





ಪದವೀಧರರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಶಿಕ್ಷಕ ಸುರೇಶ ಗೌಡ ಆಯ್ಕೆ

ಕರ್ನಾಟಕ ರಾಜ್ಯ ಪದವೀಧರರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಯಲ್ಲಾಪುರ ತಾಲೂಕಿನ ಬೀಗಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸುರೇಶ ಗೌಡ ಆಯ್ಕೆಯಾಗಿದ್ದಾರೆ.

ಸಂಘದ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಸುರೇಶ ಗೌಡ ಅವರು ಬಹುಮತದಿಂದ ಆಯ್ಕೆಯಾಗಿದ್ದಾರೆ. ಮುಂದಿನ ಐದು ವರ್ಷದ ಅವಧಿಗೆ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.
ಕ್ರಿಯಾಶೀಲ ಶಿಕ್ಷಕ ಸುರೇಶ ಗೌಡ

ಕಳೆದ ಅನೇಕ ವರ್ಷಗಳಿಂದ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಸುರೇಶ ಗೌಡ ಅವರು ತಾಲೂಕಿನ ಕ್ರಿಯಾಶೀಲ ಶಿಕ್ಷಕರೆಂದು ಗುರುತಿಸಿಕೊಂಡಿದ್ದಾರೆ. ಮೂಲತಃ ಯಲ್ಲಾಪುರ ತಾಲೂಕಿನ ನಂದೊಳ್ಳಿಯ ನಾಗಪ್ಪ ಗೌಡ ಮತ್ತು ಲಕ್ಷ್ಮೀ ಗೌಡ ದಂಪತಿಯ ಪುತ್ರರಾದ ಸುರೇಶ ಗೌಡ ಅವರು, ಪ್ರಸ್ತುತ ತಾಲೂಕಿನ ಬೀಗಾರ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಕ್ಕಳ ಕಲಿಕಾ ಪ್ರಗತಿಗೆ ಮತ್ತು ಸರ್ವಾಂಗೀಣ ಪ್ರಗತಿಗೆ ನಿರಂತರವಾಗಿ ಶ್ರಮಿಸುತ್ತಿರುವ ಸುರೇಶ ಗೌಡ ಅವರು, ಸಾಹಿತ್ಯ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಾಜ್ಯ ಮಟ್ಟದ ಕ್ವಿಜ್ ಮಾಸ್ಟರ್ ಆಗಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಇವರು ವಾಯ್.ಟಿ.ಎಸ್.ಎಸ್. ಹಾಗೂ ಮೊರಾರ್ಜಿ ದೇಸಾಯಿ ಶಾಲೆ ಮತ್ತು ವಿಶ್ವದರ್ಶನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದಾರೆ.
ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಅನೇಕ ಕಾರ್ಯಾಗಾರಗಳಲ್ಲಿ ಸುರೇಶ ಗೌಡ ಅವರು ಭಾಗವಹಿಸಿದ್ದಾರೆ. ಹಲವು ಪ್ರಶಸ್ತಿ, ಪುರಸ್ಕಾರ, ಬಹುಮಾನಗಳಿಗೆ ಭಾಜನರಾಗಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ತರಬೇತುದಾರರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಇ-ಕಲಿಕೆಯಲ್ಲಿಯೂ ಮಕ್ಕಳಿಗೆ ಪಾಠಮಾಡುವ ಸುರೇಶ ಗೌಡ ಅವರು ಸಿಲ್ವರ್ ಟೀಚರ್ ಎಂಬ ಪ್ರಮಾಣ ಪತ್ರವನ್ನು ಪಡೆದಿರುವುದು ವಿಶೇಷವಾಗಿದೆ. ಇವರ ಮಾರ್ಗದರ್ಶನದಲ್ಲಿ ಅನೇಕ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.
ತಮ್ಮ ಸರಳ ನಡೆ,ನುಡಿಯ ಮೂಲಕ ಸುರೇಶ ಗೌಡ ಅವರು, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿ ಗುರುತಿಸಿಕೊಂಡಿದ್ದಾರೆ. ಪಾಲಕರ, ಪೋಷಕರ, ಸಾರ್ವಜನಿಕರ ಮೆಚ್ಚುಗೆ ಪಡೆದಿದ್ದಾರೆ.
ಅಭಿನಂದನೆ
ಪದವೀಧರರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಶಿಕ್ಷಕ ಸುರೇಶ ಗೌಡ ಅವರಿಗೆ ಇನ್ನಷ್ಟು ಹೆಚ್ಚಿನ ಯಶಸ್ಸು ಲಭಿಸಲಿ ಎಂದು ಶಿಕ್ಷಕ ವೃಂದದವರು, ಸುರೇಶ ಗೌಡರ ಸ್ನೇಹಿತರ ಬಳಗದವರು, ಬೀಗಾರ ಶಾಲೆಯ ಶಿಕ್ಷಕರು, ಎಸ್.ಡಿ.ಎಂ.ಸಿ. ಸಮೀತಿಯವರು, ವಿದ್ಯಾರ್ಥಿಗಳು ಹಾಗೂ ಬೀಗಾರ ಗ್ರಾಮಸ್ಥರು ಮತ್ತು ನಂದೊಳ್ಳಿ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿ, ಶುಭ ಕೋರಿದ್ದಾರೆ.

======================















