ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕಾ ಘಟಕದ ವತಿಯಿಂದ ಯಲ್ಲಾಪುರ ಪಟ್ಟಣದ ರೈತಭವನದಲ್ಲಿ ರವಿವಾರ ಓಪನ್ ರ‍್ಯಾಪಿಡ್ ಚೆಸ್ ಪಂದ್ಯಾವಳಿ ನಡೆಯಿತು.
ಸಾಮಾಜಿಕ ಕಾರ್ಯಕರ್ತ ಜಿ.ಆರ್.ಹೆಗಡೆ ಕುಂಬ್ರಿಗುಡ್ಡೆ ಪಂದ್ಯಾವಳಿಯನ್ನು ಉದ್ಘಾಟಿಸಿ ಶುಭಕೋರಿದರು. ಸಂಘಟನೆಯ ತಾಲೂಕಾ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲರ ಸಹಕಾರದಿಂದ ನಾಲ್ಕನೇ ವರ್ಷದ ಚೆಸ್ ಪಂದ್ಯಾವಳಿ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲು ಬಹಳ ಸಂತೋಷವೆನಿಸುತ್ತದೆ ಎಂದರು.
ಸನ್ಮಾನಿತರ ಪರವಾಗಿ ಪ್ರವಾಸೋದ್ಯಮಿ, ಯು.ಕೆ.ನೇಚರ್ ಸ್ಟೇ ಮಾಲೀಕ ನಿರಂಜನ ಭಟ್ಟ ಮಾತನಾಡಿ, ನಮ್ಮ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ನೀಡಬೇಕಿದೆ, ನಮ್ಮ ಜಿಲ್ಲೆಯಲ್ಲಿ ಎಲ್ಲ ಪ್ರವಾಸೋದ್ಯಮ ತಾಣಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಮುಂದಾಗಬೇಕು, ಪ್ರವಾಸೋದ್ಯಮ ಬೆಳೆದರೆ ಅಭಿವೃದ್ಧಿಗೆ ಜಿಲ್ಲೆಯ ಇನ್ನಷ್ಟು ವೇಗ ದೊರಕಿದಂತಾಗುತ್ತದೆ ಎಂದರು. ನಮ್ಮನ್ನು ಗುರುತಿಸಿ ಸನ್ಮಾನಿಸಿರುವುದು ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದಂತಾಗಿದೆ ಎಂದು ಅನಿಸಿಕೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಯುವಜನ ಸೇವಾಕ್ರೀಡಾಧಿಕಾರಿ ಚಂದ್ರಹಾಸ ನಾಯ್ಕ, ಪ್ರಮುಖರಾದ ಶೇಖರ ಎರಿಗೇರಿ, ಸಿ.ಎಸ್.ಹೆಗಡೆ, ಸಂಜೀವಕುಮಾರ ಹೊಸ್ಕೇರಿ ಇದ್ದರು.