುಖರಿಗೆ ನೀಡಿ ರೂಪುರೇಷೆ ಬಗ್ಗೆ ಚರ್ಚಿಸಲಾಯಿತು. ಜನ ಸಂಪರ್ಕಕ್ಕಾಗಿ ಪಟ್ಟಣದಲ್ಲೂ ಪ್ರಮುಖರ ಸಮಿತಿ ರಚಿಸಿ ಕಾರ್ಯತತ್ಪರತೆಗೆ ಚರ್ಚಿಸಲಾಯಿತು. ರಸ್ತೆ ತಡೆ ಹೋರಾಟಕ್ಕೆ ಅಗತ್ಯವಾದ ಖರ್ಚು ವೆಚ್ಚಗಳನ್ನು ಹೊಂದಿಸಲು ಆರ್ಥಿಕ ಸಮಿತಿ,ಪ್ರಚಾರಕ್ಕಾಗಿ ಮಾದ್ಯಮ ಸಮಿತಿ,ಸೇರಿದಂತೆ ವಿವಿಧ ಸಮಿತಿಗಳನ್ನೂ ರಚಿಸಲಾಯಿತು. ಹೋರಾಟದ ರೂಪುರೇಷೆಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಸಮಿತಿಯ ಸಂಚಾಲಕರಾದ ರಾಘವೇಂದ್ರ ಭಟ್ಟ, ಎಂ.ಆರ್ ಹೆಗಡೆ ಕುಂಬ್ರಿಗುಡ್ಡೆ, ಎಂ.ಆರ್.ಹೆಗಡೆ ತಾರೆಹಳ್ಳಿ ರವಿ ಹೆಗಡೆ, ಶ್ರೀರಾಮ ಲಾಲಗುಳಿ, ನಾರಾಯಣ ಸುರ್ಗಿಮನೆ, ಸುಬ್ಬಣ್ಣ ಬೋಳ್ಮನೆ, ವೆಂಕಟರಮಣ ಭಟ್ಟ ಕಿರಕುಂಭತ್ತಿ, ವಿ.ಟಿ ಹೆಗಡೆ, ಕೆ.ಟಿ.ಹೆಗಡೆ, ಎಂ.ಕೆ ಭಟ್ಟ ಯಡಳ್ಳಿ, ಭಾಸ್ಕರ ಸಿದ್ದಿ, ಮಹೇಶ ಕುಣಬಿ, ಸಂತೋಷ ಭಟ್ಟ ಹಳವಳ್ಳಿ, ವಿನೋದ ಭಟ್ಟ, ರಘುಪತಿ ಹೆಗಡೆ, ಸುಬ್ಬಣ್ಣ ಉದ್ದಾಬೈಲ, ಎನ್.ಜಿ ಹೆಗಡೆ ಭಟ್ರಕೇರಿ, ನಾರಾಯಣ ಭಟ್ಟ ಶಿರವಳ್ಳಿ, ನಾರಾಯಣ ಹೆಗಡೆ ಕಲ್ಲೇಶ್ವರ,ದತ್ತಾತ್ರಯ ಹೆಗಡೆ ಕಣ್ಣಿಪಾಲ್,ಪುರಂದರ ನಾಯ್ಕ ರಘುಪತಿ ಕಂಪ್ಲಿ,ರಾಘು ಭಟ್ಟ ಸುಂಕಸಾಳ ಸಲಹೆ ಸೂಚನೆ ನೀಡಿದರು.ಕೊಳ್ಳ ಸಂರಕ್ಷಣಾ ಸಮಿತಿಯ ಸಂಚಾಲಕ ನರಸಿಂಹ ಸಾತೊಡ್ಡಿ ನಿರ್ವಹಿಸಿ ವಂದಿಸಿದರು.

================















